ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಸ್ಫೋಟಕ ವಿಚಾರ ಎನ್​ಐಎ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್​ಐಎ ಅಧಿಕಾರಿಗಳು ಆರೋಪಿ ಶಾರೀಕ್ ಸೇರಿದಂತೆ ನಾಲ್ವರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಪುಟಗಳ ಚಾರ್ಜ್​ಶೀಟ್ ಅನ್ನು ಇನ್ನೇನು ಕೆಲವೇ ದಿನಗಳಲ್ಲಿ ಸಲ್ಲಿಸಲಾಗುತ್ತಿದೆ. ಇದರಲ್ಲಿನ ಸ್ಫೋಟಕ ಅಂಶಗಳು ಇಲ್ಲಿವೆ.

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಸ್ಫೋಟಕ ವಿಚಾರ ಎನ್​ಐಎ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ (ಎಡಚಿತ್ರ)
Follow us
Prajwal Kumar NY
| Updated By: Rakesh Nayak Manchi

Updated on:Nov 23, 2023 | 10:16 AM

ಬೆಂಗಳೂರು, ನ.23: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ (Mangalore cooker bomb blast) ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಆರೋಪಿ ಶಾರೀಕ್ ಸೇರಿದಂತೆ ನಾಲ್ವರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಪುಟಗಳ ಚಾರ್ಜ್​ಶೀಟ್ ಅನ್ನು ಇನ್ನೇನು ಕೆಲವೇ ದಿನಗಳಲ್ಲಿ ಸಲ್ಲಿಸಲಾಗುತ್ತಿದೆ. ಇದರಲ್ಲಿನ ಸ್ಫೋಟಕ ಅಂಶಗಳು ಇಲ್ಲಿವೆ.

ಪ್ರಮುಖ ಆರೋಪಿ ಶಾರಿಕ್, ಮಾಜ್ ಮುನೀರ್, ಯಾಸೀನ್, ಅರಾಫತ್ ಹೇಳಿಕೆಗಳನ್ನು ಎನ್​ಐಎ ಅಧಿಕಾರಿಗಳು ಚಾರ್ಜ್​ಶೀಟ್​ನಲ್ಲಿ ದಾಖಲಿಸಿಕೊಂಡಿದ್ದಾರೆ. ಸ್ಫೋಟಕ್ಕೆ ಎಲ್ಲೆಲ್ಲಿ ಪ್ಲ್ಯಾನ್ ಮಾಡಲಾಗಿತ್ತು, ತರಬೇತಿ ಎಲ್ಲಿ ನಡೆಸಲಾಗಿತ್ತು? ಯಾರೆಲ್ಲಾ ಕೃತ್ಯದಲ್ಲಿ ಇದ್ದರು ಎಂಬುದರ ಬಗ್ಗೆ ಉಲ್ಲೇಖಿಸಲಾಗಿದೆ. ಸ್ಥಳ ಮಹಜರು ವೇಳೆ ಟ್ರೈನಿಂಗ್ ಪಡೆದಿದ್ದ ತುಂಗಾ ನದಿ ತೀರದ ಸ್ಥಳವನ್ನು ಶಾರೀಕ್ ಈಗಾಗಲೇ ತೋರಿಸಿದ್ದಾನೆ.

ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿರುವ ಅಂಶಗಳು

ಕದ್ರಿ ದೇವಸ್ಥಾನ ಸ್ಫೋಟಕ್ಕೆ ಎಲ್ಲೇಲ್ಲಿ ಪ್ಲ್ಯಾನಿಂಗ್ ಆಗಿತ್ತು, ತರಬೇತಿ ಎಲ್ಲಿ ನಡೆಸಲಾಗಿತ್ತು, ಯಾರೆಲ್ಲರು ಟೀಂನಲ್ಲಿ ಇದ್ದರು, ಕದ್ರಿ ದೇವಸ್ಥಾನ ಬ್ಲಾಸ್ಟ್ ಬಳಿಕ ಉಡುಪಿ ಕೃಷ್ಣಾಮಠ, ಚಿಕ್ಕಮಗಳೂರು ಬಿಜೆಪಿ ಕಚೇರಿ ಬ್ಲಾಸ್ಟ್ ಹೊಣೆಯೂ ಇದೇ ಶಾರಿಕ್ ವಹಿಸಿದ್ದ. ಇದರ ಜೊತೆಗೆ ಕೆಲ ಮಠಗಳನ್ನು ಟಾರ್ಗೆಟ್ ಮಾಡಿದ್ದು, ಅವುಗಳ ಬ್ಲ್ಯಾಸ್ಟ್​​ಗೂ ಸಂಚು ರೂಪಿಸಿದ್ದ ಬಗ್ಗೆಯೂ ಉಲ್ಲೇಖಿಸಲಾಗಿದೆ. ಜೊತೆಗೆ, ಆರು ತಿಂಗಳ ಕಾಲ ನಿರಂತರವಾಗಿ ತರಬೇತಿ ಪಡೆದ ಬಗ್ಗೆಯೂ ಮಾಹಿತಿ ಇದರಲ್ಲಿದೆ.

ಇದನ್ನೂ ಓದಿ: ಬೆಂಗಳೂರಿಗೆ 10,000ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರ ಎಂಟ್ರಿ! ಚುರುಕುಗೊಂಡ ಎನ್​ಐಎ ತನಿಖೆ

ಅಲ್ಲದೆ, ವಿದೇಶಿ ಹ್ಯಾಂಡ್ಲರ್​ಗಳ ಬಗ್ಗೆಯೂ ಸ್ಫೋಟಕ ವಿಚಾರಗಳನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಸ್ಪೋಟಕಗಳನ್ನು ಖರೀದಿಗೆ ವಿದೇಶದಿಂದ ಹಣ ಸಾಕಷ್ಟು ಹಣ ಬರುತ್ತಿತ್ತು. ಇದೇ ಹಣದಿಂದ ಆರೋಪಿಗಳು ಸ್ಫೋಟಕಕ್ಕೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತಿದ್ದರು. ಜೊತೆಗೆ ಇವರ ಖರ್ಚು ವೆಚ್ಚಗಳನ್ನು ಹ್ಯಾಂಡ್ಲರ್​ಗಳೇ ನೋಡಿಕೊಳ್ಳುತ್ತಿದ್ದರು ಎಂಬುದು ಉಲ್ಲೇಖವಾಗಿದೆ.

ಅಷ್ಟೇ ಅಲ್ಲದೆ, ವಿದೇಶದಿಂದ ಯಾವೆಲ್ಲ ಖಾತೆಗಳಿಂದ ಹಣ ಬಂದಿದೆ, ಯಾವ ಅಕೌಂಟ್​ಗಳಿಗೆ ಬಂದಿದೆ ಎಂಬ ದಾಖಲೆಗಳ ಜೊತೆಗೆ ಭಟ್ಕಳ್ ಗ್ಯಾಂಗ್ ಮೀರಿಸುವಷ್ಟು ನೆಟ್​ವರ್ಕ್ ಬೆಳೆಸಲು ಪ್ಲ್ಯಾನ್ ಹಾಕಿದ್ದರ ಬಗ್ಗೆಯೂ ಚಾರ್ಜ್​​ಶೀಟ್​ನಲ್ಲಿ ಉಲ್ಲೇಖ ಮಾಡಲಾಗಿದೆ.

ಪ್ರಕರಣದ ಹಿನ್ನೆಲೆ

ನವೆಂಬರ್ 19. 2022 ರಂದು ಮಂಗಳೂರಿನಲ್ಲಿ ಸ್ಫೋಟಗೊಂಡ ಬಾಂಬ್ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಮಂಗಳೂರಿನಲ್ಲಿ 2020 ರಲ್ಲಿ ಬರೆಯಲ್ಪಟ್ಟಿದ್ದ ಉಗ್ರ ಗೋಡೆ ಬರಹ ಪ್ರಕರಣದ ಆರೋಪಿಯಾಗಿದ್ದ ಮಹಮ್ಮದ್ ಶಾರೀಕ್ ತಂದ ಬಾಂಬ್ ಅವನ ಕಾಲ ಬುಡದಲ್ಲೇ ಸ್ಫೋಟಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಕರ್ನಾಟಕದಲ್ಲಿ ಐಸಿಸ್ ಮಾದರಿ ಕೃತ್ಯಕ್ಕೆ ಸಂಚು ರೂಪಗೊಂಡಿದ್ದು ಈ ಸ್ಫೋಟದಿಂದ ಬಯಲಾಗಿತ್ತು.

ಅಲ್ಲದೆ, ಶಿವಮೊಗ್ಗದಲ್ಲಿ ಶಂಕಿತ ಉಗ್ರ ಮಾಝ್ ಮುನೀರ್ ಅಹ್ಮದ್ ಬಂಧನವಾಗುತ್ತಿದ್ದಂತೆ ಶಾರೀಕ್ ಅಲ್ಲಿಂದ ಪರಾರಿಯಾಗಿ ಮಂಗಳೂರು, ಮೈಸೂರು, ಕೇರಳ, ತಮಿಳುನಾಡು ಸುತ್ತಾಡಿಕೊಂಡಿದ್ದ. ಹಿಂದೂ ವೇಶ ಧರಿಸಿ ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿಂದ ತನ್ನ ಉಗ್ರ ಕೃತ್ಯ ಮುಂದುವರೆಸಿದ್ದ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:04 am, Thu, 23 November 23