
ಬೆಂಗಳೂರು, ಡಿಸೆಂಬರ್ 04: ನೆರೆ ರಾಜ್ಯ ಆಂಧ್ರ ಪ್ರದೇಶದಿಂದ ಕರ್ನಾಟಕ ಮತ್ತು ತಮಿಳುನಾಡಿಗೆ ಅಕ್ರಮವಾಗಿ ರಕ್ತ ಚಂದನ ಸಾಗಾಟ ಮಾಡುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಒಟ್ಟು 2 ಪ್ರಕಣಗಳಲ್ಲಿ ಓರ್ವ ಅಪ್ರಾಪ್ತ ಸೇರಿ ನಾಲ್ವರನ್ನು ಬಂಧಿಸಲಾಗಿದ್ದು, ಸುಮಾರು 1,800 ಕೆಜಿ ರೆಡ್ ಸ್ಯಾಂಡಲ್ ಜಪ್ತಿ ಮಾಡಲಾಗಿದೆ.
ಹುಳಿಮಾವು ಹಾಗೂ ಆರ್.ಟಿ. ನಗರ ಪೊಲೀಸರು ನಡೆಸಿದ್ದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ರೆಡ್ ಸ್ಯಾಂಡಲ್ ಸಾಗಾಟ ಮಾಡ್ತಿದ್ದ ಗ್ಯಾಂಗ್ ಲಾಕ್ ಆಗಿದೆ. ಪಕ್ಕಾ ಮಾಹಿತಿ ಆಧರಿಸಿ ಪೊಲೀಸರು ನಡೆಸಿದ ದಾಳಿ ವೇಳೆ ಎರಡು ಪ್ರಕರಣಗಳಲ್ಲಿ ಒಟ್ಟು 1.75 ಕೋಟಿ ಮೌಲ್ಯದ ರಕ್ತ ಚಂದನವನ್ನು ಜಪ್ತಿ ಮಾಡಿ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. ಬಂಧಿತ ಆರೋಪಿಗಳು ಆಂಧ್ರ ಮೂಲದವರಾಗಿದ್ದು, ಡಿಗ್ರಿ ಮುಗಿಸಿ ಕೆಲಸವಿಲ್ಲದೆ ಓಡಾಡುತ್ತಿದ್ದರು. ಹಣ ಸಂಪಾದನೆಗಾಗಿ ಅಡ್ಡದಾರಿ ಹಿಡಿದಿದ್ದರು. ಮದನಪಲ್ಲಿಯ ಸುಂಡೆಪಲ್ಲಿ ಭಾಗದಿಂದ ಕಳ್ಳತನ ಮಾಡಿದ್ದ ರಕ್ತಚಂದನವನ್ನ ಸಾಗಾಟ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.
ಇದನ್ನೂ ಓದಿ: ಪುಷ್ಪ ಸಿನಿಮಾ ಸ್ಟೈಲ್ನಲ್ಲಿ ರಕ್ತ ಚಂದನ ಸ್ಮಗ್ಲಿಂಗ್, ಕಳ್ಳಸಾಗಣೆದಾರರ ಬೇಟೆಯಾಡಿದ ಪೊಲೀಸರು
ಮೂರು ಕಾರುಗಳಲ್ಲಿ ರೆಡ್ ಸ್ಯಾಂಡಲ್ ತುಂಬಿಕೊಂಡಿದ್ದ ಮೂವರು ಆರೋಪಿಗಳು ಕರ್ನಾಟಕದ ಮೂಲಕ ತಮಿಳುನಾಡಿಗೆ ಅವನ್ನು ಸಾಗಾಟ ಮಾಡಲು ಮುಂದಾಗಿದ್ದರು. ಪೊಲೀಸರನ್ನು ಡೈವರ್ಟ್ ಮಾಡಲು ನೆಲಮಂಗಲ-ನೈಸ್ ರೋಡ್ ಮಾರ್ಗವಾಗಿ ಹೊಸೂರು ಮೂಲಕ ತಮಿಳುನಾಡಿಗೆ ತೆರಳುತ್ತಿದ್ದರು. ಈ ಬಗ್ಗೆ ಪಕ್ಕಾ ಮಾಹಿತಿ ಕಲೆ ಹಾಕಿದ್ದ ಹುಳಿಮಾವು ಠಾಣೆ ಇನ್ಸ್ಪೆಕ್ಟರ್ ಕುಮಾರಸ್ವಾಮಿ ಹಾಗೂ ತಂಡ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಬರೋಬ್ಬರಿ 1 ಕೋಟಿ ಮೌಲ್ಯದ 1,100 ಕೆಜಿ ರಕ್ತಚಂದನ ಜಪ್ತಿ ಮಾಡಿರುವ ಪೊಲೀಸರು ಓರ್ವ ಅಪ್ರಾಪ್ರ ಹಾಗೂ ಅಹ್ಮದ್ ಪಾಷ ಎಂಬಾತನನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಎಸ್ಕೇಪ್ ಆಗಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ.
ಮತ್ತೊಂದು ಪ್ರಕರಣದಲ್ಲಿ, ಬೊಲೆರೋ ವಾಹನದಲ್ಲಿ ಆಂಧ್ರದಿಂದ ಬೆಂಗಳೂರಿಗೆ ರಕ್ತ ಚಂದನ ಸಾಗಾಟ ಮಾಡಿ ಮಾರಾಟಕ್ಕೆ ಯತ್ನಿಸಿದ್ದ ರಾಜಶೇಖರ್ ಹಾಗೂ ವರಪ್ರಸಾದ್ ಎಂಬುವರನ್ನು ಆರ್.ಟಿ. ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 75 ಲಕ್ಷ ಮೌಲ್ಯದ 754 ಕೆಜಿ ರೆಡ್ ಸ್ಯಾಂಡಲ್ ಜಪ್ತಿ ಮಾಡಲಾಗಿದೆ. ಗೃಹಪಯೋಗಿ ವಸ್ತುಗಳಂತೆ ರೆಡ್ ಸ್ಯಾಂಡಲ್ ಕಟ್ ಮಾಡಿ ವಾಹನದಲ್ಲಿಟ್ಟು ಅದರ ಮೇಲೆ ತರಕಾರಿ ಮೂಟೆಗಳನ್ನ ಹಾಕಿ ಆರೋಪಿಗಳು ಸಾಗಾಟ ನಡೆಸುತ್ತಿರೋದು ಪೊಲೀಸರ ದಾಳಿ ವೇಳೆ ಬೆಳಕಿಗೆ ಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:43 pm, Thu, 4 December 25