ಭದ್ರತಾ ತಪಾಸಣೆಗಾಗಿ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮುಂದಾದ ಬೆಂಗಳೂರು ವಿಮಾನ ನಿಲ್ದಾಣ
ಕೆಂಪೇಗೌಡ ವಿಮಾನ ನಿಲ್ದಾಣ ಸಂಸ್ಥೆ ಭದ್ರತಾ ತಪಾಸಣೆಗಾಗಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.ಭದ್ರತಾ ತಪಾಸಣೆಗಾಗಿ ಕಂಪ್ಯೂಟರ್ ಟೊಮೊಗ್ರಫಿ ಎಕ್ಸ್-ರೇ (CTX) ಸುಧಾರಿತ ಯಂತ್ರಗಳನ್ನು ಅಳವಡಿಸಲು ವಿಮಾನ ನಿಲ್ದಾಣ ಸಿಬ್ಬಂದಿ ತಯಾರಿ ನಡೆಸಿದ್ದಾರೆ.
ಬೆಂಗಳೂರು ನ.27: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2 ರಿಂದ ಪ್ರಯಾಣಿಸುವ ಪ್ರಯಾಣಿಕರು ಭದ್ರತಾ ತಪಾಸಣೆ (Security check) ಸಂಬಂಧ ಹೆಚ್ಚು ಹೊತ್ತು ಕಾಯಬೇಕಾಗುತ್ತದೆ. ಅಲ್ಲದೆ ಪ್ರಯಾಣಿಕರು ಬ್ಯಾಗ್ನಿಂದ ಎಲೆಕ್ಟ್ರಾನಿಕ್ ಸಾಧನಗಳಾದ ಫೋನ್ ಮತ್ತು ಲ್ಯಾಪ್‌ಟಾಪ್‌ಗಳಂತಹ ವಸ್ತುಗಳನ್ನು ಹೊರೆ ತೆಗೆದು ಪರಿಶೀಲನೆಗಾಗಿ ನೀಡಬೇಕು. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನಾನುಕೂಲವಾಗುತ್ತಿತ್ತು. ಇದನ್ನು ತಪ್ಪಿಸಲು ಕೆಂಪೇಗೌಡ ವಿಮಾನ ನಿಲ್ದಾಣ ಸಂಸ್ಥೆ ಭದ್ರತಾ ತಪಾಸಣೆಗಾಗಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.
ಹೌದು ಭದ್ರತಾ ತಪಾಸಣೆಗಾಗಿ ಕಂಪ್ಯೂಟರ್ ಟೊಮೊಗ್ರಫಿ ಎಕ್ಸ್-ರೇ (CTX) ಸುಧಾರಿತ ಯಂತ್ರಗಳನ್ನು ಅಳವಡಿಸಲು ವಿಮಾನ ನಿಲ್ದಾಣ ಸಿಬ್ಬಂದಿ ತಯಾರಿ ನಡೆಸಿದ್ದಾರೆ. ಇದರಿಂದ ಪ್ರಯಾಣಿಕರು ಭದ್ರತಾ ತಪಾಸಣೆಗಾಗಿ ಹೆಚ್ಚು ಸಮಯ ವ್ಯಯಿಸುವ ಸಮಸ್ಯೆ ತಪ್ಪುತ್ತದೆ. ಅಲ್ಲದೆ ಭದ್ರತಾ ಕಣ್ಗಾವಲು ಇನ್ನೂ ತೀಕ್ಷಣಗೊಳ್ಳುತ್ತದೆ. ವಿಮಾನ ನಿಲ್ದಾಣವು 2023ರ ಡಿಸೆಂಬರ್ನಿಂದ ಹೊಸ ತಂತ್ರಜ್ಞಾನವನ್ನು ಜಾರಿಗೆ ತರಲು ಯೋಜಿಸುತ್ತಿದೆ.
ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರಕಾರ, ಸಿಟಿಎಕ್ಸ್ ಯಂತ್ರವು ಅಟೋಮೆಟಿಕ್ ಟ್ರೆ ರಿಟ್ರೈವಲ್ ಸಿಸ್ಟಮ್ (ATRS) ವ್ಯವಸ್ಥೆಯನ್ನು ಹೊಂದಿದೆ. ಇದು ಪೂರ್ಣ ದೇಹವನ್ನು ಸ್ಕ್ಯಾನ್ ಮಾಡುತ್ತದೆ. ಭದ್ರತಾ ಸಿಬ್ಬಂದಿ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಬ್ಯಾಗ್ ಒಳಗಿನ ವಸ್ತುಗಳನ್ನು ಆರಾಮವಾಗಿ ವೀಕ್ಷಿಸಬಹುದು. ಇದು ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೆ ಬೇಕಾದ ಟ್ರೇಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿನ 3.5 ಲಕ್ಷ ಮೌಲ್ಯದ ವಸ್ತುಗಳು ಕಳವು
ಸಿಟಿಆರ್ ತಂತ್ರಜ್ಞಾನವು ಸ್ಫೋಟಕಗಳನ್ನು ಪತ್ತೆಹಚ್ಚುವ ಅಲಾರಾಮ್ ವ್ಯವಸ್ಥೆ ಹೊಂದಿದೆ. ಹಾಗೇ ವಸ್ತುವಿನ 3D ಚಿತ್ರವನ್ನು ಭದ್ರತಾ ಸಿಬ್ಬಂದಿಗೆ ನೀಡುತ್ತದೆ. ಪ್ರಯಾಣಿಕರು ಬ್ಯಾಗ್‌ಗಳಲ್ಲಿ ಸಾಗಿಸುವ ದ್ರವ ಪದಾರ್ಥಗಳು, ಸೇಂಟ್ನಂತಹ ಸ್ಪ್ರೇ ಮತ್ತು ಜೆಲ್‌ಗಳನ್ನು ಗುರುತಿಸುತ್ತದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಿಟಿಎಸ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ ದೇಶದ ಮೊದಲ ವಿಮಾನ ನಿಲ್ದಾಣವಾಗಿದೆ. ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) 50 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವ ವಿಮಾನ ನಿಲ್ದಾಣಗಳು ಈ ವರ್ಷದ ಅಂತ್ಯದ ವೇಳೆಗೆ ಭದ್ರತೆಗಾಗಿ ಸಿಟಿಎಸ್ ತಂತ್ರಜ್ಞಾನವನ್ನು ಹೊಂದಿರಬೇಕು ಎಂದು ನಿರ್ದೇಶಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ