ಗೊರಗುಂಟೆಪಾಳ್ಯದಲ್ಲಿ ಗ್ಯಾಸ್ ಲಾರಿ ಬ್ರೇಕ್ ಫೇಲ್ ಆಗಿ ಕೆಟಿಎಂ ಬೈಕ್‌ಗೆ ಡಿಕ್ಕಿ; ಲಾರಿ ಚಕ್ರದಡಿ ಸಿಲುಕಿ ದಂಪತಿ ಸಾವು

ಬೆಂಗಳೂರಿನ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಜೂನ್ 11ರಂದು ಭೀಕರ ಅಪಘಾತ ಸಂಭವಿಸಿದೆ. ಸಿಲಿಂಡರ್‌ಗಳಿಂದ ತುಂಬಿದ್ದ ಗ್ಯಾಸ್ ಲಾರಿ ಬ್ರೇಕ್ ಫೇಲ್ ಆಗಿ ನಿಯಂತ್ರಣ ತಪ್ಪಿ, KTM ಡ್ಯೂಕ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ದುರಂತದಲ್ಲಿ ಬೈಕ್‌ನಲ್ಲಿದ್ದ ಪತಿ-ಪತ್ನಿ ಶಬ್ರಾಜ್ ಮತ್ತು ಶಬ್ರೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಿಂದಾಗಿ ತುಮಕೂರು ರಸ್ತೆ ಮತ್ತು ಯಶವಂತಪುರ ಮಾರ್ಗದಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಯಿತು.

ಗೊರಗುಂಟೆಪಾಳ್ಯದಲ್ಲಿ ಗ್ಯಾಸ್ ಲಾರಿ ಬ್ರೇಕ್ ಫೇಲ್ ಆಗಿ ಕೆಟಿಎಂ ಬೈಕ್‌ಗೆ ಡಿಕ್ಕಿ; ಲಾರಿ ಚಕ್ರದಡಿ ಸಿಲುಕಿ ದಂಪತಿ ಸಾವು
ಗೊರಗುಂಟೆಪಾಳ್ಯ ಅಪಘಾತ
Edited By:

Updated on: Jun 11, 2026 | 5:24 PM

ಬೆಂಗಳೂರು, ಜೂ.11: ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಇಂದು (ಜೂ.11) ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸಿಲಿಂಡರ್‌ಗಳಿಂದ ತುಂಬಿದ್ದ ಗ್ಯಾಸ್ ಲಾರಿಯೊಂದರ ಬ್ರೇಕ್ ಫೇಲ್ ಆದ ಪರಿಣಾಮ, ನಿಯಂತ್ರಣ ತಪ್ಪಿ ಕೆಟಿಎಂ ಡ್ಯೂಕ್ (KTM Duke) ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ದುರಂತದಲ್ಲಿ ಬೈಕ್‌ನಲ್ಲಿದ್ದ ಪತಿ-ಪತ್ನಿ ಇಬ್ಬರೂ ಲಾರಿಯ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳನ್ನು ನಾಗರಬಾವಿ ನಿವಾಸಿಗಳಾದ ಶಬ್ರಾಜ್ (28) ಮತ್ತು ಆತನ ಪತ್ನಿ ಶಬ್ರೀನ್ (24) ಎಂದು ಗುರುತಿಸಲಾಗಿದೆ. ದಂಪತಿಗಳಿಬ್ಬರು ತಮ್ಮ ಕೆಟಿಎಂ ಬೈಕ್‌ನಲ್ಲಿ ನಾಗರಬಾವಿಯಿಂದ ಹೊರಟು ಗೊರಗುಂಟೆಪಾಳ್ಯ ಸಿಗ್ನಲ್ ದಾಟಿಕೊಂಡು ಯಶವಂತಪುರ ಕಡೆಗೆ ಬರುತ್ತಿದ್ದಾಗ ಈ ಘೋರ ದುರಂತ ಸಂಭವಿಸಿದೆ.

ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಗ್ಯಾಸ್ ಸಿಲಿಂಡರ್ ಲಾರಿಯ ಬ್ರೇಕ್ ಫೇಲ್ ಆಗಿರುವುದು ಪತ್ತೆಯಾಗಿದೆ. ಸಿಗ್ನಲ್ ಬಳಿ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಮುನ್ನುಗ್ಗಿದೆ. ಈ ವೇಳೆ ಯಶವಂತಪುರ ರಸ್ತೆಯ ಟಿಎಂಟಿ ಜಂಕ್ಷನ್ ಬಳಿ ದಂಪತಿ ಪ್ರಯಾಣಿಸುತ್ತಿದ್ದ ಬೈಕ್‌ಗೆ ಲಾರಿ ಹಿಂಬದಿಯಿಂದ ಜೋರಾಗಿ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ತಕ್ಷಣವೇ ಲಾರಿಯ ಹಿಂಭಾಗದ ಭಾರೀ ಗಾತ್ರದ ಟೈರ್ ದಂಪತಿಗಳ ಮೇಲೆ ಹರಿದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತದ ತೀವ್ರತೆಗೆ ಅವರ ಕೆಟಿಎಂ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಇದನ್ನೂ ಓದಿ: ಸಾವು ಹೀಗೂ ಬರಬಹುದು: ಉಡುಪಿಯಲ್ಲಿ ತೆಂಗಿನಕಾಯಿ ಬಿದ್ದು ಹಸುಗೂಸು ಸಾವು

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಯಶವಂತಪುರ ಸಂಚಾರಿ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಪೀಕ್ ಅವರ್‌ನಲ್ಲಿಯೇ ಗೊರಗುಂಟೆಪಾಳ್ಯದ ಪ್ರಮುಖ ಸಿಗ್ನಲ್‌ನಲ್ಲಿ ಈ ಭೀಕರ ಅಪಘಾತ ನಡೆದ ಕಾರಣ ತುಮಕೂರು ರಸ್ತೆ ಮತ್ತು ಯಶವಂತಪುರ ಮಾರ್ಗದಲ್ಲಿ ಬರೋಬ್ಬರಿ ಕಿಲೋಮೀಟರ್‌ಗಟ್ಟಲೆ ಭಾರಿ ಸಂಚಾರ ದಟ್ಟಣೆ (Traffic Jam) ಉಂಟಾಗಿತ್ತು. ಪೊಲೀಸರು ಕ್ರೇನ್ ಬಳಸಿ ಅಪಘಾತಕ್ಕೀಡಾದ ವಾಹನಗಳನ್ನು ಪಕ್ಕಕ್ಕೆ ಸರಿಸಿ, ಸದ್ಯ ಸಂಚಾರ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಕುರಿತು ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Follow Us