ಬೆಂಗಳೂರು: ಕಾಣೆಯಾಗಿದ್ದ ಹಸ್ಕಿ ತಳಿಯ ಕುರುಡು ಶ್ವಾನ ಪತ್ತೆ ಹಚ್ಚಿದ ಪೊಲೀಸರು
ಹಸ್ಕಿ ತಳಿಯ ಶ್ವಾನಗಳು ದುಬಾರಿ ಬೆಲೆಯದ್ದಾಗಿವೆ. ಇಂತಹ ಶ್ವಾನವೊಂದು ಶಿವಾಜಿನಗರದ ಮನೆಯೊಂದರಿಂದ ಕಾಣೆಯಾಗಿತ್ತು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದ್ಯ ಈ ಶ್ವಾನ ಪೊಲೀಸರ ಕಣ್ಣಿಗೆ ಬಿದ್ದಿದೆ. ದುಬಾರಿ ಬೆಲೆಯ ಈ ಶ್ವಾನ ಕುರುಡಾಗಿದ್ದರಿಂದ ರಸ್ತೆಯಲ್ಲಿ ಬಿಡಲಾಗಿತ್ತು. ಹೀಗಾಗಿ ಇದು ಪೊಲೀಸರ ಕೈಗೆ ಸಿಕ್ಕಿದೆ.
ಬೆಂಗಳೂರು, ಆಗಸ್ಟ್ 28: ಕೆಲವು ದಿನಗಳ ಹಿಂದೆ ನಗರದ (Bengaluru) ಶಿವಾಜಿನಗರದ ಮನೆಯೊಂದರಿಂದ ಕಾಣೆಯಾಗಿದ್ದ ಹಸ್ಕಿ ತಳಿಯ ಕುರುಡು ಶ್ವಾನವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಕಾವಲ್ ಬೈರಸಂದ್ರ ಮನೆಯೊಂದರಲ್ಲಿ ಶ್ವಾನ ಇರುವುದನ್ನು ಪತ್ತೆಹಚ್ಚಿದ ಪೊಲೀಸರು, ಶ್ವಾನವನ್ನು ರಕ್ಷಿಸಿ ಮಾಲೀಕರಿಗೆ ಒಪ್ಪಿಸಿದ್ದಾರೆ.
ಶಿವಾಜಿನಗರದ ರಮ್ಯಾ ಎಂಬವರ ಮನೆಯಲ್ಲಿ ಸಾಕಿದ್ದ ಹಸ್ಕಿ ತಳಿಯ ಕುರುಡು ಶ್ವಾನ ಆಗಸ್ಟ್ 22 ರಂದು ಕಾಣೆಯಾಗಿತ್ತು. ಈ ಸಂಬಂಧ ಕಮರ್ಷಿಯಲ್ ಠಾಣೆಗೆ ರಮ್ಯಾ ಅವರು ದೂರು ನೀಡಿದ್ದರು. ಅಲ್ಲದೆ, ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಅವರಲ್ಲೂ ಶ್ವಾನ ಪತ್ತೆಗೆ ಮನವಿ ಮಾಡಿದ್ದರು.
ಇದನ್ನೂ ಓದಿ: ಬೆಂಗಳೂರು: ಹಳಿ ದಾಟುವ ವೇಳೆ ಬಂದ ಗೂಡ್ಸ್ ರೈಲು, ಸಾವನ್ನೇ ಗೆದ್ದು ಬಂದ ಮಹಿಳೆ
ಶ್ವಾನ ಮಾಲೀಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪತ್ತೆ ಕಾರ್ಯ ನಡೆಸುತ್ತಿದ್ದರು. ಅದರಂತೆ ಕಾವಲ್ ಬೈರ ಸಂದ್ರದ ಮನೆಯೊಂದರಲ್ಲಿ ಈ ಶ್ವಾನ ಪತ್ತೆಯಾಗಿದೆ. ವಿಚಾರಣೆ ವೇಳೆ, ಆಟೋ ಚಾಲಕರೊಬ್ಬರು ಶಿವಾಜಿನಗರದಿಂದ ಆಟೋದಲ್ಲಿ ಕರೆದೊಯ್ದಿದ್ದರು. ಬಳಿಕ ಅದನ್ನು ಬ್ರೀಡರ್ ಓರ್ವನಿಗೆ ನೀಡಿದ್ದ. ಆದರೆ ಇದು ಕುರುಡು ನಾಯಿಯಾಗಿದ್ದರಿಂದ ಲಾಭವಿಲ್ಲವೆಂದು ಬೀದಿಗೆ ಬಿಟ್ಟಿರುವುದು ತಿಳಿದುಬಂದಿದೆ.
ಸದ್ಯ 14 ವರ್ಷಗಳಿಂದ ಸಾಕಿದ್ದ ಹಸ್ಕಿ ಶ್ವಾನ ಮತ್ತೆ ಮನೆ ಸೇರಿಸಿದ್ದಕ್ಕೆ ಮಾಲೀಕೆ ರಮ್ಯಾ ಅವರು ಪೊಲೀಸರಿಗೆ ಕೃತಜ್ಙತೆ ಸಲ್ಲಿಸಿದ್ದಾರೆ. ಪೂರ್ವ ವಿಭಾಗ ಡಿಸಿಪಿ ಡಾ. ಭೀಮಾಶಂಕರ ಗುಳೇದ್, ಸಿಬ್ಬಂದಿ ಪಿಎಸ್ಐ ಚೌದ್ರಿ, ಪ್ರಶಾಂತ್ವನಾಯ್ಕ್ ಮತ್ತು ಹುಸೈನ್ ಅವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ