ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಲೋಹಿತ್ ಎಂಬಾತನ ಮೇಲೆ ಬೆಂಗಳೂರು ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಬಗ್ಗೆ ಪೂರ್ವ ವಿಭಾಗ ಡಿಸಿಪಿ ಡಾ. ಶರಣಪ್ಪ ಮಾಹಿತಿ ನೀಡಿದ್ದು, ಆರೋಪಿ ಲೋಹಿತ್ ಅನೇಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದು, ತಲೆ ಮರೆಸಿಕೊಂಡಿದ್ದ. ಆರೋಪಿ ಪತ್ತೆಗೆ ಹಲಸೂರು ಎಸಿಪಿ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿತ್ತು. ಇಂದು ಆರೋಪಿ ಜೀವನ್ ಭೀಮಾನಗರ ಕಡೆಗೆ ಬರುವ ಮಾಹಿತಿ ಸಿಕ್ಕಿತ್ತು. ಬೆಳಗ್ಗೆ ಪೊಲೀಸರು ಆತನ ಬೆನ್ನತ್ತಿ ಬಂಧಿಸಲು ಹೋಗಿದ್ರು. ಆ ವೇಳೆ ಕಾನ್ಸ್‌ಟೇಬಲ್ ಮೇಲೆ ಆರೋಪಿ ಹಲ್ಲೆ ಮಾಡಿದ್ದಾನೆ. ಆಗ ಆರೋಪಿ ಕಾಲಿಗೆ ಸಬ್ ಇನ್ಸ್‌ಪೆಕ್ಟರ್ ಗುಂಡು ಹಾರಿಸಿದ್ದಾರೆ. ಆರೋಪಿ ಬಳಿ ಒಂದು ಇನ್ನೋವಾ ಕಾರು ಸಹ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿ ಲೋಹಿತ್ ಆಂಧ್ರಪ್ರದೇಶದಲ್ಲಿ ಬಾಡಿಗೆಗೆ ಕಾರು ಪಡೆದು ಚಾಲಕನ ಮೇಲೆ ಹಲ್ಲೆ ನಡೆಸಿ ಕಾರು ಕಳ್ಳತನ ಮಾಡಿದ್ದ. ಅದೇ ಕಾರಿನಲ್ಲಿ ಆರೋಪಿ ಓಡಾಡುತ್ತಿದ್ದ. ಇಂದು ಬೆಳಗ್ಗೆ ಆತನ ಮೂಮೆಂಟ್ ಈ ಭಾಗದಲ್ಲಿ ಪತ್ತೆಯಾಗಿದ್ದರಿಂದ ಪೊಲೀಸರು ಬಂಧಿಸಲು ಮುಂದಾಗಿದ್ದರು. ಗುಂಡೇಟು ತಿಂದಿರುವ ಲೋಹಿತ್ ಆಟೋ ಚಾಲಕ ವಿಜಯ್ ಕುಮಾರ್ ಎಂಬಾತನ ಕಿಡ್ನಾಪ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಈ ಬಗ್ಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಲೋಹಿತ್ ತಲೆಮರೆಸಿಕೊಂಡಿದ್ದ. ಆರೋಪಿಯ ವಿರುದ್ಧ ಕೋಲಾರ, ಬೆಂಗಳೂರು ವ್ಯಾಪ್ತಿಯಲ್ಲಿ 17 ಪ್ರಕರಣಗಳು ದಾಖಲಾಗಿದ್ದವು.
ಪತ್ನಿಗೆ ಚಾಕುವಿನಿಂದ ಇರಿದು ಹತ್ಯೆ:
ರಾಮನಗರ: ರಾಮನಗರ ತಾಲೂಕಿನ ಅರಳೀಮರದದೊಡ್ಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಕೆಲಸ ಮುಗಿಸಿಕೊಂಡು ಅಕ್ಕನ ಮನೆಗೆ ಬರುವಾಗ ಪತಿ ಸತೀಶ್ ಎಂಬಾತನಿಂದ ಕೃತ್ಯ ನಡೆದಿದೆ. ಮಂಗಳಗೌರಿ (29) ಮೃತ ಮಹಿಳೆ. ಪತಿ ಜೊತೆ ಜಗಳವಾಡಿಕೊಂಡು ಮಂಗಳಗೌರಿ ತಮ್ಮ ಅಕ್ಕನ ಮನೆಯಿರುವ ಅರಳೀಮರದದೊಡ್ಡಿ ಗ್ರಾಮಕ್ಕೆ ಹೋಗಿದ್ದರು. ರಾಮನಗರ ತಾಲೂಕಿನ ಆನಮಾನಹಳ್ಳಿ ನಿವಾಸಿ ಸತೀಶ, ಘಟನೆಯ ನಂತರ ಪರಾರಿಯಾಗಿದ್ದಾನೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚನ್ನರಾಯಪಟ್ಟಣದಲ್ಲೊಂದು ಅಮಾನವೀಯ ಘಟನೆ: ಅನಾರೋಗ್ಯ ಪೀಡಿತ ಮಹಿಳೆ ಮೇಲೆ ಪೂಜೆ ನೆಪದಲ್ಲಿ ಹಲ್ಲೆ, ಸಾವು
ಹಾಸನ: ಹಾಸನ ಜಿಲ್ಲೆಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಪೂಜೆಯ ನೆಪದಲ್ಲಿ ಹಲ್ಲೆ ನಡೆದಿದ್ದು, ಪಾರ್ವತಿ (47) ಎಂಬ ಮಹಿಳೆ ಸಾವಿಗೀಡಾಗಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಅನಾರೋಗ್ಯ ಪೀಡಿತ ಪಾರ್ವತಿ ಮೇಲೆ ಪೂಜೆ ನೆಪದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಡಿಸೆಂಬರ್ 7ರಂದು ಬೆಕ್ಕ ಗ್ರಾಮದ ಪೂಜಾರಿ ಮಧು ಎಂಬಾತ ಬೆತ್ತದಿಂದ ಪಾರ್ವತಿ ಅವರ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಹಲ್ಲೆಯ ವೇಳೆ ತಲೆಗೆ ಏಟು ಬಿದ್ದು ಪಾರ್ವತಿ ಅಸ್ವಸ್ಥಗೊಂಡಿದ್ದರು. ಡಿಸೆಂಬರ್ 8ರಂದು ಹಿಮ್ಸ್ ಆಸ್ಪತ್ರೆಯಲ್ಲಿ ಪಾರ್ವತಿ ಕೊನೆಯುಸಿರೆಳೆದಿದ್ದರು. ಡಿಸೆಂಬರ್ 9ರಂದು ಶ್ರವಣಬೆಳಗೊಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಆಸ್ಪತ್ರೆ ಗೆ ಹೋದ ಪಾರ್ವತಿ ಗುಣಮುಖವಾಗಿಲ್ಲ ಎಂದು ದೇವರಿಗೆ ಮೊರೆ ಹೋಗಿದ್ದಾರೆ. ಈ ವೇಳೆ ಗ್ರಾಮದ ಪಿರಿಯಾಪಟ್ಟಣದಮ್ಮ ದೇವರ ಪೂಜಾರಿ ಮಧು ಪೂಜೆ ಮಾಡಿ ತಲೆನೋವು ಗುಣಪಡಿಸೊದಾಗಿ ಬೆತ್ತದಿಂದ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಬೆತ್ತದಿಂದ ತಲೆಗೆ ಬಿದ್ದ ಏಟಿಗೆ ಪಾರ್ವತಿ ಅಸ್ವಸ್ಥಗೊಂಡಿದ್ದರು. ಈ ವೇಳೆ ನಿಂಬೆ ರಸ ಕುಡಿಸಿ ಖಾಯಿಲೆ ಗುಣವಾಗಿದೆ ಎಂದು ಹೇಳಿ ಕಳಿಸಿದ್ದ ಪೂಜಾರಿ. ತೀವ್ರ ಅಸ್ವಸ್ಥಗೊಂಡ ಮಹಿಳೆ ಚಿಕಿತ್ಸೆ ಫಲಿಸದೆ ಡಿಸೆಂಬರ್ 8 ರಂದು ಹಾಸನದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನೆಲಮಂಗಲ ಉಪವಿಭಾಗದ ವ್ಯಾಪ್ತಿಯಲ್ಲಿ ಹೆಚ್ಚಾದ ದರೋಡೆ ಪ್ರಕರಣ: ಮೊವರ ಬಂಧನ
ನೆಲಮಂಗಲ ಉಪವಿಭಾಗದ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣಗಳೂ ಹೆಚ್ಚಾಗುತ್ತಿವೆ. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ APMC ರಸ್ತೆಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಮೊವರನ್ನು ಬಂಧಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ಮಹೇಶ @ ಶನಿ ಮಹೇಶ (33), ದರ್ಶನ್(26) ಮತ್ತು ಹರೀಶ್ @ ಕುಳ್ಳ (23) ಎಬುವವರನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ ಎರಡು ಬೈಕ್, ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡ ದಿಲೀಪ್ ಹಾಗೂ ಪ್ರದೀಪ್ ಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 7:46 am, Sat, 11 December 21