ಬೆಂಗಳೂರು, ಜನವರಿ 1: ಅಲ್ಲಿ ಕಾಣಿಸಿದ್ದೆಲ್ಲ ಕೇಕ್ ಪ್ಯಾಕ್, ಕಿಟ್ ಕ್ಯಾಟ್ ಪ್ಯಾಕ್ಗಳು. ಆದರೆ, ಆ ಪ್ಯಾಕೆಟ್ಗಳಲ್ಲಿ ಇದ್ದಿದ್ದು ಚಾಕೊಲೇಟ್ ಅಥವಾ ಕೇಕ್ ಅಲ್ಲ! ಬದಲಾಗಿ ಹೈಡ್ರೋ ಗಾಂಜಾ. ಈ ಹೈಡ್ರೋ ಗಾಂಜಾ ಬೆಂಗಳೂರಿನ ಮೂಲೆ ಮೂಲೆಯಲ್ಲಿ ನಡೆಯುವ ಪಾರ್ಟಿಗಳಿಗೆ ಸೇರಬೇಕಿತ್ತು. ಆದರೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಲ್ಲದೆ, ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಮೂಲೆ ಮೂಲೆಯಲ್ಲಿ ಹೊಸ ವರ್ಷದ ಪಾರ್ಟಿ ನಡೆಯುವುದು ಸಹಜ. ಹುಡುಗರಿಂದ ತೊಡಗಿ ಹಣ್ಣು ಹಣ್ಣು ಮುದುಕರ ವರೆಗೆ ಅವರದೇ ಆದ ರೀತಿಯಲ್ಲಿ ಪಾರ್ಟಿ ಮಾಡುತ್ತಾರೆ. ಆದರೆ ಪಾರ್ಟಿಯಲ್ಲಿ ಮದ್ಯ ಮಾತ್ರವಲ್ಲದೆ ಒಂದಷ್ಟು ಜನರು ಡ್ರಗ್ಸ್ಗೆ ಮಾರು ಹೋಗುತ್ತಾರೆ. ಅಂತಹವರಿಗೆ ಮಾರಾಟ ಮಾಡಲು ಅಂತ ಥೈಲ್ಯಾಂಡ್ನಿಂದ ತರಿಸಿದ್ದ ಹೈಡ್ರೋ ಗಂಜಾವನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ ಮೂಲದ ರಕ್ಷಿತ್ ರಮೇಶ್ ಎಂಬಾತನನ್ನು ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳು, ಆತನ ಸಂಪಿಗೆಹಳ್ಳಿಯ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆತ ಬೆಂಗಳೂರಿನ ಪಾರ್ಟಿಗಳಿಗೆ ಪೂರೈಕೆ ಮಾಡಲು ತರಿಸಿದ್ದ ಬರೋಬ್ಬರಿ ಹದಿನಾರು ಕೆಜಿ ಗಾಂಜಾ ಸೊಪ್ಪು ಮತ್ತು ಥೈಲ್ಯಾಂಡ್ನಿಂದ ತರಿಸಿದ್ದ ಸುಮಾರು ಮೂರು ಕೆಜಿ ಹೈಡ್ರೋ ಗಾಂಜಾ ದೊರೆತಿದೆ. ಎಂಡಿಎಂಎ, ಎಲ್ಎಸ್ಡಿ ಮತ್ತು ಚರಸ್ ಎಲ್ಲ ಸೇರಿ ಸುಮಾರು 2.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಇನ್ನು ನಗರದ ಯಲಹಂಕ ನ್ಯೂಟೌನ್, ಗೋವಿಂದ ರಾಜನಗರ, ಕಾಮಾಕ್ಷಿ ಪಾಳ್ಯ, ಬಾಗಲೂರು, ಕೊಡಿಗೆಹಳ್ಳಿ, ಅಮೃತಹಳ್ಳಿ ಪೊಲೀಸರು ಸಹ ಗಾಂಜಾ ಮಾರಾಟ ಮಾಡುತ್ತಿದ್ದ ಏಳು ಜನರನ್ನು ಬಂಧಿಸಿ ಪ್ರತ್ಯೇಕ ವಾಗಿ ಸುಮಾರು 40 ಲಕ್ಷ ರೂ. ಮೌಲ್ಯದ ಗಾಂಜಾ ಮತ್ತು ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. 2024ರ ಕೊನೆಯ ದಿನ ಸಹ ಸಿಸಿಬಿಯ ನಾರ್ಕೊಟಿಕ್ಸ್ ವಿಭಾಗ ನಗರ ಪಾರ್ಟಿಗಳ ಮೇಲೆ ಕಣ್ಣಿಟ್ಟಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ