ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್; ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ, ಪಾದಚಾರಿ ಸ್ಥಳದಲ್ಲೇ ಸಾವು
ನಗರದ ಮೈಸೂರು ರೋಡ್(ಕೆಆರ್ ಮಾರ್ಕೇಟ್ ಪ್ಲೈ ಒವರ್) ನಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂಗಳೂರು: ನಗರದಲ್ಲಿ ಹಿಟ್ ಆ್ಯಂಡ್ ರನ್ಗೆ ಮತ್ತೊಂದು ಜೀವ ಬಲಿಯಾಗಿದೆ(Hit And Run). ಕಾರು ಡಿಕ್ಕಿಯಾಗಿ ಕೃಷ್ಣಪ್ಪ ಎಂಬ ವ್ಯಕ್ತಿ ಸಾವನ್ನಪ್ಪಿದ್ದ ಘಟನೆ ಭಾನುವಾರ ಬೆಳಗ್ಗೆ ನವರಂಗ್ ಸಿಗ್ನಲ್ ಬಳಿ ನಡೆದಿತ್ತು. ಆದ್ರೆ ಇಂದು ಕೂಡ ಮತ್ತೊಂದು ಘಟನೆ ನಡೆದಿದೆ. ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ನಗರದ ಮೈಸೂರು ರೋಡ್(ಕೆಆರ್ ಮಾರ್ಕೇಟ್ ಪ್ಲೈ ಒವರ್) ನಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರು ಅರವತ್ತು ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನಿನ್ನೆ ರಾತ್ರಿ ಸುಮಾರು ಒಂಬತ್ತು ಘಂಟೆ ವೇಳೆ ಘಟನೆ ನಡೆದಿದ್ದು ಕೆಆರ್ ಮಾರ್ಕೆಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ದಾಟುವಾಗ ಬಿಎಂಟಿಸಿ ಡಿಕ್ಕಿ ಹೊಡೆದು ಅಜ್ಜಿ ಸಾವು
ಇನ್ನು ಮತ್ತೊಂದೆಡೆ ರಸ್ತೆ ದಾಟುವಾಗ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ವೃದ್ದೆ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪದ್ಮಲತಾ(73) ಮೃತ ಅಜ್ಜಿ. ಕೆಂಗೇರಿ ಉಪನಗರದ ಬಸ್ ನಿಲ್ದಾಣ ಬಳಿ ರಸ್ತೆ ದಾಟುತಿದ್ದ ವೇಳೆ ಬಿಎಂಟಿಸಿ ಬಸ್ ವೃದ್ಧೆಯ ಎರಡೂ ಕಾಲುಗಳ ಮೇಲೆ ಹರಿದಿದೆ. ಜೂನ್ 24 ರಂದು ಸಂಜೆ 5 ಗಂಟೆಗೆ ಘಟನೆ ನಡೆದಿದ್ದು ಅಪಘಾತ ನಡೆದ ತಕ್ಷಣ ಪೊಲೀಸರು ವೃದ್ಧೆಯನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದರು. ಆದ್ರೆ ಎರಡೂ ಕಾಲುಗಳಿಗೆ ತೀವ್ರವಾಗಿ ಗಾಯವಾದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಸಾವನ್ನಪ್ಪಿದ್ದಾರೆ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಡ್ರೈವರ್ ವಿರುದ್ಧ 279, 338, 304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಮತ್ತೊಂದು ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ದುರ್ಮರಣ
ಪತ್ನಿ ಮೇಲೆ ಪತಿಯಿಂದ ಚಾಕು ಇರಿತ
ಪತ್ನಿ ಮೇಲೆ ಅನುಮಾನ ಪಟ್ಟು ಪತಿ ಚಾಕು ಇರಿದಿರುವ ಘಟನೆ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ(ಜೂನ್ 25) ರಾತ್ರಿ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿದೆ. ಜಗಳ ತಾರಕಕ್ಕೇರಿದ್ದು ಒಂಬತ್ತು ಘಂಟೆ ಸುಮಾರಿಗೆ ಪ್ರಿಯಾಂಕಾಗೆ ಆಕೆಯ ಪತಿ ದಯಾನಂದ ಅಲಿಯಾಸ್ ನಂದ ಚಾಕು ಇರಿದಿದ್ದಾನೆ. ಪತ್ನಿಯ ತೊಡೆ ಹಾಗು ಗುಪ್ತಾಂಗಕ್ಕೆ ಗಾಯಗಳಾಗಿವೆ.
ಆರೋಪಿ ದಯಾನಂದ, ಅಶೋಕ್ ನಗರ ಠಾಣೆಯ ರೌಡಿಶೀಟರ್. ಈ ಹಿಂದೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಬಂದಿದ್ದ. ಸದ್ಯ ಪೊಲೀಸರು ಪತ್ನಿಯ ಮೇಲೆ ಚಾಕು ಇರಿದ ಕಾರಣಕ್ಕೆ ಆರೋಪಿ ದಯಾನಂದ ಅಲಿಯಾಸ್ ನಂದನನ್ನು ವಶಕ್ಕೆ ಪಡೆದಿದ್ದಾರೆ. ಗಾಯಾಳು ಪತ್ನಿ ಪ್ರಿಯಾಂಕಾ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ