ಬೆಂಗಳೂರು: ಇಡೀ ರಾಜ್ಯದಲ್ಲಿ ಗಾಂಜಾ(Ganja) ನಶೆ ಪಸರಿಸಿದೆ. ಅದರಲ್ಲೂ ಉಡುಪಿ, ಮಂಗಳೂರಿನಲ್ಲಿ ಪ್ರತಿಷ್ಟಿತ ವಿದ್ಯಾಲಯಗಳೇ ಗಾಂಜಾ ಅಡ್ಡೆಯಾಗಿವೆ. ಸಮಾಜವನ್ನು ಮುನ್ನಡೆಸಬೇಕಿರುವ ಯುವ ಪೀಳಿಗೆ ಈ ನಶೆಗೆ ದಾಸರಾಗುತ್ತಿದ್ದಾರೆ. ಡಾಕ್ಟರ್, ಲಾಯರ್ಗಳು ತಾವು ಇರುವಲ್ಲಿಯೇ ಯಾರಿಗೂ ತಿಳಿಯದಂತೆ ಗಾಂಜಾ ಬೆಳೆಯುವುದು, ಮಾರಾಟ ಮಾಡುವುದರಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಗಾಂಜಾ ಮುಕ್ತ ರಾಜ್ಯ ಮಾಡಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿತ್ತು. ಆದ್ರೆ ಯಾವುದೇ ಫಲ ಕಂಡು ಬಂದಿಲ್ಲ. ಸದ್ಯ ಈಗ ಶಾಲಾ ಪಠ್ಯ ಪುಸ್ತಕದಲ್ಲಿ ಡ್ರಗ್ಸ್(Drugs) ವಿರುದ್ಧ ಜಾಗೃತಿ ಮೂಡಿಸುವ ಪಾಠ ಸೇರಿಸಲು ಕಾಂಗ್ರೆಸ್ ಸರ್ಕಾರಕ್ಕೆ ಮನವಿ ಮಾಡಲು ಬೆಂಗಳೂರು ಪೊಲೀಸ್ ಕಮಿಷನರ್(Bengaluru Police Commissioner Dayanand) ಚಿಂತನೆ ನಡೆಸಿದ್ದಾರೆ.
ನಗರ ಪೊಲೀಸ್ ಆಯುಕ್ತ ದಯಾನಂದ್ ಈ ಬಗ್ಗೆ ಚಿಂತನೆ ನಡೆಸಿದ್ದು ಶಾಲಾ ಮಕ್ಕಳಲ್ಲಿ ಡ್ರಗ್ ಬಗ್ಗೆ ಜಾಗೃತಿ ಮೂಡಿಸುವ ತಂತ್ರಕ್ಕೆ ಮುಂದಾಗಿದ್ದಾರೆ. ಡ್ರಗ್ಸ್ ಸೇವನೆ, ಅದರಿಂದಾಗುವ ದುಷ್ಪರಿಣಾಮ ಹಾಗೂ ಆರೋಗ್ಯದಲ್ಲಾಗುವ ನಷ್ಟ, ಡ್ರಗ್ಸ್ನಿಂದ ಆಗುವ ಅನಾಹುತಗಳ ಬಗ್ಗೆ ಶಿಕ್ಷಕರಿಂದಲೇ ಮಕ್ಕಳಿಗೆ ಅರಿವು ಮೂಡಿಸುವ ಪ್ರಯತ್ನದ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಪಠ್ಯದಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಸೇರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲು ಚಿಂತನೆ ನಡೆಸಿದ್ದಾರೆ.
ಇದನ್ನೂ ಓದಿ: Ganja: ವೈದ್ಯಕೀಯ ಲೋಕಕ್ಕೆ ನಶೆ ಏರಿಸಿದ ಗಾಂಜಾ, ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ಅರೆಸ್ಟ್
ರಾಜ್ಯ ಡಿಜಿ ಸಹ ಡ್ರಗ್ಸ್ ಕಂಟ್ರೋಲ್ಗೆ ಮಹತ್ವ ನೀಡಿದ್ದಾರೆ. ಮತ್ತೊಂದೆಡೆ ಪೊಲೀಸರು ಡ್ರಗ್ಸ್ ಸಂಬಂಧ ಹಲವು ಕಾರ್ಯಾಚರಣೆ ನಡೆಸುತ್ತಿದ್ದು ಯುವಕರು ಹೆಚ್ಚಾಗಿ ಮಾದಕ ಲೋಕಕ್ಕೆ ಟಾರ್ಗೆಟ್ ಆಗುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಪತ್ತೆಯಾಗಿದೆ. ಯುವಜನತೆ ಹೆಚ್ಚು ಮಾದಕ ವ್ಯಸನಿಗಳಾಗುತಿದ್ದಾರೆ. ಕಾಲೇಜು ಹಂತದಲ್ಲಿರುವ ಮಕ್ಕಳೇ ಹೆಚ್ಚು ಮಾದಕ ದುಷ್ಚಟಕ್ಕೆ ಬಲಿಯಾಗುತಿದ್ದಾರೆ. ಹೀಗಾಗಿ ಶಾಲಾ ಹಂತದಲ್ಲೇ ಮಕ್ಕಳಿಗೆ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದು ಪ್ರಯತ್ನದ ಹಂತವಾಗಿ ಬೆಂಗಳೂರು ಪೊಲೀಸ್ ಕಮಿಷನರ್, ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಲಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ