ಬೆಂಗಳೂರು: ಹಿಂದೂ ಯುವಕನನ್ನು ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರಿಸಿ ಖತ್ನಾ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್ ಸೇರಿ ಮೂವರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಒಟ್ಟು 12 ಮಂದಿಯನ್ನು ಆರೋಪ ಪಟ್ಟಿಯಲ್ಲಿ ಹೆಸರಿಸಿದ್ದಾರೆ. ದೂರಿನ ಅನ್ವಯ ಪ್ರತಿಯೊಬ್ಬರು ಏನು ತಪ್ಪು ಮಾಡಿದ್ದಾರೆ ಎಂಬ ಆರೋಪದ ವಿವರವನ್ನೂ ಪೊಲೀಸರು ದಾಖಲಿಸಿದ್ದಾರೆ. ಅದರಂತೆ ಪ್ರಕರಣದ ಮುಖ್ಯ ಆರೋಪಿಯಾಗಿ (A1) ಅತಾವರ್ ರೆಹಮಾನ್ ಎಂಬಾತನನ್ನು ಹೆಸರಿಸಲಾಗಿದೆ. ಈತ ಶ್ರೀಧರ್ನನ್ನು ಬನಶಂಕರಿಯ ಖಬರಸ್ತಾನ್ ಮಸೀದಿಗೆ ಕರೆದುಕೊಂಡ ಹೋದವನು ಎಂದು ಹೇಳಲಾಗಿದೆ.
ಖಬರಸ್ತಾನ ಮಸೀದಿಯಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದು ಹಾಗೂ ಹಿಂದೂ ಧರ್ಮ, ದೇವರುಗಳ ಬಗ್ಗೆ ಅವಹೇಳನ ಮಾಡಿ, ಯುವಕನ ಮೊಬೈಲ್ ಕಸಿದುಕೊಂಡು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಪ್ರಚೋದನೆ ನೀಡಿದ ಆರೋಪವನ್ನು ಅಜಿಸಾಬ್ (ಎ2) ಎಂಬಾತನ ಮೇಲೆ ಹೊರಿಸಲಾಗಿದೆ. ಶ್ರೀಧರ್ಗೆ ಖತ್ನಾ ಮಾಡಿಸಿದ ಆರೋಪವನ್ನು ನಯಾಜ್ ಪಾಷಾ ನ (ಎ3) ಮೇಲೆ ಹೊರಿಸಲಾಗಿದೆ. ಶ್ರೀಧರ್ಗೆ ದನದ ಮಾಂಸ ತಿನ್ನುವಂತೆ ಒತ್ತಾಯಿಸಿದ ಆರೋಪ ನದೀಮ್ ಖಾನ್ (ಎ4) ಎಂಬಾತನ ಮೇಲಿದೆ.
ಅನ್ಸರ್ ಪಾಷಾ, ಸೈಯ್ಯದ್ ದಸ್ತಗಿ, ಮಹಮ್ಮದ್ ಇಕ್ಬಾಲ್, ರಫಿಕ್, ಸಬ್ಬೀರ್, ಖಲೀದ್, ಶಕೀಲ್, ಆಲ್ತಾಫ್ ಅವರ ಮೇಲೆ ದನದ ಮಾಂಸ ತಿನ್ನಲು ಒತ್ತಾಯಿಸಿದ ಹಾಗೂ ಹಲ್ಲೆ ನಡೆಸಿರುವುದೂ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿದೆ.
ವಿಚ್ಛೇದನ ಕೊಡಿಸುತ್ತಿದ್ದ ಆರೋಪ
ಈ ಆರೋಪಿಗಳ ವಿರುದ್ಧ ಮತಾಂತರದ ಜೊತೆಗೆ ಇತರ ಕೆಲ ಆರೋಪಗಳೂ ಕೇಳಿ ಬಂದಿವೆ. ವಾರ್ಡ್ನ ಮಾಜಿ ಕಾರ್ಪೊರೇಟರ್ ಅನ್ಸರ್ ಪಾಷಾ ಮತ್ತು ಆತನ ಸಹಚರರಾದ ನಯಾಜ್ ಪಾಷಾ, ಹಾಜೀ ಸಾಬ್ ದಾರುಲ್ ಖ್ವಾಜಾ ಹೆಸರಲ್ಲಿ ಗಂಡ- ಹೆಂಡತಿಗೆ ವಿಚ್ಛೇದನ ಕೊಡಿಸುತ್ತಿದ್ದರು. ಬನಶಂಕರಿಯ ದಾರುಲ್ ಖ್ವಾಜಾಕ್ಕೆ ಇಸ್ಲಾಮಿಕ್ ಕೋರ್ಟ್ ಎಂಬ ಶ್ರೇಯವಿದೆ. ಕೌಟುಂಬಿಕ ಕಲಹ, ಸಂಸಾರ ಸರಿ ಮಾಡುವುದು ಹಾಗೂ ಗಂಡ-ಹೆಂಡತಿ ಜಗಳಗಳಿಗೆ ಸಂಧಾನ ಮಾಡಲಾಗುತ್ತಿದೆ. ಆದರೆ ಈ ಆರೋಪಿಗಳು ಹುಡುಗನಿಂದ ದುಡ್ಡು ಪಡೆದು ಹುಡುಗಿಗೆ ಬಲವಂತವಾಗಿ ವಿಚ್ಛೇದನ ಕೊಡಿಸುತ್ತಿದ್ದರು ಎಂದು ದೂರಲಾಗಿದೆ.
ಈ ಸಂಬಂಧ ಮುಂಬೈ ಮೂಲದ ಶಬೀನಾ ಎಂಬಾಕೆ ದೂರು ನೀಡಿದ್ದರು. ಮುಂಬೈ ಮೂಲದ ಶಬೀನಾ ಬೆಂಗಳೂರಿನ ನಿವಾಸಿಯೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದರು. ಡ್ಯಾನ್ಸ್ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆಗೆ ವಸೀಂ ಎಂಬಾತನ ಜೊತೆಗೆ ಮದುವೆಯಾಗಿತ್ತು, ಮೂವರು ಮಕ್ಕಳೂ ಇದ್ದರು. ಅದರೆ ನಂತರ ದಿನಗಳಲ್ಲಿ ವಸೀಂ ಬೇರೆ ಮಹಿಳೆಯನ್ನು ಮದುವೆಯಾಗಿ ಶಬೀನಾಳನ್ನು ಕೈಬಿಟ್ಟಿದ್ದ. ಆದರೆ ಶಬೀನಾಳಿಂದ ಮನೆ ಕಟ್ಟಲೆಂದು 5 ಲಕ್ಷ ರೂಪಾಯಿಯಷ್ಟು ಹಣ ಪಡೆದುಕೊಂಡಿದ್ದ. ನ್ಯಾಯ ಬೇಕು ಎಂದು ಶಬೀನಾ ಹಿರಿಯರ ಗಮನಕ್ಕೆ ತಂದಾಗ, ಅವಳ ಪತಿ ವಸೀಂ ದಾರುಲ್ ಖ್ವಾಜಾಗೆ ಬಂದು ಹೆಂಡತಿಯನ್ನ ಮನೆಯಿಂದ ಓಡಿಸುವಂತೆ ಮನವಿ ಮಾಡಿಕೊಂಡಿದ್ದ.
ಈ ಬೆಳವಣಿಗೆಯ ಬೆನ್ನಲ್ಲೇ ದಾರುಲ್ ಖ್ವಾಜಾದ ಮೌಲಾನಾ ಶಮೀಮ್ ಸಾಲೀಕ್ ಹಾಗೂ ನಯಾಜ್ ಪಾಷಾ ಯುವತಿಗೆ ಬೆದರಿಕೆ ಹಾಕಿ ಬಲವಂತವಾಗಿ ವಿಚ್ಛೇದನ ಕೊಡಿಸಿದ್ದರು. ಬೆಂಗಳೂರಿನ ರುಕ್ಸಾನಾ ಎನ್ನುವ ಮಹಿಳೆಯ ಪತಿ ಅಮ್ಜದ್ ಎಂಬಾತನೂ 12 ವರ್ಷಗಳ ಸಂಸಾರದ ನಂತರ ಹೆಂಡತಿ ಮಕ್ಕಳನ್ನು ಬಿಟ್ಟಿದ್ದ. ಬಿಬಿಎಂಪಿ ಉದ್ಯೋಗಿಯಾಗಿದ್ದ ಆತ ಹೆಂಡತಿಯಿಂದ ದೂರವಾಗಲು ದಾರುಲ್ ಖ್ವಾಜಾದ ವ್ಯವಸ್ಥೆಯನ್ನು ಬಳಸಿಕೊಂಡಿದ್ದ. ಈ ಸಂದರ್ಭದಲ್ಲಿ ಬಿಳಿ ಹಾಳೆಯ ಮೇಲೆ ಮಹಿಳೆಯಿಂದ ಸಹಿ ಹಾಕಿಸಿಕೊಂಡಿದ್ದ ದಾರುಲ್ ಖ್ವಾಜಾದ ಪ್ರಮುಖರು, ಮೂರು ಲಕ್ಷದ ಚೆಕ್ ಕೊಟ್ಟು ನಿಮ್ಮ ಡೈವೋರ್ಸ್ ಆಗಿದೆ ಎಂದಿದ್ದರು. ಇದನ್ನು ಪ್ರತಿಭಟಿಸಿ ರುಕ್ಸಾನಾ ಪೊಲೀಸರಿಗೆ ದೂರು ನೀಡಿದ್ದರು.
ಮತಾಂತರ ಯತ್ನಕ್ಕೆ ಶ್ರೀರಾಮಸೇನೆ ಖಂಡನೆ
ಮಂಡ್ಯ ಮೂಲದ ಯುವಕ ಶ್ರೀಧರ್ನನ್ನು ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ ಪ್ರಕರಣವನ್ನು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತೀವ್ರವಾಗಿ ಖಂಡಿಸಿದ್ದಾರೆ. ಶ್ರೀಧರ್ ಪ್ರಕರಣ ಕೇವಲ ಒಂದು ಉದಾಹರಣೆಯಷ್ಟೇ. ಕಣ್ಣಿಗೆ ಕಾಣದೆ ಸಾವಿರಾರು ಮತಾಂತರಗಳು ನಡೆಯುತ್ತಿವೆ. ರಾಜ್ಯದಲ್ಲಿ ಮಂತಾತರ ಮಾಡುವ ದೊಡ್ಡ ಜಾಲವೇ ಅಡಗಿದೆ. ಅದನ್ನು ಬೇರು ಸಮೇತ ಕಿತ್ತುಹಾಕುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದು ಅವರು ಆಗ್ರಹಿಸಿದರು.
ಸರ್ಕಾರವು ಮದರಸಾ, ಮಸೀದಿ, ದರ್ಗಾಗಳ ಮೇಲೆ ಹದ್ದಿನ ಕಣ್ಣಿಡಬೇಕಿದೆ. ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದ್ರೂ ಇವರಿಗೆ ಭಯವಿಲ್ಲ. ಮತಾಂತರ ತಡೆಯಲು ಸರ್ಕಾರವು ಕೂಡಲೇ ಒಂದು ಕಾರ್ಯಪಡೆ ರಚಿಸಬೇಕಿದೆ. ಈ ಸಮಿತಿ ಮೂಲಕ ಮದರಸಾ, ಮಸೀದಿ, ದರ್ಗಾಗಳ ತಪಾಸಣೆ ಆಗಬೇಕಿದೆ ಎಂದು ಅವರು ಒತ್ತಾಯಿಸಿದರು.