ಬೆಂಗಳೂರು: ಸಿಲಿಕಾನ್ ಸಿಟಿಯ ಮೆಟ್ರೋ(Namma Metro) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್(BMRCL) ಸಿಹಿ ಸುದ್ದಿ ನೀಡಿದೆ. ಕೆಆರ್ ಪುರಂ ವರೆಗೆ ಬೆಂಗಳೂರು ಮೆಟ್ರೋ ನೇರಳೆ ಮಾರ್ಗ ವಿಸ್ತರಣೆಯಾಗಿದ್ದು ಇದರ ಪ್ರಾಯೋಗಿಕ ಓಡಾಟ ಸೆಪ್ಟೆಂಬರ್ನಿಂದ ನಡೆಯಲಿದೆ. ಈ ವರ್ಷ ಡಿಸೆಂಬರ್ ವೇಳೆಗೆ ವೈಟ್‌ಫೀಲ್ಡ್‌ವರೆಗೆ ಮಾರ್ಗ ವಿಸ್ತರಣೆಯನ್ನು ಪೂರ್ಣಗೊಳಿಸಲು ಮೆಟ್ರೊ ರೈಲು ನಿಗಮವು ಪ್ರಯತ್ನಿಸುತ್ತಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋದ ಬಹುನಿರೀಕ್ಷಿತ ಪರ್ಪಲ್ ಲೈನ್ ವಿಸ್ತರಣೆಯ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ಗೆ ಸೆಪ್ಟೆಂಬರ್‌ನಲ್ಲಿ ಪ್ರಾಯೋಗಿಕ ಚಾಲನೆ ಪ್ರಾರಂಭವಾಗಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರಂ ನಡುವಿನ ನೇರಳೆ ಮಾರ್ಗದ ಪ್ರಯೋಗಿಕ ಓಡಾಟ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದ್ದು, ಬಿಎಂಆರ್‌ಸಿಎಲ್ ಡಿಸೆಂಬರ್ 2022 ರೊಳಗೆ ವೈಟ್‌ಫೀಲ್ಡ್‌ಗೆ ವಿಸ್ತರಣೆಯನ್ನು ಪೂರ್ಣಗೊಳಿಸಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.
ಟ್ರಾಫಿಕ್‌ನಲ್ಲಿ ಬೆಂದು ಬೆಂಡಾಗುತ್ತಿದ್ದವರಿಗೆ ರಿಲೀಫ್
“ನಾವು ಸೆಪ್ಟೆಂಬರ್‌ನಲ್ಲಿ ಕೆಆರ್ ಪುರಂ ವರೆಗೆ ಪ್ರಯೋಗಿಕ ಓಡಾಟವನ್ನು ಆರಂಭಿಸಲಿದ್ದೇವೆ. ನಂತರ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡೋಣ. ನಾವು ಡಿಸೆಂಬರ್‌ನೊಳಗೆ ವೈಟ್‌ಫೀಲ್ಡ್ ವಿಸ್ತರಣೆಯನ್ನು ಪೂರ್ಣಗೊಳಿಸಲು ಯೋಜಿಸುತ್ತಿದ್ದೇವೆ, ನೋಡೋಣ” ಎಂದು ಪರ್ವೇಜ್ ಹೇಳಿದ್ದಾರೆ. ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗವು 15 ಕಿಲೋಮೀಟರ್‌ಗಿಂತಲೂ ಹೆಚ್ಚು ಸಾಗುತ್ತದೆ ಮತ್ತು ಎರಡು ರೀಚ್‌ಗಳನ್ನು ಹೊಂದಿರುತ್ತದೆ – R1A, ಬೈಯಪ್ಪನಹಳ್ಳಿಯಿಂದ ಸೀತಾರಾಮ ಪಾಳ್ಯದವರೆಗಿನ 8.67 ಕಿಮೀ ವಿಸ್ತರಣೆ ಮತ್ತು R1B, ಸೀತಾರಾಮ ಪಾಳ್ಯದಿಂದ ವೈಟ್‌ಫೀಲ್ಡ್‌ವರೆಗಿನ 7.14 ಕಿಮೀ ವ್ಯಾಪ್ತಿ ಇದೆ.
ಸೆಪ್ಟೆಂಬರ್‌ನಲ್ಲಿ ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರಂ ನಡುವಿನ R1A ಸ್ಟ್ರೆಚ್‌ನಲ್ಲಿ ಟ್ರಯಲ್ಸ್ ನಡೆಯುತ್ತೆ. ಬೆನ್ನಿಗಾನಹಳ್ಳಿಯಲ್ಲಿ ಒಂದು ನಿಲ್ದಾಣವನ್ನು ಮಾಡಲಾಗಿದೆ. ಪೂರ್ಣಗೊಂಡಿರುವ ಬೈಯಪ್ಪನಹಳ್ಳಿ ವೈಟ್‌ಫೀಲ್ಡ್ ಮಾರ್ಗವು ಮಹದೇವಪುರ, ಗರುಡಾಚಾರ್ಪಾಳ್ಯ, ಹೂಡಿ ಜಂಕ್ಷನ್, ಸೀತಾರಾಮ ಪಾಳ್ಯ, ಕುಂದಲಹಳ್ಳಿ, ನಲ್ಲೂರಹಳ್ಳಿ, ಶ್ರೀ ಸತ್ಯಸಾಯಿ ಆಸ್ಪತ್ರೆ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ, ಚನ್ನಸಂದ್ರ ಮತ್ತು ವೈಟ್‌ಫೀಲ್ಡ್‌ನಲ್ಲಿ ನಿಲ್ದಾಣವನ್ನು ಮಾಡಲಾಗಿದೆ.
ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ಗೆ ವಿಸ್ತರಣೆ ಮಾಡುವುದರಿಂದ ವೈಟ್‌ಫೀಲ್ಡ್‌ಗೆ ಹೋಗಲು ಅಥವಾ ವೈಟ್‌ಫೀಲ್ಡ್‌ನಿಂದ ನಗರಕ್ಕೆ ಪ್ರಯಾಣಿಸಲು ಪ್ರತಿದಿನ ಎರಡು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ನಿಂತು ಸುಸ್ತಾಗುತ್ತಿದ್ದ ಸಾವಿರಾರು ಪ್ರಯಾಣಿಕರಿಗೆ ಇದು ಅನುಕೂಲವಾಗಲಿದೆ.
BMRCL ಬಿಬಿಎಂಪಿಗೆ ಮೆಟ್ರೋ ನಿರ್ಮಾಣದ ಕಾರಣದಿಂದ ಹೊರವರ್ತುಲ ರಸ್ತೆಯಲ್ಲಿ ಸಂಚಾರಕ್ಕಾಗಿ ಏಳು ಮೇಲ್ಸೇತುವೆಗಳ ಪೈಕಿ ಎರಡನ್ನು ನಿರ್ಮಿಸಲು ಕೇಳಿದೆ. ಮೆಟ್ರೋ ಕಾಮಗಾರಿ ಪೂರ್ಣಗೊಂಡ ನಂತರ ಮೆಟ್ರೋ ರೈಲು ನಿಗಮವು ಸಾರಕ್ಕಿ ಮತ್ತು ಇಟ್ಟಮಡು ಜಂಕ್ಷನ್‌ಗಳಲ್ಲಿ ಜಂಟಿಯಾಗಿ ಮೇಲ್ಸೇತುವೆಗಳನ್ನು ನಿರ್ಮಿಸಲಿದೆ. ಹೊರ ವರ್ತುಲ ರಸ್ತೆಯಲ್ಲಿ ಫ್ಲೈಓವರ್‌ಗಳನ್ನು ನಿರ್ಮಿಸಲು ಬಿಬಿಎಂಪಿ ಯೋಜಿಸಿದ್ದ ಏಳು ಸ್ಥಳಗಳಲ್ಲಿ ನಾವು ಐದು ಫ್ಲೈಓವರ್‌ಗಳಿಗೆ ಅನುಮತಿ ನೀಡಿದ್ದೇವೆ. ಉಳಿದ ಸ್ಥಳಗಳಲ್ಲಿ, ಸಂಯೋಜಿತ ಫ್ಲೈಓವರ್‌ಗಳಿಗೆ ಹೋಗಲು ನಾವು ನಿರ್ಧರಿಸಿದ್ದೇವೆ. ಅವರು ಸಾರಕ್ಕಿ ಮತ್ತು ಇಟ್ಟಮಡುವಿನಲ್ಲಿ ಕಾಮಗಾರಿ ನಡೆಸುತ್ತಿದ್ದು, ರಾಗಿಗುಡ್ಡ ಜಯದೇವ ಸ್ಟ್ರೀಟ್ ಮಾದರಿಯಲ್ಲಿ ಕಾಮಗಾರಿ ನಡೆಯಲಿದೆ ಎಂದು ಬಿಎಂಆರ್‌ಸಿಎಲ್ ಎಂಡಿ ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
Published On - 8:36 pm, Mon, 25 July 22