ದಾವಣಗೆರೆ: ನಿರ್ಮಾಣ ಹಂತದ ಕಟ್ಟಡದ ಪಿಲ್ಲರ್ ಕುಸಿದು ಮೂವರ ಸಾವು; 6 ಜನರಿಗೆ ಗಾಯ
Davanagere News: ದುರ್ಘಟನೆಯಲ್ಲಿ 6 ಜನರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ದಾವಣಗೆರೆ: ನಿರ್ಮಾಣ ಹಂತದ ಕಟ್ಟಡದ ಪಿಲ್ಲರ್ ಕುಸಿದು ಮೂವರು ಸಾವನ್ನಪ್ಪಿದ ದುರ್ಘಟನೆ ದಾವಣಗೆರೆ ಬಳಿಯ ಕುಕ್ಕವಾಡ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದೆ. ಶಾಮನೂರು ಶಿವಶಂಕರಪ್ಪ ಕುಟುಂಬದ ಒಡೆತನದ ಕಾರ್ಖಾನೆಯಲ್ಲಿ ಸಾವು ಘಟಿಸಿದೆ. ಎಥನಾಲ್ ಘಟಕಕ್ಕೆ ನಿರ್ಮಿಸುತ್ತಿದ್ದ ಕಟ್ಟಡದ ಪಿಲ್ಲರ್ ಕುಸಿತಗೊಂಡಿದೆ. ಈ ದುರ್ಘಟನೆಯಲ್ಲಿ 6 ಜನರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೊಪ್ಪಳ, ರಾಯಚೂರು ಮೂಲದ ಮೂವರು ಕಾರ್ಮಿಕರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಮಾನಪ್ಪ (35), ಬಸಪ್ಪ (40), ಮಜೀದ್ (22) ಮೃತ ದುರ್ದೈವಿಗಳು. ರಾಯಚೂರು ಮೂಲದ ಅಂಬರೀಶ್, ರಮೇಶ್, ಸಂತೋಷ್, ಕೋಲ್ಕತ್ತಾದ ಮಿಲನ್ ಸ್ಥಿತಿ ಗಂಭೀರವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಾಮನೂರು ಶಿವಶಂಕರಪ್ಪನವರ ಹಿರಿಯ ಪುತ್ರ ಎಸ್.ಎಸ್. ಗಣೇಶ್ಗೆ ಸೇರಿದ ಸಕ್ಕರೆ ಕಾರ್ಖಾನೆ ಕಟ್ಟಡ ಇದಾಗಿದೆ.
ಕಲಬುರಗಿ: 4 ವರ್ಷದ ಪುತ್ರಿ ಕೊಲೆಗೈದು ತಂದೆ ಆತ್ಮಹತ್ಯೆ ನಾಲ್ಕು ವರ್ಷದ ಪುತ್ರಿಯನ್ನು ಕೊಲೆಗೈದು ತಂದೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಪ್ಪಾರವಾಡಿಯಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿ ತಂದೆಯಿಂದ ಈ ಕೃತ್ಯ ಘಟಿಸಿದೆ ಎಂದು ಹೇಳಲಾಗಿದೆ. ಹೊಲದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಪೂನಮ್ (4) ಎಂಬಾಕೆಯನ್ನು ಕೊಲೆ ಮಾಡಲಾಗಿದೆ. ಬಳಿಕ ಮರಕ್ಕೆ ನೇಣುಬಿಗಿದುಕೊಂಡು ಅರ್ಜುನ್ (26) ಸಾವನ್ನಪ್ಪಿದ್ದಾರೆ. ತಂದೆ ಕೌಟುಂಬಿಕ ಕಲಹದಿಂದ ಬೇಸತ್ತು ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ತುಮಕೂರು: ಬೀದಿ ನಾಯಿ ಕಚ್ಚಿ 10 ಕುರಿಗಳ ಸಾವು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ತಿಮ್ಮನಹಳ್ಳಿಯಲ್ಲಿ ಬೀದಿ ನಾಯಿ ಕಚ್ಚಿ 10 ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ರೈತ ತಿಮ್ಮಣ್ಣನಿಗೆ ಸೇರಿದ 1 ಲಕ್ಷ ಮೌಲ್ಯದ ಕುರಿ ಸಾವನ್ನಪ್ಪಿದೆ. ಸ್ಥಳಕ್ಕೆ ಪಶು ವೈದ್ಯರು ಹಾಗೂ ಕಂದಾಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೈಸೂರು: ಐವರು ಕಳ್ಳರ ಬಂಧನ ಸರಗಳ್ಳತನ ಹಾಗೂ ಬೈಕ್ ಕಳ್ಳತನ ಮಾಡ್ತಿದ್ದ ಐವರು ಕಳ್ಳರನ್ನು ಬಂಧಿಸಲಾಗಿದೆ. ಮೈಸೂರಿನ ಸಿಸಿಬಿ ಪೊಲೀಸರಿಂದ ಐವರು ಆರೋಪಿಗಳ ಸೆರೆಯಾಗಿದೆ. 100 ಗ್ರಾಂ ಚಿನ್ನಾಭರಣ ಹಾಗೂ 10 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಮೈಸೂರಿನ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದರು. ಇದೀಗ ಆರೋಪಿಗಳನ್ನು ಸೆರೆಹಿಡಿಯಲಾಗಿದೆ.
ಇದನ್ನೂ ಓದಿ: ಗದಗ: ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆಗೆ ಶರಣು
ಇದನ್ನೂ ಓದಿ: ಕಾರು ಅಪಘಾತದಲ್ಲಿ ಮಿಸ್ ಕೇರಳ 2019 ವಿಜೇತೆ ಆನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಶಾಜನ್ ದುರ್ಮರಣ
Published On - 6:05 pm, Thu, 4 November 21