ನಮ್ಮ ಮೆಟ್ರೋ ಪಿಂಕ್ ಲೈನ್ ಬೆಂಗಳೂರಿನ ಅಭಿವೃದ್ಧಿಗೆ ಮತ್ತೊಂದು ಮೈಲಿಗಲ್ಲಾಗಲಿ: ಸಚಿವ ರಾಮಲಿಂಗಾರೆಡ್ಡಿ ಪೋಸ್ಟ್
ಬೆಂಗಳೂರು ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಗೂ ಮುನ್ನ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಪೋಸ್ಟ್ ಹಂಚಿಕೊಂಡಿದ್ದಾರೆ. 2014ರಲ್ಲಿ ಯುಪಿಎ ಸರ್ಕಾರ ಎರಡನೇ ಹಂತದ ಮೆಟ್ರೋ ಯೋಜನೆಗೆ ಅನುಮೋದನೆ ನೀಡಿದ್ದನ್ನು ನೆನಪಿಸಿದ್ದಾರೆ. ಮೆಟ್ರೋ ಅಭಿವೃದ್ಧಿಯಲ್ಲಿ ಕರ್ನಾಟಕ ಸರ್ಕಾರದ ಶೇ. 83.8ರಷ್ಟು ಕೊಡುಗೆಯಿದೆ ಎಂದು ಉಲ್ಲೇಖಿಸಿ, ಕನ್ನಡಿಗರ ತೆರಿಗೆ ಹಣ ಮತ್ತು ರಾಜ್ಯದ ಆರ್ಥಿಕ ಬದ್ಧತೆಗೆ ಸೂಕ್ತ ಗೌರವ ಸಿಗಬೇಕೆಂದು ಒತ್ತಾಯಿಸಿದ್ದಾರೆ.

ಮುಖ್ಯಾಂಶಗಳು
- ಪಿಂಕ್ ಲೈನ್ ಮೂಲ ಯೋಜನೆಗೆ 2014ರಲ್ಲಿ ಯುಪಿಎ ಸರ್ಕಾರ ಅನುಮೋದನೆ ನೀಡಿತ್ತು.
- ಮೆಟ್ರೋ ಯೋಜನೆಯಲ್ಲಿ ಕರ್ನಾಟಕ ಸರ್ಕಾರದ ಪಾಲು ಶೇ. 83.8ರಷ್ಟಿದೆ ಎಂದ ರಾಮಲಿಂಗಾರೆಡ್ಡಿ.
- ಪ್ರಧಾನಿ ಮೋದಿ ಉದ್ಘಾಟನೆಗೂ ಮುನ್ನ ಮೆಟ್ರೋ ಇತಿಹಾಸ ನೆನಪಿಸಿದ ಸಚಿವರು.
ಬೆಂಗಳೂರು, ನವೆಂಬರ್ 12: ನಮ್ಮ ಮೆಟ್ರೋದ ಬಹುನಿರೀಕ್ಷಿತ ಪಿಂಕ್ ಲೈನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಉದ್ಘಾಟಿಸಲಿದ್ದು, ಈ ಬಗ್ಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಂಗಳೂರಿನ ಪಿಂಕ್ ಲೈನ್ ಯೋಜನೆಗೆ ಯುಪಿಎ ಸರ್ಕಾರದ ಅವಧಿಯಲ್ಲೇ ಅಡಿಪಾಯ ಹಾಕಲಾಗಿತ್ತು ಎಂದು ನೆನಪಿಸಿದ್ದಾರೆ. ಜತೆಗೆ ಬೆಂಗಳೂರು ಮೆಟ್ರೋ ಅಭಿವೃದ್ಧಿಯಲ್ಲಿ ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರ ಕೊಡುಗೆಗೂ ಸೂಕ್ತ ಗೌರವ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.
ಸಚಿವರ ಪೋಸ್ಟ್ನಲ್ಲೇನಿದೆ?
ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುವ ಪಿಂಕ್ ಲೈನ್ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೊಸ ವೇಗ ನೀಡಲಿದೆ. ವಿಶೇಷವಾಗಿ ಬೆಂಗಳೂರು ದಕ್ಷಿಣ ಭಾಗದ ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ಮಾರ್ಗ ಮಹತ್ವದ ಪಾತ್ರ ವಹಿಸಲಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಈ ಯೋಜನೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿರುವ ಅವರು, ಇದರ ಹಿಂದಿನ ಇತಿಹಾಸವನ್ನೂ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
2013-14ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ತಾವು ಸಾರಿಗೆ ಸಚಿವ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದೆ ಎಂದು ತಿಳಿಸಿದ್ದಾರೆ. 2014ರ ಜನವರಿ 30ರಂದು ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವ ಸಂಪುಟವು ನಮ್ಮ ಮೆಟ್ರೋದ ಎರಡನೇ ಹಂತಕ್ಕೆ ಅನುಮೋದನೆ ನೀಡಿತ್ತು. ಆಗ ಗೊಟ್ಟಿಗೆರೆ-ನಾಗವಾರ ಮಾರ್ಗವೂ ಯೋಜನೆಯ ಭಾಗವಾಗಿತ್ತು. ಇದೇ ಮಾರ್ಗ ಇದೀಗ ಪಿಂಕ್ ಲೈನ್ ಆಗಿ ಅಭಿವೃದ್ಧಿಯಾಗಿದೆ ಎಂದು ವಿವರಿಸಿದ್ದಾರೆ.
ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ, ಸಂಸದರು, ಸಚಿವರು ಹಾಗೂ ಶಾಸಕರ ಉಪಸ್ಥಿತಿಯಲ್ಲಿ ನವೆಂಬರ್ 13ರಂದು ಬೆಂಗಳೂರಿನ ನಮ್ಮ ಮೆಟ್ರೋದ ಗುಲಾಬಿ ಮಾರ್ಗದ (Pink Line) 7.5 ಕಿ.ಮೀ. ಉದ್ದದ ಮೊದಲ ಕಾರ್ಯಾಚರಣಾ ವಿಭಾಗದ ಉದ್ಘಾಟನೆ ನಡೆಯುತ್ತಿರುವುದು ಸಂತಸದ ವಿಚಾರ.
ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗವು ಬೆಂಗಳೂರು ದಕ್ಷಿಣದ ಸಾರಿಗೆ ವ್ಯವಸ್ಥೆಗೆ ಹೊಸ ವೇಗ ನೀಡಲಿದೆ. ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲಿರುವ ಈ ಯೋಜನೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.
2013-14ರಲ್ಲಿ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ನಾನು ಸಾರಿಗೆ ಸಚಿವನಾಗಿ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೆ.
ಇನ್ನೊಂದು ಮಹತ್ವದ ಸಂಗತಿಯೆಂದರೆ, 2014ರ ಜನವರಿ 30ರಂದು ಯುಪಿಎ ಸರ್ಕಾರದ ಅವಧಿಯಲ್ಲಿಯೇ ಕೇಂದ್ರ ಸಚಿವ ಸಂಪುಟವು ನಮ್ಮ ಮೆಟ್ರೋದ ಎರಡನೇ ಹಂತಕ್ಕೆ ಅನುಮೋದನೆ ನೀಡಿತು. ಗೊಟ್ಟಿಗೆರೆ–ನಾಗವಾರ ಮಾರ್ಗವೂ ಈ ಯೋಜನೆಯ ಭಾಗವಾಗಿತ್ತು. ಇದೇ ಮಾರ್ಗವು ಇಂದು ಗುಲಾಬಿ ಮಾರ್ಗವಾಗಿ ಅಭಿವೃದ್ಧಿಯಾಗುತ್ತಿದೆ.
ಅಂದರೆ, ಇಂದು ಉದ್ಘಾಟನೆಯಾಗುತ್ತಿರುವ ಗುಲಾಬಿ ಮಾರ್ಗದ ಮೂಲ ಯೋಜನೆಗೆ ಅಗತ್ಯವಾದ ಕೇಂದ್ರ ಮಟ್ಟದ ಅನುಮೋದನೆ ಯುಪಿಎ ಸರ್ಕಾರದ ಅವಧಿಯಲ್ಲಿಯೇ ದೊರೆತಿತ್ತು.
ಬೆಂಗಳೂರು ಮೆಟ್ರೋ ಅಭಿವೃದ್ಧಿಗೆ ಯುಪಿಎ ಸರ್ಕಾರ ಹಾಕಿಕೊಟ್ಟ ಅಡಿಪಾಯ, ಕರ್ನಾಟಕದ ವಿವಿಧ ಸರ್ಕಾರಗಳ ನಿರಂತರ ಪ್ರಯತ್ನ ಮತ್ತು ನಂತರದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರವನ್ನು ಇತಿಹಾಸ ಮರೆಯಬಾರದು.
🚇 ಗುಲಾಬಿ ಮಾರ್ಗದ ವೆಚ್ಚದ ವಾಸ್ತವ ಚಿತ್ರಣ
ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 21.26 ಕಿ.ಮೀ. ಉದ್ದದ ಗುಲಾಬಿ ಮಾರ್ಗದ ಯೋಜನೆಯ ಮೂಲ ಅಂದಾಜು ವೆಚ್ಚ ₹8,730 ಕೋಟಿಯಾಗಿತ್ತು. ನಂತರದ ಪರಿಷ್ಕೃತ ಅಂದಾಜಿನ ಪ್ರಕಾರ ವೆಚ್ಚ ₹17,346 ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು ಸುಮಾರು ₹12,000 ಕೋಟಿ.
ನಮ್ಮ ಮೆಟ್ರೋದ ಮೊದಲ, ಎರಡನೇ, 2A, 2B ಹಾಗೂ ಮೂರನೇ ಹಂತಗಳ ಒಟ್ಟು ಯೋಜನಾ ವೆಚ್ಚ ಮತ್ತು ಅಂದಾಜು ವೆಚ್ಚ ₹77,891 ಕೋಟಿ.
– ಕರ್ನಾಟಕ ಸರ್ಕಾರದ ಕೊಡುಗೆ – ₹65,291 ಕೋಟಿ (ಶೇ. 83.8). – ಕೇಂದ್ರ ಸರ್ಕಾರದ ಕೊಡುಗೆ – ₹12,600 ಕೋಟಿ (ಶೇ. 16.2).
ನಮ್ಮ ಮೆಟ್ರೋ ಕನ್ನಡಿಗರ ತೆರಿಗೆ ಹಣ, ಕರ್ನಾಟಕ ಸರ್ಕಾರದ ಆರ್ಥಿಕ ಬದ್ಧತೆ, ಬೆಂಗಳೂರಿನ ಜನರ ಕನಸು ಹಾಗೂ ಹಲವು ದಶಕಗಳ ಅಭಿವೃದ್ಧಿಯ ಪಯಣದ ಪ್ರತೀಕವಾಗಿದೆ.
ಗುಲಾಬಿ ಮಾರ್ಗದ ಉದ್ಘಾಟನೆ ಬೆಂಗಳೂರಿನ ಅಭಿವೃದ್ಧಿಗೆ ಮತ್ತೊಂದು ಮೈಲಿಗಲ್ಲಾಗಲಿ. ನಮ್ಮ ಮೆಟ್ರೋ ನಿರ್ಮಾಣದಲ್ಲಿ ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರ ಕೊಡುಗೆಗೆ ತಕ್ಕ ಗೌರವ ಹಾಗೂ ಮನ್ನಣೆ ದೊರೆಯಲಿ.
ಬೆಂಗಳೂರು ಬೆಳೆದರೆ ಕರ್ನಾಟಕ ಬೆಳೆಯುತ್ತದೆ. ಕರ್ನಾಟಕ ಬೆಳೆದರೆ ದೇಶ ಬೆಳೆಯುತ್ತದೆ.
#RamalingaReddy #NammaMetro #PinkLine #Karnataka #Bengaluru
@narendramodi @DKShivakumar @DrParameshwara
— Ramalinga Reddy (@RLR_BTM) November 12, 2026
ಪಿಂಕ್ ಲೈನ್ ಯೋಜನೆಯ ಮೂಲ ಅಂದಾಜು ವೆಚ್ಚ ಎಷ್ಟು?
ಇನ್ನು ಪಿಂಕ್ ಲೈನ್ ಯೋಜನೆಯ ಮೂಲ ಅಂದಾಜು ವೆಚ್ಚ 8,730 ಕೋಟಿ ರೂ. ಆಗಿದ್ದರೆ, ಪರಿಷ್ಕೃತ ಅಂದಾಜಿನ ಪ್ರಕಾರ 17,346 ಕೋಟಿ ರೂ.ಗೆ ಏರಿಕೆಯಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು ಸುಮಾರು 12,000 ಕೋಟಿ ರೂ. ಎಂದು ಮಾಹಿತಿ ನೀಡಿದ್ದಾರೆ.
ನಮ್ಮ ಮೆಟ್ರೋದ ಮೊದಲ, ಎರಡನೇ, 2A, 2B ಹಾಗೂ ಮೂರನೇ ಹಂತಗಳ ಒಟ್ಟು ಯೋಜನಾ ವೆಚ್ಚ 77,891 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕರ್ನಾಟಕ ಸರ್ಕಾರದ ಕೊಡುಗೆ 65,291 ಕೋಟಿ ರೂ. (ಶೇ. 83.8) ಹಾಗೂ ಕೇಂದ್ರ ಸರ್ಕಾರದ ಪಾಲು 12,600 ಕೋಟಿ ರೂ. (ಶೇ. 16.2) ಎಂದು ಉಲ್ಲೇಖಿಸಿದ್ದಾರೆ.
ಬೆಂಗಳೂರು ಬೆಳೆದರೆ ಕರ್ನಾಟಕ ಬೆಳೆಯುತ್ತದೆ: ರಾಮಲಿಂಗಾ ರೆಡ್ಡಿ
ಮೆಟ್ರೋ ಅಭಿವೃದ್ಧಿಯ ಹಿಂದೆ ಹಲವು ಸರ್ಕಾರಗಳ ನಿರಂತರ ಪ್ರಯತ್ನ ಮತ್ತು ಕೇಂದ್ರ-ರಾಜ್ಯ ಸರ್ಕಾರಗಳ ಸಹಕಾರವಿದೆ. ಇತಿಹಾಸ ಇದನ್ನು ಮರೆಯಬಾರದು. ನಮ್ಮ ಮೆಟ್ರೋ ಕನ್ನಡಿಗರ ತೆರಿಗೆ ಹಣ ಮತ್ತು ಕರ್ನಾಟಕದ ಆರ್ಥಿಕ ಬದ್ಧತೆಯ ಪ್ರತೀಕ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬೆಂಗಳೂರು ಬೆಳೆದರೆ ಕರ್ನಾಟಕ ಬೆಳೆಯುತ್ತದೆ, ಕರ್ನಾಟಕ ಬೆಳೆದರೆ ದೇಶ ಬೆಳೆಯುತ್ತದೆ ಎಂಬ ಸಂದೇಶದೊಂದಿಗೆ ತಮ್ಮ ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
