ಬೆಂಗಳೂರು ಫ್ರೀಡಂ ಪಾರ್ಕ್ ಕ್ಲೋಸ್, ಹೋರಾಟಗಾರರ ಪರದಾಟ: ಕಾರಣ ಏನು ಗೊತ್ತೇ?

ಫ್ರೀಡಂ ಪಾರ್ಕ್​​ನಲ್ಲಿ ಒಂದು ಕಡೆ ಅಭಿವೃದ್ಧಿ ಕಾರ್ಯ, ಮತ್ತೊಂದು ಕಡೆ ಸೌಕರ್ಯಗಳು ಇಲ್ಲದೇ ಪ್ರತಿಭಟನಾಕಾರರು ಒದ್ದಾಡುವಂತಾಗಿದೆ. ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ಮಾಡುವುದಕ್ಕೆ ಬರುವವರಿಗೆ ಕಷ್ಟ ಆಗಿದೆ. ಇವೆಲ್ಲದರ ಮಧ್ಯೆ ಇದೀಗ ಫ್ರೀಡಂ ಪಾರ್ಕ್​ ಅನ್ನು ಬಂದ್ ಮಾಡಲಾಗಿದೆ. ಅಂದಹಾಗೆ ಈ ಕ್ರಮ ಯಾಕೆ? ಕಾರಣ ಇಲ್ಲಿದೆ.

ಬೆಂಗಳೂರು ಫ್ರೀಡಂ ಪಾರ್ಕ್ ಕ್ಲೋಸ್, ಹೋರಾಟಗಾರರ ಪರದಾಟ: ಕಾರಣ ಏನು ಗೊತ್ತೇ?
ಫ್ರೀಡಂ ಪಾರ್ಕ್
Updated By: Ganapathi Sharma

Updated on: Dec 04, 2025 | 6:47 AM

ಬೆಂಗಳೂರು, ಡಿಸೆಂಬರ್ 4: ಕರ್ನಾಟಕದ ಎಲ್ಲೆಡೆಯಿಂದ ರಾಜಧಾನಿ ಬೆಂಗಳೂರಿಗೆ (Bengaluru) ಬಂದು ಹೋರಾಟಗಾರರು ಹೋರಾಟ ಮಾಡುವ ಏಕೈಕ ಜಾಗ ಅದು. ಅಂಥ ಫ್ರೀಡಂ ಪಾರ್ಕ್‌ ಅನ್ನು ಈಗ ಬಂದ್ ಮಾಡಲಾಗಿದೆ. ಹೌದು, ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆ ತಾತ್ಕಾಲಿಕವಾಗಿ ಫ್ರೀಡಂ ಪಾರ್ಕ್‌ ಬಂದ್ ಮಾಡಲಾಗಿದೆ. 22 ಎಕರೆ ಜಾಗದಲ್ಲಿ ವ್ಯಾಪಿಸಿರುವ ಫ್ರೀಡಂ ಪಾರ್ಕ್ ಅನ್ನು ಒಳಗಿನಿಂದ ಬಂದ್ ಮಾಡಲಾಗಿದೆ. ಸಾರ್ವಜನಿಕರಿಗೆ ಅವಕಾಶ ನಿಷೇಧ ಹೇರಲಾಗಿದೆ. ಹೀಗಾಗಿ ಇದೀಗ ಪ್ರತಿಭಟನಾಕಾರರು ಫ್ರೀಡಂ ಪಾರ್ಕ್ ಹೊರಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲಿಯೂ ಪ್ರತಿಭಟನೆಗೂ ಅವಕಾಶ ಕೊಡದಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ.

ಬ್ರ್ಯಾಂಡ್ ಬೆಂಗಳೂರು ಹೆಸರಿನಡಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಿಂದ ಫ್ರೀಡಂ ಪಾರ್ಕ್​​ನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಫ್ರೀಡಂ ಪಾರ್ಕ್​​ನಲ್ಲಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ನಂತರ ಹೋರಾಟಗಾರರು, ನಡಿಗೆದಾರರು, ಪ್ರತಿಭಟನೆ, ಚಿತ್ರೀಕರಣ, ಸಾರ್ವಜನಿಕರಿಗೆ ಇತರೆ ಉದ್ದೇಶಗಳಿಗೆ ಅವಕಾಶ ಕಲ್ಪಿಸಲು ತೀರ್ಮಾನ ಮಾಡಲಾಗಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಿಂದ 5 ಕೋಟಿ ರೂ ವೆಚ್ಚದಲ್ಲಿ ಶೌಚಾಲಯ, ಹೋರಾಟಗಾರರಿಗೆ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿ ತೀವ್ರಗತಿಯಿಂದ ಸಾಗಿದೆ. ಇದೀಗ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ನೀರಿನ ಸೌಲಭ್ಯವೂ ಸಹ ಇಲ್ಲವಾಗಿದೆ. ಇಲ್ಲಿ ಶಾಶ್ವತ ಕಾಮಗಾರಿ ಪೂರ್ಣಗೊಳ್ಳುವವರೆಗೆ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನೀಡುವುದನ್ನು ನಿಲ್ಲಿಸಲು ಮನವಿ ಮಾಡಲಾಗಿದೆ. ಇದೇ ವಾರದಲ್ಲಿ ಪ್ರತಿಭಟನೆಗೆ ಅವಕಾಶ ಕೊಡದಿರಲು ಚಿಂತನೆ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ನಡಿಗೆದಾರರು, ಫ್ರೀಡಂ ಪಾರ್ಕ್ ಕ್ಲೋಸ್ ಮಾಡಿದ್ದರಿಂದ ನಮಗೆ ವಾಕ್ ಮಾಡಲು ಆಗುತ್ತಿಲ್ಲ. ಇದರಿಂದ ತುಂಬಾ ಸಮಸ್ಯೆ ಆಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ

ಒಟ್ಟಿನಲ್ಲಿ, ಈಗಾಗಲೇ ಅಭಿವೃದ್ಧಿ ಕಾಮಗಾರಿಗಾಗಿ ಫ್ರೀಡಂ ಪಾರ್ಕ್ ಕ್ಲೋಸ್ ಮಾಡಲಾಗಿದೆ. ಇದರಿಂದ ಹೋರಾಟಗಾರಿಗೆ ಸಮಸ್ಯೆ ಆಗುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಮುಗಿಸಿ ಪಾರ್ಕ್ ಓಪನ್ ಮಾಡಲಿ ಎಂಬ ಆಗ್ರಹ ವ್ಯಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ