ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಚಾಲಕನ ಹುಚ್ಚಾಟ: ವೈರಲ್ ವಿಡಿಯೋ ಆಧರಿಸಿ ಚಾಲಕನ ವಿರುದ್ಧ ಎಫ್‌ಐಆರ್

ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಕಾರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಘಟನೆ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆ ಸಾರ್ವಜನಿಕರ ಜೀವಕ್ಕೆ ಅಪಾಯ ತಂದ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಎಫ್‌ಐಆರ್ ದಾಖಲಾಗಿದೆ. ವೈರಲ್ ಆದ ವಿಡಿಯೋ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಚಾಲಕನ ಹುಚ್ಚಾಟ: ವೈರಲ್ ವಿಡಿಯೋ ಆಧರಿಸಿ ಚಾಲಕನ ವಿರುದ್ಧ ಎಫ್‌ಐಆರ್
ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಚಾಲಕನ ಹುಚ್ಚಾಟ

Updated on: Jan 21, 2026 | 2:32 PM

ಬೆಂಗಳೂರು, ಜನವರಿ 21: ನಗರದ ಮೈಸೂರು ಮುಖ್ಯರಸ್ತೆಯಲ್ಲಿ ದುಬಾರಿ ಲ್ಯಾಂಬೋರ್ಗಿನಿ ಕಾರನ್ನು ಅತಿವೇಗ ಹಾಗೂ ಅಜಾಗರೂಕವಾಗಿ ಚಲಾಯಿಸಿದ ಘಟನೆ ನಡೆದಿದ್ದು, ಸಾರ್ವಜನಿಕರ ಪ್ರಾಣಕ್ಕೆ ಅಪಾಯ ತಂದ ಆರೋಪದ ಮೇಲೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ  (Bengaluru) ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋವನ್ನು ಆಧರಿಸಿ ಪೊಲೀಸರು ಸ್ವಯಂಪ್ರೇರಿತವಾಗಿ ಕ್ರಮ ಕೈಗೊಂಡಿದ್ದಾರೆ.

ಎಕ್ಸ್​ನಲ್ಲಿ ಚಾಲಕನ ಹುಚ್ಚಾಟದ ದೃಶ್ಯ ವೈರಲ್

ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವಂತೆ, ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಮಸ್ವಾಮಿ ಆರ್, ಜನವರಿ 20ರಂದು ಸಂಚಾರ ಕರ್ತವ್ಯದಲ್ಲಿದ್ದ ವೇಳೆ ಸಾಮಾಜಿಕ ಜಾಲತಾಣವಾದ ‘ಎಕ್ಸ್’ ಪರಿಶೀಲಿಸುತ್ತಿದ್ದಾಗ, ಜನವರಿ 19ರಂದು ಅಪ್‌ಲೋಡ್ ಆಗಿದ್ದ ವಿಡಿಯೋ ಗಮನಕ್ಕೆ ಬಂದಿದೆ. ಸನಾತನ ಎಂಬ ಖಾತೆಯಿಂದ ಹಂಚಿಕೆಯಾಗಿದ್ದ ಈ ವಿಡಿಯೋದಲ್ಲಿ, ಹಸಿರು ಬಣ್ಣದ ಲ್ಯಾಂಬೋರ್ಗಿನಿ ಹುರಾಕಾನ್ ಕಾರು, ರಾಜರಾಜೇಶ್ವರಿ ನಗರ ಆರ್ಚ್ ಬಳಿ ಮೈಸೂರು ರಸ್ತೆಯತ್ತ ಅಪಾಯಕಾರಿ ರೀತಿಯಲ್ಲಿ ಚಲಿಸುತ್ತಿರುವುದು ಕಂಡುಬಂದಿದೆ.  ಪ್ರಕರಣ ದಾಖಲಾದ ಕುರಿತು ಸಂಚಾರ ಪೊಲೀಸ್ ಉಪ ಆಯುಕ್ತ  ಅನೂಪ್ ಶೆಟ್ಟಿ ದೃಢಪಡಿಸಿದ್ದಾರೆ.

ವೈರಲ್ ಆದ ವೀಡಿಯೋವನ್ನು ನ್ಯೂಸ್9 ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ಸ್ವಯಂ ಪ್ರೇರಿತ ದೂರು ದಾಖಲಿಸಿದ ಪಿಎಸ್ಐ

ವಿಡಿಯೋದಲ್ಲಿ ಕಾರು ಅತಿವೇಗವಾಗಿ ಲೇನ್ ಬದಲಿಸುತ್ತಾ, ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಮಾನವ ಜೀವಕ್ಕೆ ಅಪಾಯ ಉಂಟು ಮಾಡುವ ರೀತಿಯಲ್ಲಿ ಚಲಾಯಿಸಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕಾರಿನ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಅಜಾಗರೂಕ ಹಾಗೂ ಅಪಾಯಕಾರಿ ಚಾಲನೆ ಆರೋಪದಲ್ಲಿ ಪಿಎಸ್‌ಐ ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ಕಾರಿನ ನೋಂದಣಿ ವಿವರಗಳು ಮತ್ತು ಚಾಲಕನ ಗುರುತು ಪತ್ತೆಹಚ್ಚುವ ಕಾರ್ಯ ಮುಂದುವರಿದಿದ್ದು, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:49 pm, Wed, 21 January 26