ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗೆ ಮತ್ತೆ ಕಂಟಕ: ಸುರಕ್ಷಿತವಲ್ಲ, ಕಾನೂನು ಬಾಹಿರವೆಂದು ಹೈಕೋರ್ಟ್‌ಗೆ ಹೈಪವರ್ ಕಮಿಟಿ ವರದಿ
ಹೈ ಪವರ್ ಕಮಿಟಿಯು ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ, ಬೆಂಗಳೂರಿನ ಬೈಕ್ ಟ್ಯಾಕ್ಸಿಗಳು ಅಸುರಕ್ಷಿತ ಮತ್ತು ಕಾನೂನು ಬಾಹಿರ ಎಂದು ಹೇಳಿದೆ. ಕೇಂದ್ರ ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ, ಸಂಚಾರ ದಟ್ಟಣೆ, ಸಾರ್ವಜನಿಕರ ಸುರಕ್ಷತೆ ಮತ್ತು ರಾಜಸ್ವ ನಷ್ಟದಂತಹ ಪ್ರಮುಖ ಕಾರಣಗಳನ್ನು ಸಮಿತಿ ಉಲ್ಲೇಖಿಸಿದೆ. ಈ ನಿರ್ಧಾರವು ಮುಂದಿನ ದಿನಗಳಲ್ಲಿ ಬೈಕ್ ಟ್ಯಾಕ್ಸಿಯ ಭವಿಷ್ಯವನ್ನು ನಿರ್ಧರಿಸಲಿದೆ.
ಬೆಂಗಳೂರು, ನವೆಂಬರ್ 26: ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳ ಭವಿಷ್ಯ ಮತ್ತೆ ಡೋಲಾಯಮಾನವಾಗುವ ಎಲ್ಲ ಸಾಧ್ಯತೆ ಗೋಚರಿಸಿದೆ. ಸರ್ಕಾರ ರಚಿಸಿದ್ದ ಹೈ ಪವರ್ ಕಮಿಟಿ ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದು, ಬೈಕ್ ಟ್ಯಾಕ್ಸಿಗಳು ಅಸುರಕ್ಷಿತ ಹಾಗೂ ಕಾನೂನು ಬಾಹಿರ ಎಂದು ಸ್ಪಷ್ಟಪಡಿಸಿದೆ. ಸಾರಿಗೆ ಸಂಘಟನೆಗಳು ಈ ವರದಿಯನ್ನು ಸ್ವಾಗತಿಸಿವೆ. ಆದರೆ, ಜನಸಾಮಾನ್ಯರು ಮಾತ್ರ ಬೈಕ್ ಟ್ಯಾಕ್ಸಿ ಸೇವೆ ಸುಲಭ ಮತ್ತು ಅನುಕೂಲಕರವೆಂದು ಹೇಳುತ್ತಿದ್ದಾರೆ. ಕಮಿಟಿ ಹೈಕೋರ್ಟ್‌ಗೆ ಸಲ್ಲಿಸಿದ ವರದಿಯ ಪ್ರಮುಖ ಅಂಶಗಳ ಪ್ರಕಾರ, ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲು ಸಾಧ್ಯವಿಲ್ಲ. ಇದು ಕೇಂದ್ರ ಮೋಟಾರ್ ವಾಹನ ಕಾಯ್ದೆಯ ಉಲ್ಲಂಘನೆಯಾಗಲಿದೆ. ಬೈಕ್ ಟ್ಯಾಕ್ಸಿಗಳು ನಗರದಲ್ಲಿ ವಿಪರೀತ ಸಂಚಾರ ದಟ್ಟಣೆಗೆ ಕಾರಣವಾಗುತ್ತವೆ. ಅಲ್ಲದೆ, ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ತರುವ ಸಾಧ್ಯತೆಗಳಿವೆ.
ಯುವಕರು ಆಹಾರ ವಿತರಣೆಯಂತಹ ಸೇವೆಗಳಲ್ಲಿ ಬೈಕ್‌ಗಳನ್ನು ಬಳಸಿ ಜೀವನೋಪಾಯ ನಡೆಸುವುದಕ್ಕೆ ಸಮಿತಿ ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ಪ್ರಯಾಣಿಕರನ್ನು ಕರೆದೊಯ್ಯುವ ವಾಣಿಜ್ಯ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಅವಕಾಶ ನೀಡಲಾಗದು ಎಂದು ವರದಿಯಲ್ಲಿ ತಿಳಿಸಲಾಗಿದೆ.
