ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ (Bangalore Agricultural University) ಇಂದು ದಿಢೀರ್ ಭೇಟಿ ಕೊಟ್ಟ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governor Thawar Chand Gehlot) ಅವರು ಮೂರು ಗಂಟೆಗಳ ಕಾಲ ಕಾರ್ಯವೈಖರಿ ಪರಿಶೀಲನೆ ನಡೆಸಿದರು. ಸ್ನಾತಕೋತ್ತರ ವಿದ್ಯಾರ್ಥಿನಿಯರ ಹಾಸ್ಟೆಲ್ಗೂ ಭೇಟಿ ನೀಡಿ ಪರಿಶೀಲಿಸಿದರು. ಗ್ರಂಥಾಲಯಕ್ಕೆ ತೆರಳಿ ವಿವಿಧ ವಿಭಾಗಗಳಲ್ಲಿ ಲಭ್ಯವಿರುವ ಪುಸ್ತಕಗಳನ್ನು ಪರಿಶೀಲಿಸಿದ ಬಳಿಕ ಸ್ಮಾರ್ಟ್ ಕ್ಲಾಸ್ಗೆ ಭೇಟಿಕೊಟ್ಟು ವಿದ್ಯಾರ್ಥಿಗಳೊಂದಿಗೆ ಕುಳಿತುಕೊಂಡು ಮಾತನಾಡಿದರು. ಅಷ್ಟೇ ಅಲ್ಲದೆ ಗೋ ಶಾಲೆಗೆ ಭೇಟಿ ನೀಡಿ ಗೋವುಗಳ ಸಾಕಾಣಿಕೆಯ ವ್ಯವಸ್ಥೆ ಪರಿಶೀಲಿಸಿ ಗೋವುಗಳಿಗೆ ಫಲಹಾರ ನೀಡಿದರು.
ಕೃಷಿ ವಿಶ್ವವಿದ್ಯಾಲಯದ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ದಿಢೀರ್ ಭೇಟಿ ನೀಡಿದರು. ವಿವಿಯ ನಾವೀನ್ಯತೆ ಕೇಂದ್ರ, ಗ್ರಂಥಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರ, ಜೈವಿಕ ಯಂತ್ರ ಗ್ಯಾಲರಿ ಮತ್ತು ಸಂಶೋಧನೆ ಕೇಂದ್ರ, ಮಣ್ಣುರಹಿತ ವಾಣಿಜ್ಯ ಬೀಜೋತ್ಪಾದನಾ ಘಟಕ, ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ, ಖುಷ್ಕಿ ಬೇಸಾಯ ಸಂಶೋಧನಾ ಪ್ರಾಯೋಜನೆ, ತೋಟಗಾರಿಕೆಯ ಸಸ್ಯ ಅಂಗಾಂಶ ಕೃಷಿ ಪ್ರಯೋಗಾಲಯ ವಿಭಾಗ, ಕೀಟಗಳ ಪ್ರಯೋಗಾಲಯ ಸೇರಿದಂತೆ ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಬಯಲು ಸೀಮೆಯ ಬರದ ನಾಡು ಈಗ ಮಲೆನಾಡು! ಎಲ್ಲಿ ನೋಡಿದರೂ ನೀರು ಹಚ್ಚ ಹಸಿರು, ಇಲ್ಲಿದೆ ನೋಡಿ ಅದರ ಝಲಕ್
ಬಳಿಕ ಸ್ನಾತಕೋತ್ತರ ವಿದ್ಯಾರ್ಥಿನಿಯರ ವಸತಿ ಶಾಲೆಗೆ ಭೇಟಿಕೊಟ್ಟ ರಾಜ್ಯಪಾಲ ಗೆಹ್ಲೋಟ್, ಅಡುಗೆ ಮನೆ ಪರಿಶೀಲನೆ ನಡೆಸಿದರು. ಇದೇ ವೇಳೆ ವಿದ್ಯಾರ್ಥಿನಿಯರಿಗೆ ನೀಡಲಾಗುವ ಆಹಾರ ತಯಾರಿಕೆ ಹಾಗೂ ಸ್ವಚ್ಛತೆ ಬಗ್ಗೆ ಪರಿಶೀಲಿಸಿದರು. ನಂತರ ಗ್ರಂಥಾಲಯಕ್ಕೆ ತೆರಳಿದ ರಾಜ್ಯಪಾಲರು, ವಿವಿಧ ವಿಭಾಗಗಳಲ್ಲಿ ಲಭ್ಯವಿರುವ ಪುಸ್ತಕಗಳನ್ನು ಪರಿಶೀಲಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು.
ವಿದ್ಯಾರ್ಥಿನಿಯರ ವಸತಿ ಶಾಲೆಯ ಕಾರ್ಯವೈಕರಿ ಹಾಗೂ ಸ್ವಚ್ಛತೆ ಪರಿಶೀಲಿಸಿದ ನಂತರ ರಾಜ್ಯಪಾಲರು ಸ್ಮಾರ್ಟ್ ಕ್ಲಾಸ್ ಕುರಿತು ಪರಿಶೀಲಿಸಲು ತರಗತಿಗೆ ಭೇಟಿ ನೀಡಿದರು. ಇಲ್ಲಿ ವಿದ್ಯಾರ್ಥಿಗಳೊಂದಿಗೆ ತರಗತಿಯಲ್ಲಿ ಕುಳಿತ ರಾಜ್ಯಪಾಲ ಗೆಹ್ಲೋಟ್, ಕೆಲ ಕಾಲ ತರಗತಿಯಲ್ಲೇ ಕಳೆದರು. ತದನಂತರ ಗೋ ಶಾಲೆಗೆ ಭೇಟಿನೀಡಿ ಗೋವು ಸಾಕಾಣಿಕೆಯ ವ್ಯವಸ್ಥೆ ಪರಿಶೀಲಿಸಿ ಗೋವುಗಳಿಗೆ ಫಲಹಾರ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:31 pm, Mon, 23 January 23