ಬೆಂಗಳೂರು: ಕಾರಿನ ಬಾನೆಟ್ ಮೇಲೆ ಬಿದ್ದ ವ್ಯಕ್ತಿಯನ್ನು ಎಳೆದೊಯ್ದ ಪ್ರಕರಣ (Hit And Run Case) ಸಂಬಂಧ ಬಂಧನಕ್ಕೊಳಗಾದ ಐವರು ಆರೋಪಿಗಳನ್ನು ಫೆಬ್ರವರಿ 3ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 9ನೇ ಎಸಿಎಂಎಂ ನ್ಯಾಯಾಲಯ (9th ACMM Court) ಆದೇಶ ಹೊರಡಿಸಿದೆ. ಜೈಲುಪಾಲಾದ ದರ್ಶನ್, ಸೃಜನ್, ವಿನಯ್, ಯಶವಂತ್ ಮತ್ತು ಕಾರು ಚಾಲಕಿ ಪ್ರಿಯಾಂಕಾ ಎಂಬ ಆರೋಪಿಗಳನ್ನು ಜ್ಞಾನಭಾರತಿ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ದರ್ಶನ್, ಸೃಜನ್, ವಿನಯ್, ಯಶವಂತ್ ವಿರುದ್ಧ IPC ಸೆಕ್ಷನ್ 354ರಡಿ ಪ್ರಕರಣ ದಾಖಲಾಗಿದ್ದರೆ, ಪ್ರಿಯಾಂಕಾ ವಿರುದ್ಧ ಐಪಿಸಿ ಸೆಕ್ಷನ್ 307ರಡಿ ಪ್ರಕರಣ ದಾಖಲಾಗಿದೆ.
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಮುಖ್ಯರಸ್ತೆಯ ಜಂಕ್ಷನ್ ಬಳಿ ದರ್ಶನ್ ಎಂಬಾತನ ಸ್ವಿಫ್ಟ್ ಕಾರು ಮತ್ತು ಶ್ವೇತಾ ಎಂಬಾಕೆಯ ನೆಕ್ಸಾನ್ ಕಾರಿನ ನಡುವೆ ಸಣ್ಣ ಅಪಘಾತ ನಡೆದಿದೆ. ಈ ವೇಳೆ ಶ್ವೇತಾ ದರ್ಶನ್ಗೆ ಮಧ್ಯಬೆರಳು ತೋರಿಸಿ ಕೆಟ್ಟದಾಗಿ ವರ್ತಿಸಿ ಕಾರು ಚಲಾಯಿಸಿಕೊಂಡು ಹೋಗಿದ್ದಾಳೆ. ಕೋಪಗೊಂಡ ದರ್ಶನ್ ಟಾಟಾ ನೆಕ್ಸಾನ್ ಕಾರು ಹಿಂಬಾಲಿಸಿ ಕಾರು ಅಡ್ಡಗಟ್ಟಿ ಮಹಿಳೆಯನ್ನು ಪ್ರಶ್ನಿಸಿದ್ದಾನೆ.
ಈ ವೇಳೆ ಶ್ವಾತಾ ಕಾರನ್ನು ಮುಂದೆ ಚಲಾಯಿಸಲು ಹೋಗುತ್ತಿದ್ದಂತೆ ದರ್ಶನ್ ಕಾರಿನ ಬಾನೆಟ್ ಮೇಲೆ ಹತ್ತಿ ಕುಳಿತಿದ್ದಾನೆ. ಆದರೂ ಶ್ವೇತಾ, ದರ್ಶನ್ ಬಾನೆಟ್ ಮೇಲಿದ್ದರೂ ಏಕಾಏಕಿ ಕಾರು ಚಲಾಯಿಸಿಕೊಂಡು ಸುಮಾರು 2ಕಿ.ಮೀ ದೂರದವರೆಗೆ ಎಳೆದೊಯ್ದಿದ್ದಾಳೆ. ಕೂಡಲೇ ದರ್ಶನ್ ಸ್ನೇಹಿತರು ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿ ದರ್ಶನ್ನನ್ನು ರಕ್ಷಿಸಿದ್ದಾರೆ. ನಂತರ ದರ್ಶನ್ ಮತ್ತು ಸ್ನೇಹಿತರು ಕಾರಿನ ಗಾಜು ಹೊಡೆದು ಆಕೆಯ ಗಂಡನಿಗೆ ಥಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಕಾರು ಚಾಲಕನನ್ನು ದರದರನೆ 1ಕಿ.ಮೀ ಎಳೆದೊಯ್ದ ಬೈಕ್ ಸವಾರ: ಇಲ್ಲಿದೆ ಭಯಾನಕ ವಿಡಿಯೋ
ಘಟನೆ ಸಂಬಂಧ ಎರಡೂ ಕಡೆಯವರಿಂದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದ್ದು, ಪೊಲೀಸರು ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದಾರೆ. ದರ್ಶನ್, ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಎಫ್ಐಆರ್ ದಾಖಲಾದರೆ, ಪ್ರಿಯಾಂಕ ಐಪಿಸಿ ಸೆಕ್ಸನ್ 354 ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾಳೆ. ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಬಾನೆಟ್ ಮೇಲೆ ಹತ್ತಿ ಕುಳಿತರೂ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾಗಿ ದರ್ಶನ್ ದೂರಿನಲ್ಲಿ ಆರೋಪಿಸಿದರೆ, ಇತ್ತ ಪ್ರಿಯಾಂಕ, ದರ್ಶನ್ ಹಾಗೂ ಸಹಚರರು ವಿರುದ್ಧ ತನ್ನ ಬಟ್ಟೆಯನ್ನು ಹರಿದು ಎಳೆದಾಡಿ ಅವಾಚ್ಯ ಶಬ್ಧದಿಂದ ನಿಂದನೆ ಮಾಡಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ.
ದೂರು ಮತ್ತು ಪ್ರತಿದೂರಿನ ಅನ್ವಯ ಜ್ಞಾನಭಾರತಿ ಪೊಲೀಸರು ಪ್ರಿಯಾಂಕ ನೀಡಿರುವ ಲೈಂಗಿಕ ದೌರ್ಜನ್ಯ ದೂರಿನ ಅಡಿಯಲ್ಲಿ ದರ್ಶನ್, ಯಶವಂತ್, ಸುಜನ್ ಹಾಗೂ ವಿನಯ್ ಎಂಬವರನ್ನು ಬಂಧಿಸಿದರೆ ಪ್ರಮೋದ್ ಹಾಗೂ ದರ್ಶನ್ ಎಂಬುವವರು ನೀಡಿರುವ ದೂರಿನ ಅನ್ವಯ ಪ್ರಿಯಾಂಕಳನ್ನು ಬಂಧಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ