ಬೆಂಗಳೂರು: ಚಿಂದಿ ಆಯುವ ವ್ಯಕ್ತಿಗೆ ರೈಲು ಹಳಿಯಲ್ಲಿ ಸಿಕ್ತು 30 ಲಕ್ಷ ಡಾಲರ್! ಅಸಲಿಯತ್ತೇನು?
ಚಿಂದಿ ಆಯುವ ವ್ಯಕ್ತಿ ಬೆಂಗಳೂರಿನ ನಾಗವಾರ ರೈಲು ನಿಲ್ದಾಣದ ಸುತ್ತಮುತ್ತ ತ್ಯಾಜ್ಯ ವಸ್ತುಗಳನ್ನು ಹುಡುಕುತ್ತಿದ್ದಾಗ ರೈಲ್ವೆ ಹಳಿ ಮೇಲೆ ಕಪ್ಪು ಚೀಲ ಪತ್ತೆಯಾಗಿದೆ. ಅದರಲ್ಲಿ ಅಮೆರಿಕನ್ ಡಾಲರ್ ಕರೆನ್ಸಿ ಪತ್ತೆಯಾಗಿದ್ದು, ಇವುಗಳು ನಕಲಿಯಾಗಿರಬಹುದು ಎಂದು ಶಂಕಿಸಲಾಗಿದೆ. ಅವುಗಳನ್ನು ಸಂಪೂರ್ಣ ಪರಿಶೀಲನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಕಳುಹಿಸಲಾಗಿದೆ ಎಂದು ಹೆಬ್ಬಾಳ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು, ನವೆಂಬರ್ 7: ರೈಲು ಹಳಿಯಲ್ಲಿ ಚಿಂದಿ ಆಯುವ (Ragpicker) ವ್ಯಕ್ತಿಯೊಬ್ಬರಿಗೆ ವಿಶ್ವಸಂಸ್ಥೆಯ ಮುದ್ರೆ ಹೊಂದಿರುವ ಪತ್ರದ ಜತೆಗೆ 30 ಲಕ್ಷ ಅಮೆರಿಕನ್ ಡಾಲರ್ (USD 3 million) ಮೌಲ್ಯದ ಕರೆನ್ಸಿಯ ಕಟ್ಟು ಇದ್ದ ಪ್ಲಾಸ್ಟಿಕ್ ಚೀಲವೊಂದು ಸಿಕ್ಕಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಡಾಲರ್ ಕರೆನ್ಸಿಯ ಸತ್ಯಾಸತ್ಯತೆ ಇನ್ನೂ ದೃಢವಾಗಿಲ್ಲ. ಪಶ್ಚಿಮ ಬಂಗಾಳದ ನಾದಿಯಾದಿಂದ ವಲಸೆ ಬಂದಿರುವ ಚಿಂದಿ ಆಯುವ ಸೇಲ್ಮನ್ ಎಸ್‌ಕೆ, ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇವರು ಶುಕ್ರವಾರ ನಾಗವಾರ ರೈಲು ನಿಲ್ದಾಣದ ಸುತ್ತಮುತ್ತ ತ್ಯಾಜ್ಯ ವಸ್ತುಗಳನ್ನು ಹುಡುಕುತ್ತಿದ್ದಾಗ ರೈಲ್ವೆ ಹಳಿ ಮೇಲೆ ಕಪ್ಪು ಚೀಲ ಪತ್ತೆಯಾಗಿದೆ. ಅದನ್ನವರು ಅಮೃತಹಳ್ಳಿಯ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಮನೆಯಲ್ಲಿ ಚೀಲವನ್ನು ತೆರೆದಾಗ ಡಾಲರ್ ಕರೆನ್ಸಿಯ ಕಟ್ಟುಗಳು ಕಂಡುಬಂದಿವೆ.
ಡಾಲರ್ ಕಟ್ಟುಗಳನ್ನು ನೋಡಿ ಏನು ಮಾಡಬೇಕೆಂದು ತಿಳಿಯದೆ ಸೇಲ್ಮನ್, ಸ್ಕ್ರ್ಯಾಪ್ ಡೀಲರ್ ಬಪ್ಪ ಎಂಬರಿಗೆ ದೂರವಾಣಿ ಕರೆ ಮಾಡಿ ತನಗೆ ಸಿಕ್ಕ ಕರೆನ್ಸಿ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಪ್ರಯಾಣದಲ್ಲಿದ್ದ ಬಪ್ಪ ಅವರು, ತಾನು ಬೆಂಗಳೂರಿಗೆ ಹಿಂದಿರುಗುವವರೆಗೆ ಕರೆನ್ಸಿಯನ್ನು ತನ್ನ ಬಳಿ ಇಟ್ಟುಕೊಳ್ಳುವಂತೆ ಸೇಲ್ಮನ್ಗೆ ಹೇಳಿದ್ದಾರೆ. ತನ್ನ ಮನೆಯಲ್ಲಿ ಕರೆನ್ಸಿ ಇಟ್ಟರೆ ಸಮಸ್ಯೆಯಾಗಬಹುದು ಎಂದುಕೊಂಡ ಸೇಲ್ಮನ್ ಭಾನುವಾರ ಸ್ವರಾಜ್ ಇಂಡಿಯಾದ ಸಾಮಾಜಿಕ ಕಾರ್ಯಕರ್ತ ಆರ್ ಕಲೀಂ ಉಲ್ಲಾ ಅವರನ್ನು ಸಂಪರ್ಕಿಸಿದ್ದಾರೆ.
ಕಲೀಂ ಉಲ್ಲಾ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರಿಗೆ ವಿಷಯ ತಿಳಿಸಿದ್ದಾರೆ. ನಾನು ಕಮಿಷನರ್‌ಗೆ ಕರೆನ್ಸಿ ಬಗ್ಗೆ ತಿಳಿಸಿದಾಗ, ಅವರು ಅದರ ಜೊತೆಗೆ ಸೇಲ್ಮನ್ನನ್ನು ಕಚೇರಿಗೆ ಕರೆತರುವಂತೆ ಹೇಳಿದರು. ಇನ್ನೂ ಆಘಾತದಲ್ಲಿದ್ದ ಸೇಲ್ಮನ್ ಅವರು ರೈಲ್ವೆ ಹಳಿಯಲ್ಲಿ ಡಾಲರ್ ಕರೆನ್ಸಿ ಸಿಕ್ಕಿತ್ತು ಎಂದು ತಿಳಿಸಿದ್ದಾರೆ. ಕಮಿಷನರ್ ತಕ್ಷಣ ಹೆಬ್ಬಾಳ ಪೊಲೀಸರಿಗೆ ಕರೆ ಮಾಡಿ ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಿದ್ದರು ಎಂದು ಉಲ್ಲಾ ಹೇಳಿರುವುದಾಗಿ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಇದನ್ನೂ ಓದಿ: ಜಯನಗರ: ಬೀದಿಬದಿ ಅಂಗಡಿಗಳ ತೆರವು: ಬಿಬಿಎಂಪಿ ವಿರುದ್ಧ ವ್ಯಾಪಾರಸ್ಥರ ಆಕ್ರೋಶ
‘ಆರ್ಥಿಕ ಮತ್ತು ಹಣಕಾಸು ಸಮಿತಿಯು ದಕ್ಷಿಣ ಸುಡಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಿಗೆ ಸಹಾಯ ಮಾಡಲು ಭದ್ರತಾ ಮಂಡಳಿಯ ಸದಸ್ಯರು ಮತ ಚಲಾಯಿಸಿದ ವಿಶೇಷ ನಿಧಿಯನ್ನು ಇರಿಸುತ್ತದೆ. ಈ ಪ್ರದೇಶಗಳಲ್ಲಿನ ಭಯೋತ್ಪಾದಕರು ಮತ್ತು ಸರ್ವಾಧಿಕಾರಿಗಳಂತಹ ಅನಧಿಕೃತ ವ್ಯಕ್ತಿಗಳು ಬ್ಯಾಂಕಿಂಗ್ ಕಾರ್ಯಾಚರಣೆಗಳು ಮತ್ತು ಅಂತಹ ಕರೆನ್ಸಿಯನ್ನು ಹೈಜಾಕ್ ಮಾಡುವುದರಿಂದ, ವಿಶ್ವಸಂಸ್ಥೆಯು ನೋಟುಗಳನ್ನು ಸುರಕ್ಷಿತವಾಗಿರಿಸಲು, ಸುರಕ್ಷಿತವಾಗಿ ಗಮ್ಯಸ್ಥಾನವನ್ನು ತಲುಪಲು ನೋಟುಗಳ ಮೇಲೆ ಲೇಸರ್ ಸ್ಟ್ಯಾಂಪ್ ಲಗತ್ತಿಸಲು ಹಣಕಾಸು ಸಮಿತಿಗೆ ಅಧಿಕಾರ ನೀಡಿತು’ ಎಂದು ಕರೆನ್ಸಿಯೊಂದಿಗೆ ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾದ ವಿಶ್ವಸಂಸ್ಥೆ ಮುದ್ರೆಯನ್ನು ಹೊಂದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ. “
ಈ ಡಾಲರ್ ಕಟ್ಟುಗಳು ನಕಲಿಯಾಗಿರಬಹುದು ಎಂದು ಶಂಕಿಸಲಾಗಿದ್ದು, ಅವುಗಳನ್ನು ಸಂಪೂರ್ಣ ಪರಿಶೀಲನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಕಳುಹಿಸಲಾಗಿದೆ ಎಂದು ಹೆಬ್ಬಾಳ ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:21 pm, Tue, 7 November 23