ವಿವಿಧ ರಾಜ್ಯಗಳ ಪೊಲೀಸರಿಗೆ 122 ಪ್ರಕರಣಗಳಲ್ಲಿ ಬೇಕಾಗಿದ್ದ ಸೈಬರ್​ ಕ್ರಿಮಿನಲ್​ಗಳು ಬೆಂಗಳೂರಿನಲ್ಲಿ ಅರೆಸ್ಟ್

|

Updated on: Sep 28, 2024 | 12:02 PM

ವಿವಿಧ ಸೈಬರ್ ಕ್ರೈಂ ಪ್ರಕರಣಗಳಲ್ಲಿ ದೇಶದಾದ್ಯಂತ ಅನೇಕ ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ 10 ಮಂದಿ ಆರೋಪಿಗಳನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬಂಧನದಿಂದ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಚೀನಾದಲ್ಲಿದ್ದ ಕಿಂಗ್​ಪಿನ್​ಗಳ ಸೂಚನೆ ಮೇರೆಗೆ ಇವರು ಭಾರತದಲ್ಲಿ ವಂಚನೆ ಎಸಗುತ್ತಿದ್ದರು ಎನ್ನಲಾಗಿದೆ.

ವಿವಿಧ ರಾಜ್ಯಗಳ ಪೊಲೀಸರಿಗೆ 122 ಪ್ರಕರಣಗಳಲ್ಲಿ ಬೇಕಾಗಿದ್ದ ಸೈಬರ್​ ಕ್ರಿಮಿನಲ್​ಗಳು ಬೆಂಗಳೂರಿನಲ್ಲಿ ಅರೆಸ್ಟ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಸೆಪ್ಟೆಂಬರ್ 28: ದೇಶದಾದ್ಯಂತ ಸುಮಾರು 122 ಪ್ರಕರಣಗಳಲ್ಲಿ ಬೇಕಾಗಿದ್ದ 10 ಮಂದಿ ಸೈಬರ್ ವಂಚಕರನ್ನು ಬೆಂಗಳೂರು ಉತ್ತರ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಆನ್‌ಲೈನ್ ಟಾಸ್ಕ್ ಫ್ರಾಡ್ ಅಥವಾ ಆನ್‌ಲೈನ್ ಉದ್ಯೋಗ ವಂಚನೆ ಜಾಲದ ಮೂಲಕ ಜನರನ್ನು ವಂಚಿಸುತ್ತಿದ್ದರು. ಈ ವಂಚನೆ ಜಾಲದ ಕಿಂಗ್‌ಪಿನ್‌ಗಳು ಚೀನಾದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. 10 ಆರೋಪಿಗಳ ಪೈಕಿ ಮೂವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಮೂಲಕ ಬಂಧಿಸಲಾಗಿದೆ. ಆರೋಪಿಗಳು ಪೀಣ್ಯದ ನೆಲಗದರನಹಳ್ಳಿಯಲ್ಲಿರುವ ಕಚೇರಿ ಜಾಗದಲ್ಲಿ ಚಟುವಟಿಕೆಗಳಲ್ಲಿ ನಿರತರಾಗಿದ್ದರು.

ಮಹಿಳೆಯೊಬ್ಬರು ಸುಮಾರು 25 ಲಕ್ಷ ರೂಪಾಯಿ ಕಳೆದುಕೊಂಡ ನಂತರ, ಜುಲೈ 3 ರಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಬಂಧಿತರಿಂದ 72 ಮೊಬೈಲ್ ಫೋನ್‌ಗಳು, 182 ಡೆಬಿಟ್ ಕಾರ್ಡ್‌ಗಳು, ವಿವಿಧ ಟೆಲಿಕಾಂ ಆಪರೇಟರ್‌ಗಳ 133 ಸಿಮ್ ಕಾರ್ಡ್‌ಗಳು, 127 ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು 1.74 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಸಂತ್ರಸ್ತರಿಗೆ ವಂಚಿಸಲು ಬಳಸಿದ ಖಾತೆಗಳಲ್ಲಿದ್ದ 7.34 ಲಕ್ಷ ರೂ. ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

122 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದರು!

ಬಂಧಿತ ಆರೋಪಿಗಳನ್ನು ಸೈಯದ್ ಯಾಹ್ಯಾ, ಉಮರ್ ಫಾರೂಕ್, ಮೊಹಮ್ಮದ್ ಮಾಹೀನ್, ಮೊಹಮ್ಮದ್ ಮುಝಮ್ಮಿಲ್, ತೇಜಸ್, ಚೇತನ್, ವಾಸಿಂ, ಸೈಯದ್ ಜೈದ್, ಸಾಹಿ ಅಬ್ದುಲ್ ಅನನ್ ಮತ್ತು ಓಂ ಪ್ರಕಾಶ್ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿಅಂಶಗಳ ಪ್ರಕಾರ, ಆರೋಪಿಗಳು 122 ಪ್ರಕರಣಗಳಲ್ಲಿ ಬೇಕಾಗಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಮೂಲಕವೇ ವಂಚನೆ

ಆರೋಪಿಗಳು ಸಾಮಾಜಿಕ ಮಾಧ್ಯಮದ ಮೂಲಕ ಸಂತ್ರಸ್ತರನ್ನು ಸಂಪರ್ಕಿಸಿ, ಆನ್‌ಲೈನ್‌ನಲ್ಲಿ ನೀಡಿದ ಟಾಸ್ಕ್​​ ಪೂರ್ಣಗೊಳಿಸಿದರೆ ಹಣ ಪಾವತಿ ಮಾಡುವುದಾಗಿ ಆಮಿಷವೊಡ್ಡುತ್ತಿದ್ದರು. ಆಸಕ್ತರಾದ ಸಂತ್ರಸ್ತರನ್ನು ಆರೋಪಿಗಳು ರಚಿಸಿದ ಟೆಲಿಗ್ರಾಂ ಗುಂಪುಗಳಿಗೆ ಸೇರಿಸಲಾಗಿತ್ತು. ಆರೋಪಿಗಳು ಮೊದಲು ಐಷಾರಾಮಿ ಹೋಟೆಲ್‌ಗಳ ವಿಮರ್ಶೆಗಾಗಿ 150 ರಿಂದ 200 ರೂಪಾಯಿಗಳನ್ನು ನೀಡುವ ಮೂಲಕ ಸಂತ್ರಸ್ತರ ವಿಶ್ವಾಸವನ್ನು ಗಳಿಸುತ್ತಾರೆ. ಅವರನ್ನು ಬಲೆಗೆ ಬೀಳಿಸಲು ಹೆಚ್ಚುವರಿ ಬೋನಸ್‌ಗಳನ್ನು ಸಹ ನೀಡಿದ್ದಾರೆ. ನಂತರ, ಹೆಚ್ಚಿನ ಲಾಭಕ್ಕಾಗಿ ಕ್ರಿಪ್ಟೋಕರೆನ್ಸಿ ವ್ಯಾಪಾರದಲ್ಲಿ ಹೂಡಿಕೆ ಮಾಡಲು ಸಂತ್ರಸ್ತರ ಬಳಿ ಸೂಚಿಸಲಾಯಿತು. ಬಾಗಲಗುಂಟೆಯ ಟಿ ದಾಸರಹಳ್ಳಿ ನಿವಾಸಿ ಮಹಿಳೆ 25 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರಿನಲ್ಲಿ ಬ್ಯಾಂಕ್ ಖಾತೆಗಳ ಮೂಲಕ ವಹಿವಾಟು ನಡೆದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಖಾತೆಗಳ ವಿವರಗಳನ್ನು ಆಧರಿಸಿ, ಏಳು ಆರೋಪಿಗಳನ್ನು ಮೊದಲು ಆರ್‌ಟಿ ನಗರ ಬಳಿ ಬಂಧಿಸಲಾಯಿತು. ಅವರು ಚೀನಾದ ಕಿಂಗ್‌ಪಿನ್‌ಗಳ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು. ಚೀನಾಕ್ಕೆ ತೆರಳಿದ್ದ ಇತರ ಮೂವರು ಆರೋಪಿಗಳು ಸೆಪ್ಟೆಂಬರ್ 15ರಂದು ವಾಪಸ್ ಬಂದಾಗ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಪೊಲೀಸರು ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬ್ಯೂಟಿಷಿಯನ್ ಯುವತಿಗೆ ಖಾಸಗಿ ಅಂಗ ತೋರಿಸಿದ ಆಟೋ ಚಾಲಕ!

ಪೀಣ್ಯದಲ್ಲಿರುವ ಆರೋಪಿಗಳ ಕಚೇರಿ ಮೇಲೂ ಪೊಲೀಸರು ದಾಳಿ ನಡೆಸಿ ಕೆಲ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಗಳ ವಿರುದ್ಧ ಆಂಧ್ರಪ್ರದೇಶ, ಒಡಿಶಾ, ದೆಹಲಿ, ಗುಜರಾತ್, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಕೂಡ ಪ್ರಕರಣಗಳು ದಾಖಲಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ