
ಬೆಂಗಳೂರು, ನ.9: ಬೆಂಗಳೂರು ನಗರದಲ್ಲಿ ಆಸ್ತಿ ಹೊಂದಿರುವವರು ಯಾವುದೇ ಕಾರಣಕ್ಕೂ ತಮ್ಮ ಜಾಗವನ್ನು ಖಾಲಿ ಬಿಡಬಾರದು. ನಿವೇಶನಕ್ಕೆ ಕಾಂಪೌಂಡ್ ಹಾಕಿಕೊಳ್ಳಬೇಕು ಅಥವಾ ಮನೆ ನಿರ್ಮಿಸಬೇಕು. ನಿಯಮ ಪಾಲಿಸದಿದ್ದರೆ ನೋಟಿಸ್ ನೀಡಲಾಗುವುದು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಭೂಮಿ ಗ್ಯಾರಂಟಿ’ ಮತ್ತು ಕೆಂಪೇಗೌಡ ಲೇಔಟ್‌ನ ಸ್ವಯಂಪ್ರೇರಿತ ಭೂಮಿ ಬಿಟ್ಟುಕೊಟ್ಟವರ ಹಿತರಕ್ಷಣೆ ಹಾಗೂ ಸೈಟ್ ಹಂಚಿಕೆ ಕುರಿತು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.
ನಾಡಪ್ರಭು ಕೆಂಪೇಗೌಡ ಲೇಔಟ್ ನಿರ್ಮಾಣಕ್ಕಾಗಿ ಸ್ವಯಂಪ್ರೇರಿತವಾಗಿ ಹಾಗೂ ಮಾರ್ಜಿನಲ್ ಲ್ಯಾಂಡ್ (ಸರ್ಕಾರಿ ಜಾಗದ ಪಕ್ಕದ ಜಮೀನು) ಬಿಟ್ಟುಕೊಟ್ಟಿರುವ ಆಸ್ತಿ ಮಾಲೀಕರಿಗೆ ಸರ್ಕಾರದಿಂದ ಸೈಟ್ ನೀಡಲಾಗುತ್ತದೆ. ಇವರೆಲ್ಲರೂ ಅರ್ಜಿ ಸಲ್ಲಿಸಲು ಡಿಸೆಂಬರ್ 17, 2026 ಕೊನೆಯ ದಿನವಾಗಿದೆ. ಸ್ವಯಂಪ್ರೇರಿತವಾಗಿ ಭೂಮಿ ನೀಡಿರುವವರಿಗೆ 600 ಚದರ ಅಡಿವರೆಗೂ (600 Sq.Ft) ಭೂಮಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಯಾರೂ ಮಾಡದ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಸ್ವಯಂಪ್ರೇರಿತವಾಗಿ ಜಮೀನು ಬಿಟ್ಟುಕೊಟ್ಟವರ ಉಪಕಾರ ಸ್ಮರಣೆಗಾಗಿ ಅವರ ಹೆಸರುಗಳನ್ನು ಒಳಗೊಂಡ ‘ವಾಲ್ ಆಫ್ ಫೇಮ್ ನಿರ್ಮಿಸಲಾಗುವುದು” ಎಂದು ಡಿಕೆಶಿ ತಿಳಿಸಿದರು.
“ಕೆಲವರಿಗೆ ಪ್ರಸ್ತುತ ಅಬ್ಸಲ್ಯೂಟ್ ಸೇಲ್ ಡೀಡ್ ಇರುವುದಿಲ್ಲ. ಆಸ್ತಿಯನ್ನು ಮಾರಾಟ ಮಾಡುವ ಸಮಯದಲ್ಲಿ ತೊಂದರೆ ಅನುಭವಿಸಿ ಓಡಾಡುತ್ತಾರೆ. ಉದಾಹರಣೆಗೆ, ವೀರೇಂದ್ರ ಪಾಟೀಲ್ ಅವರಿಂದ ನಮ್ಮ ತಂದೆಯವರು ಸೈಟ್ ತೆಗೆದುಕೊಂಡಾಗ ಸೇಲ್ ಡೀಡ್ ಆಗಿರಲಿಲ್ಲ, ನಂತರ ನಾವೇ ಮಾಡಿಕೊಂಡೆವು. ಹಾಗಾಗಿ ಪ್ರತಿಯೊಬ್ಬರೂ ಪಕ್ಕಾ ಕಾನೂನಾತ್ಮಕ ಅಬ್ಸಲ್ಯೂಟ್ ಸೇಲ್ ಡೀಡ್ ಹೊಂದುವುದು ಕಡ್ಡಾಯ ಎಂದು ಹೇಳಿದ್ದಾರೆ. “ಬೆಂಗಳೂರು ನಗರದ ನಿವೇಶನದಾರರು ಜಾಗವನ್ನು ಖಾಲಿ ಬಿಟ್ಟು ಅಕ್ರಮ ಒತ್ತುವರಿಗೆ ಅವಕಾಶ ನೀಡಬೇಡಿ. ಕಾಂಪೌಂಡ್ ಹಾಕಿಕೊಳ್ಳಿ, ಕೊಟ್ಟಿರುವ ಕಾಲಾವಕಾಶದೊಳಗೆ ಮನೆ ನಿರ್ಮಿಸದಿದ್ದರೆ ಬಿಡಿಎ/ಬಿಬಿಎಂಪಿಯಿಂದ ನೋಟಿಸ್ ಜಾರಿ ಮಾಡಲಾಗುವುದು” ಎಂದರು.
“ರಾಜಧಾನಿ ಬೆಂಗಳೂರಿನಲ್ಲಿ ಬಿಡಿಎ ಭೂಸ್ವಾಧೀನ ಜಾಗದಲ್ಲಿ 2008ಕ್ಕೂ ಮುನ್ನ ಮನೆ ನಿರ್ಮಿಸಿಕೊಂಡಿರುವ ಲಕ್ಷಾಂತರ ಜನರಿಗೆ ಆಸ್ತಿ ಸಕ್ರಮ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ದಂಡದ ಪ್ರಮಾಣವನ್ನು ಶೇಕಡಾ 50 ರಷ್ಟು ಕಡಿತಗೊಳಿಸಲಾಗಿದ್ದು, ಸಾರ್ವಜನಿಕರು ಉಚಿತವಾಗಿ ಅರ್ಜಿ ಸಲ್ಲಿಸಿ ತಮ್ಮ ‘ಆಸ್ತಿ ಗ್ಯಾರಂಟಿ’ ಮಾಡಿಕೊಳ್ಳಬೇಕು” ಎಂದು ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ‘ಭೂ ಗ್ಯಾರಂಟಿ’ ಯೋಜನೆಯಡಿ ಅನಧಿಕೃತ ಮನೆಗಳನ್ನು ಅಧಿಕೃತಗೊಳಿಸುವುದು, ಕೆಂಪೇಗೌಡ ಲೇಔಟ್ ಭೂ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಹಾಗೂ ಮಾರ್ಜಿನಲ್ ಲ್ಯಾಂಡ್ ಸಕ್ರಮದ ಕುರಿತು ಸಂಪೂರ್ಣ ಮಾರ್ಗದರ್ಶಿ ಸೂತ್ರಗಳನ್ನು ಅವರು ಬಿಡುಗಡೆ ಮಾಡಿದರು.
ಸದನದಲ್ಲಿ ತಿದ್ದುಪಡಿ ಕಾಯ್ದೆ ತಂದು ಅಧಿಸೂಚನೆ ಹೊರಡಿಸಿರುವ ಬಿಡಿಎ, ನಿವೇಶನಗಳ ಅಳತೆಗೆ ಅನುಗುಣವಾಗಿ ದಂಡದ ದರವನ್ನು ಅರ್ಧಕ್ಕರ್ಧ ಇಳಿಕೆ ಮಾಡಿದೆ.
20×30 ನಿವೇಶನ: ಈ ಹಿಂದಿನ ಶೇ. 10 ರಷ್ಟು ದಂಡದ ಬದಲಿಗೆ ಈಗ ಕೇವಲ ಶೇ. 5 ರಷ್ಟು ಮಾತ್ರ.
20×30 ರಿಂದ 30×40 ನಿವೇಶನ: ಈ ಹಿಂದಿನ ಶೇ. 25 ರಷ್ಟು ದಂಡದ ಬದಲಿಗೆ ಈಗ ಕೇವಲ ಶೇ. 12.5 ರಷ್ಟು ಮಾತ್ರ.
30×40 ರಿಂದ 40×60 ನಿವೇಶನ: ಈ ಹಿಂದಿನ ಶೇ. 40 ರಷ್ಟು ದಂಡದ ಬದಲಿಗೆ ಈಗ ಶೇ. 20 ರಷ್ಟು ಮಾತ್ರ.
40×60 ರಿಂದ 50×80 ನಿವೇಶನ: ಈ ಹಿಂದಿನ ಶೇ. 50 ರಷ್ಟು ದಂಡದ ಬದಲಿಗೆ ಈಗ ಶೇ. 25 ರಷ್ಟು ಮಾತ್ರ.
“2008ರ ಮುಂಚೆ ಬಿಡಿಎ ಭೂಸ್ವಾಧೀನಪಡಿಸಿಕೊಂಡಿದ್ದ ಜಾಗದಲ್ಲಿಮನೆ ನಿರ್ಮಿಸಿಕೊಂಡವರು ಅಥವಾ ರೆವೆನ್ಯೂ ಸೈಟ್ ಹೊಂದಿರುವವರು ಅಗತ್ಯ ದಾಖಲೆಗಳೊಂದಿಗೆ ತಕ್ಷಣವೇ ಅರ್ಜಿ ಸಲ್ಲಿಸಬೇಕು” ಎಂದು ಡಿಕೆಶಿ ಮನವಿ ಮಾಡಿದರು.
“ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಫೀಸ್ ಇರುವುದಿಲ್ಲ, ಸಂಪೂರ್ಣ ಉಚಿತವಾಗಿ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಬಿಡಿಎ 50 ವರ್ಷಗಳ ಸುವರ್ಣ ಸಂಭ್ರಮ ಆಚರಿಸುತ್ತಿರುವ ಈ ಸುಸಂದರ್ಭದಲ್ಲಿ ಬೆಂಗಳೂರಿಗರಿಗೆ ಈ ಅಭಯ ಹಸ್ತ ನೀಡಲಾಗಿದೆ. ಡಿಸೆಂಬರ್ 17, 2026ರ ನಂತರ ಈ ಅವಧಿಯನ್ನು ಮೂಂದೂಡಲು ಕಾನೂನಾತ್ಮಕವಾಗಿ ಸಾಧ್ಯವಿಲ್ಲ. ಹಾಗಾಗಿ ಸಾರ್ವಜನಿಕರು ತಕ್ಷಣವೇ ಅರ್ಜಿ ಸಲ್ಲಿಸಬೇಕು” ಎಂದು ಅವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಗೂ ಮುನ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೆಬ್ಬಾಳಕ್ಕೆ ಭೇಟಿ ನೀಡಿ ಹೆಬ್ಬಾಳ ಎಲಿವೇಟೆಡ್ ಕಾರಿಡಾರ್ ಕಾಮಗಾರಿಯ ಬ್ಲೂಪ್ರಿಂಟ್ ಹಾಗೂ ಪ್ಲಾನ್ ವೀಕ್ಷಣೆ ಮಾಡಿದರು. ಶಾಸಕ ಎನ್.ಎ. ಹ್ಯಾರಿಸ್ ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಕಾಮಗಾರಿ ನಡೆಯುವ ವೇಳೆ ನಗರದ ಸಂಚಾರ ನೆರವು ನಿರ್ವಹಣೆ ಕುರಿತು ಚರ್ಚಿಸಿ ಸೂಕ್ತ ಸೂಚನೆಗಳನ್ನು ನೀಡಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ