ಸಾಲ ಕೊಡುವ ಮುನ್ನ ಹುಷಾರ್​​! ಕಿಡ್ನ್ಯಾಪ್​​ ಮಾಡಿ ವ್ಯಕ್ತಿಗೆ ಚಿತ್ರಹಿಂಸೆ ಕೊಟ್ಟ ದುಷ್ಕರ್ಮಿಗಳು

ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ವಿಚಿತ್ರ ಮತ್ತು ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಸಾಲ ನೀಡಿದ್ದ ಹಣ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯನ್ನು ಅಪಹರಿಸಿ ಮರ್ಮಾಂಗ, ತೊಡೆಗಳಿಗೆ ಸಿಗರೇಟ್​​ನಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಕೃತ್ಯವನ್ನು ವಿಡಿಯೋ ಮಾಡಿ ಬೆದರಿಕೆ ಹಾಕಿದ್ದರು.

ಸಾಲ ಕೊಡುವ ಮುನ್ನ ಹುಷಾರ್​​! ಕಿಡ್ನ್ಯಾಪ್​​ ಮಾಡಿ ವ್ಯಕ್ತಿಗೆ ಚಿತ್ರಹಿಂಸೆ ಕೊಟ್ಟ ದುಷ್ಕರ್ಮಿಗಳು
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Oct 12, 2025 | 4:07 PM

ಬೆಂಗಳೂರು, ಅಕ್ಟೋಬರ್​ 12: ಸಾಲ ನೀಡಿದ್ದ ಹಣ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯನ್ನ ಅಪಹರಿಸಿ (kidnap) ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೈ ಕಾಲು ಕಟ್ಟಿ ಚಿತ್ರಹಿಂಸೆ (torture) ನೀಡಿರುವಂತಹ ಘಟನೆ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಗಾಯ್ ರಾಜ್​ ಅಪಹರಣಕ್ಕೊಳಗಾಗಿದ್ದ ವ್ಯಕ್ತಿ. ಆನಂದ್ ಕುಮಾರ್​, ಆಶಿಶ್​ ಮತ್ತು ಐಶ್ವರ್ಯಾ ಸೇರಿ ಹಲವರ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

ಆನಂದ್ ಕುಮಾರ್ ಎಂಬಾತನಿಗೆ ಸಗಾಯ್ ರಾಜ್ ಹಣ ನೀಡಿದ್ದ. ತನ್ನ ತಂದೆಗೆ ಕಿಡ್ನಿ ವೈಫಲ್ಯ ಎಂದು ಹೇಳಿ ಹಣ ಸಹಾಯ ಪಡೆದಿದ್ದನಂತೆ. ಆ ಹಣವನ್ನ ಆನಂದ್ ಕುಮಾರ್ ಮಗಳು ಐಶ್ವರ್ಯಾ ಖಾತೆಗೆ ಹಾಕಿದ್ದರು. ಹಂತ ಹಂತವಾಗಿ 3 ಲಕ್ಷ ರೂ. ಹಣ ಹಾಕಿದ್ದರಂತೆ. ನಂತರ ಮನೆ ಮಾರಾಟ ಮಾಡುತ್ತೇನೆ ಎಂದು ಆನಂದ್ ಹೇಳಿದ್ದರಂತೆ. ಈ ಹಿನ್ನಲೆ ತನಗೆ ಮನೆ ಮಾರಾಟ ಮಾಡಿ ಎಂದು ಸಗಾಯ್ ರಾಜ್ ಹೇಳಿದ್ದರಂತೆ.

ಇದನ್ನೂ ಓದಿ: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಕಿಡ್ನ್ಯಾಪ್: 12 ಗಂಟೆಯೊಳಗೆ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸ್​​

ಈ ಹಿನ್ನಲೆ ಅಗ್ರಿಮೆಂಟ್​​ಗೂ ಮುನ್ನ 1 ಕೋಟಿ ರೂ. ನಂತರ ಉಳಿದ ಹಣ ನೀಡುವುದಾಗಿ ಮಾತುಕತೆಯಾಗಿತ್ತು. ಅದಾಗಲೇ ಸಗಾಯ್ 1 ಕೋಟಿಯವರೆಗೆ ಹಣ ನೀಡಿದ್ದರಂತೆ. ಆದರೆ ಮನೆ ನೋಂದಣಿ ಮಾಡದ ಹಿನ್ನಲೆ ಹಣ ವಾಪಸ್ ಕೇಳಿದ್ದರು. ಇದೇ ಕಾರಣಕ್ಕೆ ಸಗಾಯ್ ರಾಜ್​​ ಕಾರಿನಲ್ಲಿ ಹೋಗುತ್ತಿರುವಾಗ ಆರೋಪಿಗಳು ಅಪಹರಿಸಿದ್ದರು.

ಮರ್ಮಾಂಗಕ್ಕೆ ಸಿಗರೇಟ್​ನಿಂದ ಸುಟ್ಟು ಚಿತ್ರಹಿಂಸೆ

ಬೈಕ್​​ನಲ್ಲಿ ಬಂದಿದ್ದ ಅಪರಿಚಿತರು ಸಗಾಯ್ ಮುಖಕ್ಕೆ ಬಟ್ಟೆ ಕಟ್ಟಿ ಕಿಡ್ಯ್ನಾಪ್​ ಮಾಡಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ನಂತರ ಕೈಕಾಲು ಕಟ್ಟಿ ಹಾಕಿ ಮರ್ಮಾಂಗಕ್ಕೆ ಹಾಗೂ ತೊಡೆಗೆ ಸಿಗರೇಟ್​​ನಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾರೆ. ಬಳಿಕ ಮರ್ಮಾಂಗಕ್ಕೆ ಇಂಜೆಕ್ಷನ್​​ನಿಂದ ಚುಚ್ಚಿ ವಿಕೃತಿ ಮೆರೆದಿದ್ದಾರೆ. ಕೃತ್ಯವನ್ನು ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾರೆ. ನಂತರ ರಾತ್ರಿಯಿಡೀ ಕಾರಿನಲ್ಲಿ ಸುತ್ತಾಡಿಸಿ ಹಿಂಸೆ ನೀಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಇದನ್ನೂ ಓದಿ: Cyber Fraud: ದೇಶದ ವಿವಿಧೆಡೆ ಕೋಟಿ ಕೋಟಿ ದೋಚುತ್ತಿದ್ದ ಸೈಬರ್ ವಂಚಕರ ಜಾಲ ಭೇದಿಸಿದ ದಾವಣಗೆರೆ ಪೊಲೀಸ್

ಬೆಳಗಿನಜಾವ ಕಾರಿನಲ್ಲಿ ಕಾಪಾಡಿ ಎಂದು ಸಗಾಯ್​ ರಾಜ್ ಕೂಗಾಡಿದ್ದಾರೆ. ಸಾರ್ವಜನಿಕರ ನೆರವಿನಿಂದ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಸಗಾಯ್, ಬಳಿಕ ಸಂಚಾರ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಈ ಸಂಬಂಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.