ಬೆಂಗಳೂರು, ಜನವರಿ 16: ಬೆಂಗಳೂರು ನಗರದಿಂದ ವಿವಿಧೆಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವ ಪೀಣ್ಯ ಫ್ಲೈಓವರ್ (Peenya Flyover) ಇಂದು ರಾತ್ರಿಯಿಂದ (ಜನವರಿ 16) ನಾಲ್ಕು ದಿನಗಳ ಕಾಲ ಬಂದ್ ಆಗಿರಲಿದೆ. ರಾಷ್ಟ್ರೀಯ ಹೆದ್ದಾರಿ-4 ರ ಪೀಣ್ಯ ಎಲಿವೇಟೆಡ್ ಹೈವೇಗೆ (Dr. Shivakumara Swamiji Flyover) ಅಳವಡಿಸಿದ್ದ ವಯಾಡಕ್ಟ್ ದುರಸ್ಥಿ ಹಿನ್ನೆಲೆ ಲೋಡ್ ಟೆಸ್ಟಿಂಗ್ ನಡೆಸಲಿರುವ ಕಾರಣ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಜನವರಿ 16 ರ ರಾತ್ರಿ 11 ಗಂಟೆಯಿಂದ ಜನವರಿ 21 ರ ಬೆಳಗ್ಗೆ 11 ಗಂಟೆ ತನಕ ಫ್ಲೈಓವರ್ ಬಂದ್ ಆಗಿರಲಿದ್ದು, ಪರ್ಯಾಯ ಮಾರ್ಗಗಳು ಹಾಗೂ ಸರ್ವೀಸ್ ರಸ್ತೆ ಬಳಸುವಂತೆ ಸಂಚಾರ ಪೊಲೀಸರು ವಾಹನ ಸವಾರರಿಗೆ ಮನವಿ ಮಾಡಿದ್ದಾರೆ.
ನೆಲಮಂಗಲ ಕಡೆಯಿಂದ ಬೆಂಗಳೂರು ನಗರಕ್ಕೆ ಫ್ಲೈ ಓವರ್ ರಸ್ತೆಯ ಮೂಲಕ ಸಾಗುವ ವಾಹನಗಳು ಕೆನ್ನಮೆಟಲ್ ವಿಡಿಯಾ ಹತ್ತಿರ ಫ್ಲೈಓವರ್ ಪಕ್ಕದ ಎನ್ಹೆಚ್-4 ಮತ್ತು ಸರ್ವೀಸ್ ರಸ್ತೆಯ ಮೂಲಕ 8ನೇ ಮೈಲಿ-ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್-ಎಸ್ ಆರ್ ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದಾಗಿದೆ.
ಸಿಎಂಟಿಐ ಜಂಕ್ಷನ್ನಿಂದ ನೆಲಮಂಗಲ ಕಡೆಗೆ ಫ್ಲೈ ಓವರ್ ರಸ್ತೆಯಲ್ಲಿ ಸಾಗುವ ವಾಹನಗಳು ಪಾರ್ಲೆ-ಜಿ ಟೋಲ್ ತಲುಪಲು ಫ್ಲೈ ಓವರ್ ಪಕ್ಕದ ಎನ್ ಹೆಚ್-4 ಮತ್ತು ಸರ್ವೀಸ್ ರಸ್ತೆಯಲ್ಲಿ ಎಸ್ಆರ್ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್-ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ- 8ನೇ ಮೈಲಿ ಮುಖಾಂತರ ಸಂಚರಿಸಲು ಅನುವು ಮಾಡಿಕೊಡಲಾಗಿದೆ.
ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ನಾಗಸಂದ್ರದ ಪಾರ್ಲೆ ಜಿ ಫ್ಯಾಕ್ಟರಿವರೆಗೂ 5 ಕಿಮೀ ಉದ್ದವಿರು ಪೀಣ್ಯ ಮೇಲ್ಸೇತುವೆಯ ವಯಾಡಕ್ಟ್ನ ಸಮಗ್ರತೆ ಹಾಗೂ ಲೋಡ್ ಟೆಸ್ಟಿಂಗ್ ಪರಿಶೀಲನೆ ಸಂಚಾರಕ್ಕೆ ನಿರ್ಬಂಧ ಹೇರಲು ಮುಖ್ಯ ಕಾರಣವಾಗಿದೆ.
ಇದನ್ನೂ ಓದಿ: ವಾಹನ ಸವಾರರೇ ಗಮನಿಸಿ; ಜನವರಿ 16 ರಿಂದ 4 ದಿನ ಪೀಣ್ಯ ಫ್ಲೈಓವರ್ ಬಂದ್
ಲಾರಿ, ಬಸ್ ಸೇರಿದಂತೆ ಭಾರಿ ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್ನಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಿ ಸುಮಾರು ಒಂದೂವರೆ ವರ್ಷವಾಗಿದೆ. ಮೇಲ್ಸೇತುವೆಯಲ್ಲಿ ತಾಂತ್ರಿಕ ದೋಷ ಇದ್ದು ಘನ ವಾಹನಗಳ ಸಂಚಾರಕ್ಕೆ ಯೋಗ್ಯವಲ್ಲ ಎಂದು ಐಐಎಸ್ಸಿ ಎರಡು ವರ್ಷಗಳ ಹಿಂದೆ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಂತರ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:41 am, Tue, 16 January 24