
ಬೆಂಗಳೂರು, ಸೆಪ್ಟೆಂಬರ್ 11: ಪರಪ್ಪನ ಅಗ್ರಹಾರ (parappana agrahara) ಆಗಾಗ ಸುದ್ದಿಯಲ್ಲಿರುತ್ತದೆ. ಕಾರಾಗೃಹದಲ್ಲಿರುವ ವಿಚಾರಣಾಧೀನ ಹಾಗೂ ಸಜಾ ಕೈದಿಗಳಿಗೆ ಕದ್ದುಮುಚ್ಚಿ ಮೊಬೈಲ್ ಪೂರೈಕೆ ಸೇರಿದಂತೆ ಇತ್ತೀಚಿಗಿನ ನಟ ದರ್ಶನ್‌ಗೆ ದೊರಕುತ್ತಿದ್ದ ರಾಜಾತಿಥ್ಯ ವಿಚಾರವಾಗಿ ಪರಪ್ಪನ ಅಗ್ರಹಾರ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಪರಪ್ಪನ ಅಗ್ರಹಾರ ಮತ್ತೆ ಸುದ್ದಿಯಾಗಿದ್ದು, ಜೈಲು ವಾರ್ಡನ್ನಿಂದಲೇ (warden) ಕೈದಿಗಳಿಗೆ ಮಾದಕ ವಸ್ತುಗಳ ಪೂರೈಕೆ ಮಾಡಲಾಗಿದೆ.
ನೈಟ್ ಶಿಫ್ಟ್ನಲ್ಲಿ ಪರಪ್ಪನ ಅಗ್ರಹಾರ ವಾರ್ಡನ್ ಆಗಿದ್ದ ಕಲ್ಲಪ್ಪ, ಕೈದಿಗಳಿಗೆ ತಂಬಾಕು, ಮಾದಕ ವಸ್ತು ಪೂರೈಸುತ್ತಿದ್ದ. ಸದ್ಯ ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಂದ ಆರೋಪಿ ಕಲ್ಲಪ್ಪನನ್ನು ಬಂಧಿಸಲಾಗಿದೆ. ಬಂಧಿತನಿಂದ ಖಾಕಿ ಪ್ಯಾಂಟ್ನಲ್ಲಿ ಸೆಲ್ಲೋಟೇಪ್ ಸುತ್ತಿ ಇಟ್ಟಿದ್ದ 100 ಗ್ರಾಂ ಆಶಿಶ್ ಆಯಿಲ್ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ದುಡ್ಡಿದ್ದವರದ್ದೇ ದುನಿಯಾ: ಬಿಸಿ ನೀರು, ಎಣ್ಣೆ, ಸಿಗರೇಟು, ಊಟಕ್ಕೆ ಒಂದೊಂದು ರೇಟ್
ಸದ್ಯ ಪೊಲೀಸರು ಕಲ್ಲಪ್ಪನನ್ನ ವಿಚಾರಣೆ ಮಾಡುತ್ತಿದ್ದಾರೆ. ಯಾರಿಂದ ಮಾದಕವಸ್ತು ಖರೀದಿಸಿದ್ದ, ಯಾರಿಗೆ ಪೂರೈಸುತ್ತಿದ್ದ ಎಂದು ತನಿಖೆ ಮಾಡಲಾಗುತ್ತಿದೆ. ಮಾಜಿ ಸೈನಿಕರ ಕೋಟಾದಲ್ಲಿ 2018ರಲ್ಲಿ ಕಾರಾಗೃಹ ಇಲಾಖೆಗೆ ಸೇರಿದ್ದ ಆರೋಪಿ, ಕೆಲ ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದರು.
ಸೆ.7ರ ಸಂಜೆ ಜೈಲಿನ ಡ್ಯೂಟಿಗೆ ಬರುವ ವೇಳೆ ಸಿಐಎಸ್ಎಫ್ ಸಿಬ್ಬಂದಿಗಳಿಂದ ಪ್ರವೇಶ ದ್ವಾರದ ಬಳಿ ಕಲ್ಲಪ್ಪನ ಪರಿಶೀಲನೆ ಮಾಡಲಾಗಿದ್ದು, ಈ ವೇಳೆ ಅವರ ಜೇಬಿನಲ್ಲಿ ತಂಬಾಕು ಮತ್ತು ಆಶಿಶ್ ಆಯಿಲ್ ಪತ್ತೆ ಆಗಿದೆ.
ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ದುಡ್ಡಿದ್ದವರದ್ದೇ ದುನಿಯಾ ಎಂಬ ಮಾತುಗಳು ಕೇಳಿಬಂದಿದ್ದವು. ಏಕೆಂದರೆ ದರ್ಶನ್ ಮಾತ್ರವಲ್ಲದೇ ಪ್ರತಿ ಕೈದಿಗಳಿಗೂ ಸವಲತ್ತುಗಳು ಸಿಗುತಿತ್ತಂತೆ. ಸವಲತ್ತು ಬೇಕಾದರೆ ಸಾವಿರಾರು ರೂ. ಹಣ ನೀಡಬೇಕಂತೆ. ಬಿಸಿ ನೀರು ಸೇರಿದಂತೆ ಎಣ್ಣೆ, ಸಿಗರೇಟು, ಸ್ಪೆಷಲ್ ಊಟಕ್ಕೆ ಒಂದೊಂದು ರೇಟ್ ಫಿಕ್ಸ್ ಮಾಡಲಾಗಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು.
ಇದನ್ನೂ ಓದಿ: ಲಂಚಕ್ಕಾಗಿ ಕೈದಿ ಮೇಲೆ ಹಲ್ಲೆ: ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳ ವಿರುದ್ಧ ದೂರು
ಪರಪ್ಪನ ಅಗ್ರಹಾರ ಜೈಲಿನ ಅಕ್ರಮಗಳ ಹಿನ್ನಲೆ ಇತ್ತೀಚೆಗೆ ಸಿಸಿಬಿ ಪೊಲೀಸರು ದಾಳಿ ಕೂಡ ಮಾಡಿದ್ದರು. ಈ ವೇಳೆ ಜೈಲಿನಲ್ಲಿ ಕಸೂರಿ ಮೇತಿ ಸೊಪ್ಪು, ಬೀಡಿ ಪ್ಯಾಕೆಟ್ಸ್, ಗಾಂಜಾ ಚಿಲ್ಲಮ್, ಮೊಳೆಗಳು, ಹರಿತವಾದ ವಸ್ತುಗಳು, ಗುಟ್ಕಾ, ತಂಬಾಕು ಪ್ಯಾಕೇಟ್ಸ್, ಸುಣ್ಣದ ಡಬ್ಬಿ, ಡೈರಿಗಳು, ಚಾಕುಗಳು, ನಗದು ಹಣ, ಮೊಬೈಲ್ ಚಾರ್ಜರ್, ಕತ್ತರಿ ಸೇರಿ ಕಬ್ಬಿಣದ ರಾಡ್ಗಳು ಕೂಡ ಪತ್ತೆಯಾಗಿದ್ದವು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.