ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆಯಿಂದಾಗಿ ಟ್ರಾಫಿಕ್ ಜಾಮ್ ಹಿನ್ನೆಲೆ ಬೆಂಗಳೂರಲ್ಲಿ ಪ್ರತಿಭಟನೆ, ಮೆರವಣಿಗೆಗೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ. ಫ್ರೀಡಂಪಾರ್ಕ್ನ ನಿಗದಿತ ಜಾಗದಲ್ಲಿ ಮಾತ್ರ ಅವಕಾಶ ನೀಡಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಮಹತ್ವದ ಆದೇಶ ನೀಡಲಾಗಿದೆ. ಪ್ರತಿಭಟನೆಗಳಿಂದಾಗಿ ದೈನಂದಿನ ಜೀವನದ ಮೇಲೆ ಪರಿಣಾಮವಾಗ್ತಿದೆ. ಟ್ರಾಫಿಕ್ ಜಾಮ್ನಿಂದ ಬೆಂಗಳೂರಿನ ಜನರಿಗೆ ಸಮಸ್ಯೆಯಾಗುತ್ತಿದೆ. ಇಂತಹ ಮೆರವಣಿಗೆಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಮೇಕೆದಾಟು ಪಾದಯಾತ್ರೆಯಿಂದಾಗಿ ಟ್ರಾಫಿಕ್ ಜಾಮ್ ಆಗಿ, ನ್ಯಾಯಮೂರ್ತಿಗಳಿಗೂ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಈ ಬಗ್ಗೆ ಪಿಐಎಲ್ ವಿಚಾರಣೆ ವೇಳೆ ಹೈಕೋರ್ಟ್ ತರಾಟೆ ತೆಗೆದುಕೊಳ್ಳಲಾಗಿದೆ. ಪ್ರತಿಭಟನೆ, ಮೆರವಣಿಗೆ ನಿಲ್ಲಿಸಲು ಸರ್ಕಾರಕ್ಕೆ ಸಾಧ್ಯವಿಲ್ಲವೇ? ಮೇಖ್ರಿ ಸರ್ಕಲ್, ಅರಮನೆ ಮೈದಾನದ ಬಳಿ ಜಾಮ್ ಆಗಿದೆ. ನ್ಯಾಯಗ್ರಾಮದಿಂದ ಹೈಕೋರ್ಟ್ಗೆ ಬರಲು 1 ಗಂಟೆಯಾಗಿದೆ. ಹೀಗಾದರೆ ಬೆಂಗಳೂರಿನ ಜನರು ಕೆಲಸ ಮಾಡುವುದು ಹೇಗೆ. ಇದೇ ಮೊದಲು ಹೀಗೆ ಪ್ರತಿಭಟನೆ ನಡೆಯುತ್ತಿಲ್ಲ. ಹಿಂದಿನಿಂದಲೂ ಪ್ರತಿಭಟನೆಗಳಿಂದ ಟ್ರಾಫಿಕ್ ಜಾಮ್ ಆಗ್ತಿದೆ. ಈಗ ಆಗದಿದ್ದರೆ ಇನ್ಯಾವಾಗ ಕ್ರಮ ಕೈಗೊಳ್ತೀರಿ ಎಂದು ಪ್ರಶ್ನೆ ಮಾಡಲಾಗಿದೆ.
ಸಿಜೆ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣಕುಮಾರ್ ಅವರಿದ್ದ ಪೀಠ ತರಾಟೆ ತೆಗೆದುಕೊಂಡಿದೆ. ನಿಗದಿತ ಸ್ಥಳ ಬಿಟ್ಟು ಬೇರೆಡೆ ಪ್ರತಿಭಟನೆಗೆ ಅವಕಾಶ ನೀಡಬಾರದು. ಯಾವುದೇ ಸಂಘಟನೆ, ಪಕ್ಷಗಳಿಗೆ ಅವಕಾಶ ನೀಡಬಾರದು ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಮಹತ್ವದ ಆದೇಶ ನೀಡಲಾಗಿದೆ. ಈ ಬಗ್ಗೆ ಕಳೆದ ವರ್ಷ ಸ್ವಯಂ ಪ್ರೇರಿತ ಪಿಐಎಲ್ ದಾಖಲಾಗಿತ್ತು.
ಪಾದಯಾತ್ರೆ ಸಾಗಿದ ನಂತರ ಬೆಂಗಳೂರು ನಗರ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ಪಾದಯಾತ್ರೆ ಸಾಗುವ ಮೊದಲು ಐದು ನಿಮಿಷಗಳ ಕಾಲ ವಾಹನ ಸಂಚಾರ ತಡೆಯಾಗುತ್ತಿದೆ. ಪಾದಯಾತ್ರೆ ವೇಳೆ ಸುಮಾರು 30 ನಿಮಿಷಗಳ ಕಾಲ ವಾಹನ ಸಂಚಾರ ಅಗುವುದಿಲ್ಲ. ಇದೆಲ್ಲದರ ಪರಿಣಾಮ ಪಾದಯಾತ್ರೆ ಸಾಗಿದ ನಂತರ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ಮೂವತ್ತು ನಿಮಿಷಗಳ ಕಾಲ ವಾಹನಗಳು ಸಂಚಾರ ನಡೆಸದ ಕಾರಣ ನಗರದ ಬಹುತೇಕ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಸದ್ಯ ಪಾದಯಾತ್ರೆ ಸಾಗಿಬಂದ ಮೇಖ್ರಿ ಸರ್ಕಲ್ ಹಾಗು ಕಾವೇರಿ ಜಂಕ್ಷನ್ ಹಾಗು ಮಲ್ಲೇಶ್ವರ ಭಾಗದಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಮಂದಗತಿಯಲ್ಲಿ ವಾಹನ ಸಂಚಾರ ಆಗುತ್ತಿದೆ.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯಲ್ಲಿ ಸಿದ್ದರಾಮಯ್ಯನವರಿಂದ ‘ಟಗರು ಬಂತು…’ ಹಾಡಿಗೆ ಕುಣಿತ!!
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ಹಿನ್ನೆಲೆ ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್ ಅಳವಡಿಕೆ; ತೆರವುಗೊಳಿಸುವಂತೆ ಬಿಬಿಎಂಪಿ ಸೂಚನೆ
Published On - 2:56 pm, Thu, 3 March 22