ಬೆಂಗಳೂರು: ಜುವೆಲ್ಲರಿ ಶಾಪ್ ಮಾಲೀಕರ ಮನೆ ಮೇಲೆ ಐಟಿ ದಾಳಿ ನಡೆಸಿ ಶೋಧ ನಡೆಸುವಾಗ ಅಪ್ರಾಪ್ತ ಹೆಣ್ಣು ಮಕ್ಕಳು ಪತ್ತೆ

| Updated By: ಆಯೇಷಾ ಬಾನು

Updated on: Dec 18, 2023 | 10:52 AM

ಜಯನಗರ ಜುವೆಲ್ಲರಿ ಶೋರೂಂಗಳ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಐಟಿ ರೇಡ್ ವೇಳೆ ಚಿನ್ನದ ಅಂಗಡಿ ಮಾಲೀಕನ ಮನೆಯಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳು ಪತ್ತೆಯಾಗಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಇನ್ನು ತಂತ್ರಜ್ಞಾನ ಬಳಸಿಕೊಂಡು ವಂಚನೆ ಮಾಡ್ತಿದ್ದ ಜಾಲವನ್ನ ಆದಾಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಬೆಂಗಳೂರು: ಜುವೆಲ್ಲರಿ ಶಾಪ್ ಮಾಲೀಕರ ಮನೆ ಮೇಲೆ ಐಟಿ ದಾಳಿ ನಡೆಸಿ ಶೋಧ ನಡೆಸುವಾಗ ಅಪ್ರಾಪ್ತ ಹೆಣ್ಣು ಮಕ್ಕಳು ಪತ್ತೆ
ಅಪ್ರಾಪ್ತ ಹೆಣ್ಣು ಮಕ್ಕಳು
Follow us on

ಬೆಂಗಳೂರು, ಡಿ.18: ಜಯನಗರ ಜುವೆಲ್ಲರಿ ಶೋರೂಂಗಳ ಮೇಲೆ ಐಟಿ ದಾಳಿ (IT Raid) ಪ್ರಕರಣಕ್ಕೆ ಸಂಬಂಧಿಸಿ ದಾಳಿ ವೇಳೆ ಅಕ್ರಮದ ಜಾಡು ಕಂಡು ಆದಾಯ ತೆರಿಗೆ ಅಧಿಕಾರಿಗಳೇ ಶಾಕ್ ಆಗಿದ್ದಾರೆ (Jewellery Shop IT Raid). ಕೋಟ್ಯಾಂತರ ರೂಪಾಯಿ ತೆರಿಗೆ ವಂಚನೆ ಬೆಳಕಿಗೆ ಬಂದಿದೆ. ತಂತ್ರಜ್ಞಾನ ಬಳಸಿಕೊಂಡು ವಂಚನೆ ಮಾಡ್ತಿದ್ದ ಜಾಲವನ್ನ ಆದಾಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಅಂದಾಜು 3 ಸಾವಿರ ಕೆಜಿ‌ ಚಿನ್ನ ಮತ್ತು ವಜ್ರವನ್ನ ಹಣದ ರೂಪದಲ್ಲಿ ಸೇಲ್ ಮಾಡಿದ್ದ ವಂಚಕನನ್ನ IT ಅಧಿಕಾರಿಗಳ ತಂಡ ಪತ್ತೆ ಮಾಡಿದೆ. ಇನ್ನು ಮತ್ತೊಂದೆಡೆ ಐಟಿ ರೇಡ್ ವೇಳೆ ಚಿನ್ನದ ಅಂಗಡಿ ಮಾಲೀಕನ ಮನೆಯಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳು (Chidren) ಪತ್ತೆಯಾಗಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟದೇ ನೂರಾರು ಕೋಟಿ ವಂಚನೆ ಮಾಡಿರುವ ಆರೋಪ ಹಿನ್ನೆಲೆ ಕೆಲ ದಿನಗಳ ಹಿಂದೆ ಜಯನಗರದ 9 ಜುವೆಲ್ಲರಿ ಶಾಪ್​ಗಳಿಗೆ ಸೇರಿದ 15ಕ್ಕೂ ಅಧಿಕ ಸ್ಥಳಗಳಲ್ಲಿ ಐಟಿ ರೇಡ್ ನಡೆದಿತ್ತು. ಜುವೆಲ್ಲರಿ ಶಾಪ್ ಮಾಲೀಕರ ಮನೆ, ಸಂಬಂಧಿಕರ ಮನೆ, ಆಪ್ತರ ಮನೆಗಳ ಮೇಲೆ ದಾಳಿ ಮಾಡಲಾಗಿತ್ತು. ಆಭೂಷನ್ ಆ್ಯಂಡ್ ಗ್ರೂಪ್, ಮಾಲೀಕ ಮಹಾವೀರ್ ಬೋರಾ, ವಿಶಾಲ್ ಬೋರಾ ಫ್ಯಾಮಿಲಿ, ಎಂ ಆರ್ ಜ್ಯೂವೆಲ್ಸ್ ಗ್ರೂಪ್, ಮಂಗಳಂ, ಪೊಲಿಸ್ಕ್, ರಿದ್ದಿ ಸೇರಿ 9ಕ್ಕೂ ಹೆಚ್ಚು ಆಭರಣ ಮಳಿಗೆಗಳ ಮೇಲೆ ಐಟಿ ಅಧಿಕಾರಿಗಳು ಬೃಹತ್ ದಾಳಿ ನಡೆಸಿದ್ದರು. ಜುವೆಲ್ಲರಿ ಶಾಪ್​ ಮಾಲೀಕರು ಸಾಫ್ಟ್‌ವೇರ್ ಹಾಗೂ ಪೆನ್ ಡ್ರೈವ್ ಬಳಸಿ ಅಕ್ರಮವನ್ನ ಮಾಡ್ತಿದ್ದ ಬಗ್ಗೆ ತಿಳಿದು ಬಂದಿದೆ. ಪೆನ್ ಡ್ರೈವ್ ಹಾಗೂ ಸಿಸ್ಟಂ ಬೆಸ್ಡ್ ವಂಚನೆಯನ್ನ ಐಟಿ ಪರಿಣಿತರ ತಂಡ ಪತ್ತೆ ಮಾಡಿದೆ. ಕಳೆದ 5 ದಿನ 60ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ನಿರಂತರ ಶೋಧ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 9 ಚಿನ್ನಾಭರಣ ಮಳಿಗೆ ಮೇಲೆ ಐಟಿ ದಾಳಿ, ಚಿನ್ನದ ವ್ಯಾಪಾರಿ ಓರ್ವನ ಮನೆಯಲ್ಲಿ 3 ದಿನಗಳಿಂದ ಶೋಧ

ಐಟಿ ರೇಡ್ ವೇಳೆ ಅಪ್ರಾಪ್ತ ಹೆಣ್ಣು ಮಕ್ಕಳು ಪತ್ತೆ

ಇನ್ನು ಮತ್ತೊಂದೆಡೆ ಜುವೆಲ್ಲರಿ ಶಾಪ್ ಮನೆ ಮಾಲೀಕರ ಮನೆಯಲ್ಲಿ ಶೋಧ ನಡೆಸುವಾಗ 10 ಮತ್ತು 8 ವರ್ಷದ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಪತ್ತೆಯಾಗಿದ್ದಾರೆ. ಯಡಿಯೂರಿನ ಸಾಕಮ್ಮ ಗಾರ್ಡನ್ ನಲ್ಲಿರುವ  ಗೌರವ್ ಚೋರ್ಡಿಯಾ ಎಂಬ ಚಿನ್ನದ ಅಂಗಡಿ ಮಾಲೀಕನ ಮನೆಯಲ್ಲಿ ಬಿಹಾರದ ಗಾಯಾ ಜಿಲ್ಲೆ ಮೂಲದ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಪತ್ತೆಯಾಗಿದ್ದಾರೆ. ಮಕ್ಕಳನ್ನು ಮನೆಯ ಮಾಲಕಿ ಪಿಂಕಿ ಜೈನ್ ಆರೈಕೆಗೆ ಕರೆತಂದಿದ್ದಾಗಿ ತಿಳಿದು ಬಂದಿದೆ. ಸದ್ಯ  ಐಟಿ ಅಧಿಕಾರಿಗಳು ಅಪ್ರಾಪ್ತ ಹೆಣ್ಣು ಮಕ್ಕಳನ್ನ ರಕ್ಷಣೆ ಮಾಡಿ ಹಿರಿಯ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ.

ಕಾನೂನು ಬಾಹಿರವಾಗಿ ಮಕ್ಕಳ ಬಳಕೆ ವಿಚಾರವಾಗಿ ಜಯನಗರ ಪೊಲೀಸ್ ಠಾಣೆಯಲ್ಲಿ ಅಭೂಷಣ್ ಕುಟುಂಬದ ಮೇಲೆ FIR​ ದಾಖಲಾಗಿದೆ. ಅಶೋಕ್ ಕುಮಾರ್, ಶ್ರೇಯಸ್ ಚೌಡರೆ, ಗೌರವ್ ಮೇಲೆ FIR ದಾಖಲಾಗಿದೆ. ಸದ್ಯ ಅಪ್ರಾಪ್ತ ಮಕ್ಕಳು ಸಿದ್ದಾಪುರದ ಬಾಲ ರಕ್ಷಣಾ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಜಯನಗರ ಪೊಲೀಸರು ಆರೋಪಿಗಳ ವಿರುದ್ಧ ಸುಮೋಟೊ(ಸ್ವಯಂ ಪ್ರೇರಿತ) ಕೇಸ್ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:37 am, Mon, 18 December 23