Bengaluru Metro: ಆಗಸ್ಟ್ 6ರಿಂದ ನಾಗಸಂದ್ರ-ಮಾದಾವರ ಮಾರ್ಗದಲ್ಲಿ ಮೆಟ್ರೋ ಪ್ರಾಯೋಗಿಕ ಸಂಚಾರ ಆರಂಭ

|

Updated on: Jul 31, 2024 | 10:19 AM

ನಮ್ಮ ಮೆಟ್ರೋ ಆಗಸ್ಟ್ 6 ರಿಂದ ನಾಗಸಂದ್ರದಿಂದ ಮಾದಾವರವರೆಗಿನ ಗ್ರೀನ್ ಲೈನ್ ವಿಸ್ತರಿತ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಈ ಮಾರ್ಗವನ್ನು ಮೆಟ್ರೋ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

Bengaluru Metro: ಆಗಸ್ಟ್ 6ರಿಂದ ನಾಗಸಂದ್ರ-ಮಾದಾವರ ಮಾರ್ಗದಲ್ಲಿ ಮೆಟ್ರೋ ಪ್ರಾಯೋಗಿಕ ಸಂಚಾರ ಆರಂಭ
ನಮ್ಮ ಮೆಟ್ರೋ ಹಸಿರು ಮಾರ್ಗ
Follow us on

ಬೆಂಗಳೂರು, ಜುಲೈ.31: ನಾಗಸಂದ್ರದಿಂದ ಮಾದಾವರವರೆಗಿನ ಗ್ರೀನ್ ಲೈನ್ ವಿಸ್ತರಣೆಗೆ ನಮ್ಮ ಮೆಟ್ರೋ (Namma Metro) ಆಗಸ್ಟ್ 6 ರಿಂದ ಪ್ರಾಯೋಗಿಕ ಚಾಲನೆಯನ್ನು ಪ್ರಾರಂಭಿಸಲಿದೆ ಎಂದು ಬಿಎಂಆರ್‌ಸಿಎಲ್ (BMRCL) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಈ ಮಾರ್ಗವನ್ನು ಸಂಚಾರಕ್ಕೆ ತೆರೆಯಲಾಗುವುದು ಎಂದು ಬಿಎಂಆರ್‌ಸಿಎಲ್ ಎಂಡಿ ಮಹೇಶ್ವರ್ ರಾವ್ ಮಾಹಿತಿ ನೀಡಿದ್ದಾರೆ.

298 ಕೋಟಿ ವೆಚ್ಚದಲ್ಲಿ 3.7-ಕಿಮೀ ಮಾರ್ಗವು ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಹಿಂದಿನ ಜಿಂದಾಲ್ ನಗರ) ಮತ್ತು ಮಾದಾವರ (ಬಿಐಇಸಿ)ದಲ್ಲಿ ನಿಲ್ದಾಣಗಳನ್ನು ಹೊಂದಿದೆ. ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, “ನಾವು ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಂಡಿದ್ದೇವೆ. ವಿವಿಧ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಒಂದು ತಿಂಗಳ ಕಾಲ ಪ್ರಾಯೋಗಿಕ ಓಡಾಟ ನಡೆಯಲಿದೆ. ನಾವು ಸೆಪ್ಟೆಂಬರ್ ಎರಡನೇ ವಾರದೊಳಗೆ ಮೆಟ್ರೋ ರೈಲು ಸುರಕ್ಷತೆಯ ಆಯುಕ್ತರನ್ನು ತಪಾಸಣೆಗೆ ಆಹ್ವಾನಿಸಲು ಸಿದ್ಧತೆ ನಡೆಸುತ್ತಿದ್ದೇವೆ.

ಇದು ವಿಸ್ತರಣಾ ಮಾರ್ಗವಾಗಿರುವುದರಿಂದ ಮತ್ತು ಗ್ರೀನ್ ಲೈನ್‌ನಲ್ಲಿ ಚಲಿಸುವ ರೈಲುಗಳನ್ನು ಬಳಸಲಾಗುವುದು, ರೈಲುಗಳ ನಡುವಿನ ಹಾದಿಯು ಉದ್ದವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋಗೂ ತಟ್ಟಿದ ವಿದ್ಯುತ್ ಸಮಸ್ಯೆ: ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ

ನೆಲಮಂಗಲ, ಮಾಕಳಿ ಮತ್ತು ಮಾದನಾಯಕನಹಳ್ಳಿ ನಿವಾಸಿಗಳು ಮತ್ತು ತುಮಕೂರಿನಿಂದ ನಗರಕ್ಕೆ ಬರುವವರು ಮಾದಾವರದಲ್ಲಿ ಮೆಟ್ರೋ ಸೇವೆಯನ್ನು ಪಡೆಯಬಹುದು. ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡುವವರಿಗೂ ಇದು ನೆರವಾಗಲಿದೆ.

ಈ ಮಾರ್ಗದ ಕಾಮಗಾರಿ ಪೂರ್ಣಗೊಳಿಸಲು ಆಗಸ್ಟ್ 2019ಕ್ಕೆ ಗಡುವು ನೀಡಲಾಗಿತ್ತು. ಆದರೆ ಮಾದಾವರದ ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳಲು ವಿಳಂಬ ಹಾಗೂ ನಾನಾ ಕಾರಣಗಳಿಂದ ಹಲವು ಬಾರಿ ವಿಸ್ತರಣೆ ಮಾಡಬೇಕಾಯಿತು.

ಜಪಾನ್‌ನ ಸ್ಪೀಕರ್ ನುಕಾಗಾ ಫುಕುಶಿರೊ ಮತ್ತು ನಾಲ್ವರು ಸಂಸದರು ಇಂದು ಬುಧವಾರ ಬೆಳಿಗ್ಗೆ ಬಿಎಂಆರ್‌ಸಿಎಲ್ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಅವರು ಎಂಜಿ ರಸ್ತೆಯಿಂದ ವಿಧಾನಸೌಧದವರೆಗೆ ಮಧ್ಯಾಹ್ನ 12.40 ಕ್ಕೆ ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ