ಬೆಂಗಳೂರು, ನ.23: ಇತ್ತೀಚೆಗೆ ಖಾಸಗಿ ಸಂಸ್ಥೆಯೊಂದು ಸಮೀಕ್ಷೆಯನ್ನು ನಡೆಸಿದ್ದು ಶೇ.31 ರಷ್ಟು ಬೆಂಗಳೂರಿಗರು ಪ್ರತಿದಿನ ಬಿಸ್ಕೆಟ್, ಕೇಕ್ ಮತ್ತು ಬೇಕರಿ ಉತ್ಪನ್ನಗಳನ್ನು ತಿನ್ನುತ್ತಾರೆ ಎಂಬ ಸಂಗತಿ ಬಯಲಾಗಿದೆ (Bakery Products). ಈ ಸಮೀಕ್ಷೆಗೆ ಒಳಪಟ್ಟ 2,101 ಜನರಲ್ಲಿ ಕೇವಲ 11 ಪ್ರತಿಶತದಷ್ಟು ಜನರು ಮಾತ್ರ ತಮ್ಮ ಕುಟುಂಬದಲ್ಲಿ ತಿಂಗಳಿಗೊಮ್ಮೆಯೂ ಬೇಕರಿ ಉತ್ಪನ್ನಗಳನ್ನು ತಿನ್ನುವುದಿಲ್ಲ ಎಂದು ಹೇಳಿವೆ. ಸಮೀಕ್ಷೆಗೆ ಒಳಗಾದವರಲ್ಲಿ ಹೆಚ್ಚಿನವರು ತಿಂಗಳಿಗೆ ಅನೇಕ ಬಾರಿ ಬೇಕರಿ ವಸ್ತುಗಳನ್ನು ತಿನ್ನುತ್ತಾರೆ ಎಂದು ಒಪ್ಪಿಕೊಂಡಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಬೇಕರಿ ಐಟಮ್ಗಳನ್ನು ಶೇ.31 ರಷ್ಟು ಜನ ತಿನ್ನುತ್ತಾರೆ ಎಂದು ತಿಳಿದು ಬಂದಿದೆ.
ಸಂಸ್ಕರಿಸಿದ, ಹಿಟ್ಟಿನ ಪದಾರ್ಥಗಳು ಮತ್ತು ಸಕ್ಕರೆ ಬಳಸಿ ತಯಾರಿಸಿದ ವಸ್ತುಗಳ ಸೇವನೆಯು ದೀರ್ಘಾವಧಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ನಾವು ಸೇವಿಸುವ ಆಹಾರದ ಮೇಲೆ ಗಮನ ಇಡುವುದು ಅತಿ ಮುಖ್ಯ, ಅದರಲ್ಲೂ ಬೇಕರಿ ಪದಾರ್ಥಗಳು ಹೆಚ್ಚಿನವು ಮೈದಾ, ಸಕ್ಕರೆಗಳಿಂದಲೇ ಮಾಡಲಾಗುತ್ತೆ. ಪ್ರತಿನಿತ್ಯ ಸಕ್ಕರೆಯಿಂದ ಮಾಡಲಾದ ಪದಾರ್ಥಗಳನ್ನು ಸೇವಿಸುವುದರಿಂದ ಅನಾರೋಗ್ಯಕರ ತೂಕ ಹೆಚ್ಚಾಗುವುದು ಮತ್ತು ಬೊಜ್ಜು ಉಂಟಾಗುತ್ತದೆ. ಇದು ಅಂತಿಮವಾಗಿ ಹಲವಾರು ಇತರ ತೊಡಕುಗಳಿಗೆ, ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಅಪೊಲೊ ಆಸ್ಪತ್ರೆಗಳ ಕ್ರಿಟಿಕಲ್ ಕೇರ್ ವೈದ್ಯ ಡಾ.ರವೀಂದ್ರ ಮೆಹ್ತಾ ತಿಳಿಸಿದ್ದಾರೆ.
ಸ್ಥೂಲಕಾಯತೆಯು ಜಡ ಜೀವನಶೈಲಿಗೆ ಕಾರಣವಾಗುತ್ತದೆ ಮತ್ತು ದೇಹದ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆಯಲ್ಲಿ ಉಸಿರುಕಟ್ಟುವಿಕೆಯಿಂದ ಹಿಡಿದು ಹೃದಯದ ಸಮಸ್ಯೆಗಳವರೆಗೆ, ದೀರ್ಘಾವಧಿಯ ಪರಿಣಾಮಗಳು ಹಲವು. ಒಮ್ಮೆ ಅನಾರೋಗ್ಯಕರ ತೂಕ ಹೆಚ್ಚಾಗುವುದು ಮತ್ತು ಸ್ಥೂಲಕಾಯತೆ ಇದ್ದರೆ, ಅದು ಆರೋಗ್ಯಕ್ಕೆ ಮಾರಕ. ಇದು ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಜೊತೆಗೆ ಪಾರ್ಶ್ವವಾಯು ಮತ್ತು ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (PHANA) ಚುನಾಯಿತ ಅಧ್ಯಕ್ಷ ಡಾ.ಗೋವಿಂದಯ್ಯ ಯತೀಶ್ ವಿವರಿಸಿದರು.
ಇದನ್ನೂ ಓದಿ: Old Bakeries in India : ನೀವೊಮ್ಮೆ ಭೇಟಿ ನೀಡಲೇಬೇಕಾದ ಭಾರತದಲ್ಲಿರುವ ಸ್ವಾತಂತ್ರ್ಯ ಪೂರ್ವ ಬೇಕರಿಗಳು ಇಲ್ಲಿದೆ ನೋಡಿ
ಈಗಾಗಲೇ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಅನಿಯಂತ್ರಿತ ಸೇವನೆಯು ಮತ್ತಷ್ಟು ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತದೆ ಎಂದು ಡಾ ಮೆಹ್ತಾ ಹೇಳಿದರು. “ಏಕಾ ಏಕಿ ತೂಕ ಹೆಚ್ಚುವುದು ಆಸ್ತಮಾ ಮತ್ತು ಮಧುಮೇಹದಂತಹ ರೋಗಗಳಿಗೆ ಕಾರಣವಾಗುತ್ತದೆ. ಅಲ್ಲದೆ, ಅಂತಹ ಕಾಯಿಲೆಗಳ ಕುಟುಂಬದ ಇತಿಹಾಸ ಹೊಂದಿರುವವರಿಗೆ ಇದು ಮತ್ತಷ್ಟು ಅಪಾಯಕಾರಿ ಎಂದು ಅವರು ಹೇಳಿದರು.
ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆ ಪ್ರಕಾರ, 2,008 ಭಾಗವಹಿಸುವವರಲ್ಲಿ ಶೇಕಡಾ 8 ರಷ್ಟು ಜನರು ಪ್ರತಿದಿನ ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಗಳನ್ನು ಸೇವಿಸಿದ್ದಾರೆ ಮತ್ತು 2,113 ಭಾಗವಹಿಸುವವರಲ್ಲಿ ಶೇಕಡಾ 7 ರಷ್ಟು ಜನರು ಪ್ರತಿದಿನ ಐಸ್ ಕ್ರೀಂ ಸೇವಿಸುತ್ತಾರೆ ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ಬೇಕರಿ ಪದಾರ್ಥಗಳು ತೂಕ ಹೆಚ್ಚಿಸುವಂತಹ ಗಂಭೀರ ಸಮಸ್ಯೆಗೆ ಕಾರಣವಾಗಿದ್ದು ತೂಕ ಹೆಚ್ಚಾಗುವುದರಿಂದ ಇತರೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಹಾಗಾಗಿ ಆದಷ್ಟು ನೀವು ಸೇವಿಸುವ ಪದಾರ್ಥದ ಬಗ್ಗೆ ಗಮನವಿರಲಿ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ