ಇನ್ಮುಂದೆ ಆಟೋ, ಕ್ಯಾಬ್ ಬುಕ್ ಮಾಡಲು ಮೊಬೈಲ್ ಬೇಕಿಲ್ಲ, ಗಂಟೆಗಟ್ಟಲೇ ಕಾಯಬೇಕಾಗಿಲ್ಲ

ಇನ್ಮುಂದೆ ಆಟೋ, ಕ್ಯಾಬ್ ಬುಕ್ ಮಾಡಲು ಮೊಬೈಲ್ ಬೇಕಿಲ್ಲ ಹಾಗೂ ಗಂಟೆಗಟ್ಟಲೇ ಕಾಯಬೇಕಾಗಿಲ್ಲ. ಏಕೆಂದರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ (ಮೆಜೆಸ್ಟಿಕ್) ಸೇರಿದಂತೆ ಆರು ಪ್ರಮುಖ ನಿಲ್ದಾಣಗಳಲ್ಲಿ ಎಸಿ ಕಿಯೋಸ್ಕ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆ ಮೂಲಕ ಬೆಂಗಳೂರಿನ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್​​ ನೀಡಲಾಗಿದೆ.

ಇನ್ಮುಂದೆ ಆಟೋ, ಕ್ಯಾಬ್ ಬುಕ್ ಮಾಡಲು ಮೊಬೈಲ್ ಬೇಕಿಲ್ಲ, ಗಂಟೆಗಟ್ಟಲೇ ಕಾಯಬೇಕಾಗಿಲ್ಲ
ಕಿಯೋಸ್ಕ್​ಗಳ ನಿರ್ಮಾಣ
Updated By: ಗಂಗಾಧರ​ ಬ. ಸಾಬೋಜಿ

Updated on: Nov 28, 2025 | 8:55 PM

ಬೆಂಗಳೂರು, ನವೆಂಬರ್​ 28: ಪ್ರತಿ ದಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ ಸೇರಿದಂತೆ ಬೆಂಗಳೂರಿನ ಹಲವು ರೈಲ್ವೆ ಸ್ಟೇಷನ್​ಗಳಿಗೆ ಪ್ರತಿ ದಿನ ಲಕ್ಷಾಂತರ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಆದರೆ ಸ್ಟೇಷನ್​ನಿಂದ ಮನೆಗೆ ಹೋಗಲು ಆಟೋ, ಕ್ಯಾಬ್​ಗಾಗಿ (cab) ಪರದಾಡುತ್ತಿದ್ದ ಪ್ರಯಾಣಿಕರಿಗೆ ಇದೀಗ ಗುಡ್ ನ್ಯೂಸ್​​ ಸಿಕ್ಕಿದೆ. ಅದೇನೆಂದರೆ ಆಟೋ, ಕ್ಯಾಬ್ ಬುಕ್ಕಿಂಗ್ ಮಾಡಲು ಎಸಿ ಕಿಯೋಸ್ಕ್​ಗಳ (AC Kiosks) ನಿರ್ಮಾಣ ಮಾಡಲಾಗುತ್ತಿದೆ.

ಆಟೋ, ಕ್ಯಾಬ್ ಚಾಲಕರ ಆಟಾಟೋಪಕ್ಕೆ ಬೀಳಲಿದೆ ಬ್ರೇಕ್ 

ನಗರದ ರೈಲ್ವೆ ಸ್ಟೇಷನ್​ಗಳ ಮೂಲಕ ರಾಜಧಾನಿಗೆ ಬರುವ ಪ್ರಯಾಣಿಕರಿಗೆ ತಮ್ಮ ಮನೆಗಳಿಗೆ ಹೋಗಲು ತುಂಬಾ ಸಮಸ್ಯೆ ಆಗುತ್ತಿತ್ತು. ಆಟೋ, ಕ್ಯಾಬ್ ಡ್ರೈವರ್​ಗಳು ಕರೆದ ಕಡೆ ಬರುವುದಿಲ್ಲ. ಒನ್‌ ಟು ಡಬಲ್ ಹಣ ಕೇಳುತ್ತಾರೆ. ಕೆಲವರ ಬಳಿ ಸ್ಮಾರ್ಟ್ ಫೋನ್​ಗಳಿರುವುದಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಬ್ರೇಕ್ ಹಾಕಲು ಇದೀಗ ಮೆಜೆಸ್ಟಿಕ್​ನ ಕೆಎಸ್ಆರ್ ರೈಲ್ವೆ ನಿಲ್ದಾಣ ಸೇರಿದಂತೆ ನಗರದ ಆರು ರೈಲ್ವೆ ಸ್ಟೇಷನ್​ಗಳಲ್ಲಿ ಖಾಸಗಿ ಅಗ್ರಿಗೇಟರ್ ಕಂಪನಿಗಳ ಕಿಯೋಸ್ಕ್​ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಕೆಲ ಆಟೋ, ಕ್ಯಾಬ್ ಚಾಲಕರ ಆಟಾಟೋಪಕ್ಕೆ ಬ್ರೇಕ್ ಬೀಳಲಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ಬಸ್‌ ಕಂಪನಿಗಳಿಗೆ ಬಿಎಂಟಿಸಿಯಿಂದ ಬರೋಬ್ಬರಿ 25 ಕೋಟಿ ರೂ. ದಂಡ!

ಅವಸರಕ್ಕೆ ಚಾಲಕರು ಕೇಳಿದಷ್ಟು ಹಣ ಕೊಟ್ಟು ಪ್ರಯಾಣಿಕರು ಹೋಗುತ್ತಿದ್ದರು. ಇನ್ಮುಂದೆ ಆಟೋ, ಕ್ಯಾಬ್ ಬುಕ್ ಮಾಡಲು ಮೊಬೈಲ್ ಬೇಕಿಲ್ಲ, ಗಂಟೆಗಟ್ಟಲೇ ಕಾಯಬೇಕಾಗಿಲ್ಲ. ಮೆಜಸ್ಟಿಕ್ ರೈಲ್ವೆ ಸ್ಟೇಷನ್ ಸೇರಿದಂತೆ ಬೆಂಗಳೂರಿನ ಆರು ರೈಲ್ವೆ ಸ್ಟೇಷನ್​​ಗಳಲ್ಲಿ ಎರಡು ಖಾಸಗಿ ಎಸಿ ಕಿಯೋಸ್ಕ್ ರೂಮ್​ಗಳು ಓಪನ್ ಆಗಲಿದ್ದು, ರೈಲಿನಿಂದ ಇಳಿದು ಆಟೋ, ಕ್ಯಾಬ್ ಬುಕ್ ಮಾಡಲು ರೋಡ್​ನಲ್ಲಿ ನಿಂತು ಪರದಾಡುವಂತಿಲ್ಲ.  ಎಸಿ ರೂಮ್​ನಲ್ಲಿ ಕುಳಿತುಕೊಂಡು ಕ್ಯಾಬ್, ಆಟೋ ಬುಕ್ ಮಾಡಿಕೊಂಡು ಮನೆಗೆ ಹೋಗಬಹುದು. ಈ ಕಿಯೋಸ್ಕ್​ಗಳಲ್ಲಿರುವ ಸಿಬ್ಬಂದಿಗಳು, ಪ್ರಯಾಣಿಕರು ಎಲ್ಲಿಗೆ ಹೋಗಬೇಕು ಎಂದು ಮಾಹಿತಿ ಕೇಳಿ ಕ್ಯಾಬ್, ಆಟೋ ಬುಕ್ ಮಾಡುತ್ತಾರೆ. ಇದರಿಂದ ಆಟೋ, ಕ್ಯಾಬ್​ಗಾಗಿ ಪ್ರಯಾಣಿಕರು ಪರದಾಡುವಂತಿಲ್ಲ.

53 ಲಕ್ಷ ರೂ. ಆದಾಯ

ಈ ಬಗ್ಗೆ ಕುರಿತಾಗಿ ಪ್ರತಿಕ್ರಿಯಿಸಿರುವ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಾಣೇಶ್ ಕೌಜಲಗಿ ಖಾಸಗಿ ಕಂಪನಿಗಳ ಕಿಯೋಸ್ಕ್​ಗಳಿಂದ ಪ್ರತಿ ವರ್ಷ ರೈಲ್ವೆ ಇಲಾಖೆಗೆ 53 ಲಕ್ಷ ರೂ. ಆದಾಯ ಬರಲಿದೆ ಎಂದಿದ್ದಾರೆ. ಇದರಿಂದ ತುಂಬಾ ಸಹಾಯ ಆಗುತ್ತದೆ ಎಂದು ರೈಲ್ವೆ ಪ್ರಯಾಣಿಕ ಬಸವರಾಜ್ ಎಂಬುವವರು ಹೇಳಿದ್ದಾರೆ.

ಏಲ್ಲೆಲ್ಲಿ ಕಿಯೋಸ್ಕ್​ಗಳ ನಿರ್ಮಾಣ

ಮೆಜೆಸ್ಟಿಕ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್, ಬೈಯಪ್ಪನಹಳ್ಳಿ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಯಶವಂತಪುರ ರೈಲ್ವೆ ಸ್ಟೇಷನ್, ಹೂಡಿ ರೈಲ್ವೆ ಸ್ಟೇಷನ್, ಕೆ.ಆರ್ ಪುರ ಮತ್ತು ವೈಟ್ ಫಿಲ್ಡ್ ರೈಲ್ವೆ ಸ್ಟೇಷನ್​ನಲ್ಲಿ ಈ ಬುಕ್ಕಿಂಗ್ ಕಿಯೋಸ್ಕ್​ಗಳು ಓಪನ್ ಆಗಲಿದೆ.

ಇದನ್ನೂ ಓದಿ: ನಕಲಿ ನಂದಿನಿ ತುಪ್ಪ ಕಡಿವಾಣಕ್ಕೆ KMF ಹೊಸ ಪ್ರಯೋಗ: ಕ್ಯೂ ಆರ್ ಕೋಡಿನಲ್ಲೇ ಅಸಲಿ, ನಕಲಿ ಪತ್ತೆ

ಒಟ್ಟಿನಲ್ಲಿ ಈ ಆಟೋ, ಕ್ಯಾಬ್ ಬುಕ್ಕಿಂಗ್ ಕಿಯೋಸ್ಕ್​ಗಳಿಂದ ರೈಲ್ವೆ ಸ್ಟೇಷನ್​ಗಳ ಬಳಿಯ ಕೆಲ ಆಟೋ, ಕ್ಯಾಬ್ ಚಾಲಕರ ಒನ್ ಟು ಡಬಲ್ ವಸೂಲಿಗೆ ಬ್ರೇಕ್ ಬೀಳುವುದು ಗ್ಯಾರಂಟಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:51 pm, Fri, 28 November 25