ಪುಷ್ಪಾ ಸಿನಿಮಾ ಸ್ಟೈಲ್ನಲ್ಲಿ ಶ್ರೀಗಂಧ ಕಳ್ಳಸಾಗಣೆ ಮಾಡ್ತಿದ್ದವರು ಬೆಂಗಳೂರಿನಲ್ಲಿ ಲಾಕ್: ಚೀನಾಗೆ ಸಾಗಿಸಲಿದ್ದ 750 ಕೆಜಿ ಶ್ರೀಗಂಧ ವಶ
ತೆಲುಗು ಸಿನಿಮಾ ಪುಷ್ಪ-2ನಲ್ಲಿ ರಕ್ತಚಂದನ ಸ್ಮಗ್ಲಿಂಗ್ ಭಗ್ಗೆ ನೋಡಿಡುತ್ತೀರಿ. ಅದನ್ನೇ ಪ್ರೇರಣೆಯಾಗಿಸಿಕೊಂಡು, ಅದೇ ರೀತಿ ಶ್ರೀಗಂಧ ಕಳ್ಳಸಾಗಣೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗೊಂದು ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದೆ. ಆಂಧ್ರ ಪ್ರದೇಶದ ಕರ್ನೂಲ್ನಿಂದ ಶ್ರೀಗಂಧ ಕಳ್ಳಸಾಗಣೆ ಮಾಡಿ ಬೆಂಗಳೂರಿಗೆ ತಂದು ಚೀನಾಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂಬುದು ತಿಳಿದುಬಂದಿದೆ.

ಬೆಂಗಳೂರು, ಅಕ್ಟೋಬರ್ 27: ಬೆಂಗಳೂರಿನ (Bengaluru) ಸಿದ್ದಾಪುರ ಪೊಲೀಸರು ನಾಕಬಂದಿ ಹಾಕಿ ಪರಿಶೀಲನೆ ಮಾಡುತ್ತಾ ಇದ್ದರು. ಅಷ್ಟರಲ್ಲಿ ಒಂದು ಪಿಕ್ ಅಪ್ ವಾಹನ ವೇಗವಾಗಿ ಬಂದು ಪೊಲೀಸರ ಮುಂದೆ ನಿಂತಿತ್ತು. ಚಾಲಕನ ಮುಖದಲ್ಲಿ ಅತಿಯಾದ ಆತ್ಮವಿಶ್ವಾಸ ಕಾಣಿಸಿತ್ತು. ಯಾಕೆಂದರೆ ಪಿಕ್ ಅಪ್ ವಾಹನದಲ್ಲಿ ಇದ್ದದ್ದು ಈರುಳ್ಳಿ ಮೂಟೆಗಳು. ಆದರೂ ಅನುಮಾನ ಬಂದ ಕಾರಣ ಪೊಲೀಸರು ಪಿಕ್ ಅಪ್ ವಾಹನ ಪರಿಶೀಲನೆ ಮಾಡಿದ್ದಾರೆ. ಈರುಳ್ಳಿ ಮೂಟೆಗಳನ್ನು ಸರಿಸಿ ಕೆಳಭಾಗದಲ್ಲಿ ಏನಿದೆ ಎಂದು ನೋಡಿದ್ದಾರೆ. ಅಲ್ಲಿ ಕಾಣಿಸಿದ ವಸ್ತು ಪೊಲೀಸರು ಒಂದು ಕ್ಷಣ ದಂಗಾಗಿಹೋಗುವಂತೆ ಮಾಡಿತ್ತು. ಯಾಕೆಂದರೆ, ಈರುಳ್ಳಿ ಮೂಟೆ ಅಡಿಯಲ್ಲಿ ಶ್ರೀಗಂಧದ ಮೂಟೆಯೇ ಇತ್ತು.
ಪುಷ್ಪಾ ಸಿನಿಮಾ ಸ್ಟೈಲ್ನಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಚೀಲದ ಅಡಿಯಲ್ಲಿ ಹಾಕಿ ಮೇಲೆ ಈರುಳ್ಳಿ ತುಂಬಿ ಸಾಗಿಸಲಾಗುತ್ತಿತ್ತು. ಆಂಧ್ರ ಪ್ರದೇಶದ ಕರ್ನೂಲ್ನಿಂದ ಬೆಂಗಳೂರಿಗೆ ಶ್ರೀಗಂಧವನ್ನು ತಂದು ಇನ್ನೇನು ಗಮ್ಯ ತಲುಪುವಷ್ಟರಲ್ಲಿ ನಾಲ್ವರ ಗ್ಯಾಂಗ್ ಮಾಲು ಸಮೇತ ಪೊಲೀಸ್ ಬಲೆಗೆ ಬಿದ್ದಿದೆ.
ಆಂಧ್ರ ಪ್ರದೇಶದಿಂದ ಚೀನಾಗೆ ಶ್ರೀಗಂಧ ಕಳ್ಳಸಾಗಣೆ
ಸಿರಾಜ್ ಎಂಬಾತ ತನ್ನ ಗ್ಯಾಂಗ್ನೊಂದಿಗೆ ಆಂಧ್ರ ಪ್ರದೇಶದ ಕರ್ನೂಲ್ ಕಾಡುಗಳಲ್ಲಿ ಶ್ರೀಗಂಧ ಕಡಿದು ಈರುಳ್ಳಿ ಮಾರಾಟಗಾರಾರ ವೇಷದಲ್ಲಿ ಬೆಂಗಳೂರಿಗೆ ತಂದು ಇಲ್ಲಿಂದ ಚೀನಾಗೆ ಪೂರೈಕೆ ಮಾಡುತ್ತಿದ್ದ. ಸಿದ್ಧಾಪುರ ಪೊಲೀಸರು ನಾಕಾಬಂದಿ ಹಾಕಿ ಪರಿಶೀಲನೆ ನಡೆಸಿದಾಗ ಈರುಳ್ಳಿ ಮೂಟೆಗಳಲ್ಲಿ 18 ಶ್ರೀಗಂಧದ ಮರದ ತುಂಡುಗಳ ಬ್ಯಾಗ್ ಸಿಕ್ಕಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ. ಆಂಧ್ರದ ಸಿರಾಜ್ ಎಂಬಾತ ಗ್ಯಾಂಗ್ ಸದಸ್ಯರೊಂದಿಗೆ ಸೇರಿ ಶ್ರೀಗಂಧ ಕಡಿದು, ಅಕ್ರಮವಾಗಿ ಖರಿದಿ ಮಾಡಿ ಬೆಂಗಳೂರಿನ ಡೀಲರ್ಗೆ ತಲುಪಿಸಿ ಬಳಿಕ ಆತನ ಮೂಲಕ ಚೀನಾಗೆ ಕಳುಹಿಸುತ್ತಿದ್ದ. ಸದ್ಯ ಶೇಖ್ ಶಾರೂಕ್, ಶೇಖ್ ಅಬ್ದುಲ್, ಪರಮೇಶ್, ರಾಮ್ ಭೂಪಾಲ್ ಎಂಬ ನಾಲ್ವರು ಶ್ರೀಗಂಧ ಸ್ಮಗ್ಲರ್ಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಸಿಸಿಬಿ ಮೆಗಾ ಬೇಟೆ: 5.5 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ; ಇಬ್ಬರು ಅರೆಸ್ಟ್
ಶ್ರೀಗಂಧ ಅಕ್ರಮ ಸಾಗಾಟದ ಜಾಲದ ತನಿಖೆ ಶುರುಮಾಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಬೆಂಗಳೂರಿನ ಡೀಲರ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:16 am, Mon, 27 October 25




