ಮಳೆ ಅವಾಂತರ: 8 ವಲಯಗಳ ಅಧಿಕಾರಿಗಳ ಜೊತೆ ಬಿಬಿಎಂಪಿ ಕಮಿಷನರ್ ಸಭೆ, ಕಟ್ಟುನಿಟ್ಟಿನ ಸೂಚನೆ

| Updated By: ವಿವೇಕ ಬಿರಾದಾರ

Updated on: May 14, 2024 | 7:56 AM

ರಾಜಧಾನಿಯಲ್ಲಿ ಸುರಿದ ಮಳೆಯಿಂದ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಮಳೆಯಿಂದ ಮರಗಳು ಬಿದ್ದು ಹಾನಿಯಾದರೆ, ಒಂದಷ್ಟು ಕಡೆ ಮಳೆ ನೀರು ಮನೆಯೊಳೆಗೆ ನುಗ್ಗಿ ಜನರು ಹೈರಾಣಾಗಿದ್ದಾರೆ. ಹೀಗಾಗಿ ಬಿಬಿಎಂ ಸೋಮವಾರ ಸಭೆ ನಡೆಸಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​ ಸಭೆ ನಡೆಸಿ, ಸಿದ್ಧತೆಗಳ ಬಗ್ಗೆ ಚರ್ಚಿಸಿದ್ದಾರೆ.

ಮಳೆ ಅವಾಂತರ: 8 ವಲಯಗಳ ಅಧಿಕಾರಿಗಳ ಜೊತೆ ಬಿಬಿಎಂಪಿ ಕಮಿಷನರ್ ಸಭೆ, ಕಟ್ಟುನಿಟ್ಟಿನ ಸೂಚನೆ
ಬಿಬಿಎಂಪಿ ಆಯುಕ್ತ ತುಷಾರ್​ ಗಿರಿನಾಥ್​ ಸಭೆ
Follow us on

ಬೆಂಗಳೂರು, ಮೇ 14: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಳೆದ 3-4 ದಿನಗಳಿಂದ ಮಳೆ (Rain) ಸುರಿದು ಹಲವು ಅವಾಂತರಗಳು ಸೃಷ್ಟಿಯಾಗಿವೆ. ಮಳೆಗೆ ಮರಗಳು ಬಿದ್ದು ಸಮಸ್ಯೆಯಾದರೆ, ಅಂಡರ್ ಪಾಸ್, ರಸ್ತೆಗಳಲ್ಲಿ ನೀರು ನಿಂತು ಜನರು ಸಂಕಷ್ಟ ಅನುಭವಿಸಿದರು. ಮಳೆಯಿಂದಾದ ಅವಾಂತರಗಳ ಬಗ್ಗೆ ಟಿವಿ9 ನಿರಂತರ ವರದಿ ಮಾಡಿದ ಬೆನ್ನಲ್ಲೇ ಅಲರ್ಟ್ ಆದ ಬೃಹತ ಬೆಂಗಳೂರು ಮಹಾನಗರ ಪಾಲಿಕೆ (BBMP) ಸೋಮವಾರ (ಮೇ.13) ರಂಧು ಸಭೆ ನಡೆಸಿದೆ. ಮಳೆ ನೀರಿನ ನಿರ್ವಹಣೆ, ಮಳೆಗಾಲದ ಸಿದ್ಧತೆಗಳ ಬಗ್ಗೆ 8 ವಲಯಗಳ ಅಧಿಕಾರಿಗಳ ಜೊತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಭೆ ನಡೆಸಿ, ಮಳೆಗಾಲದ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದರು.

ಸದ್ಯ ಬೆಂಗಳೂರಿನ ಕೆಲ ಏರಿಯಾಗಳಲ್ಲಿ ಹೆಚ್ಚು ಮಳೆಯಾಗಿದ್ದು, ಇದುವರೆಗೆ ಸುಮಾರು 150 ಕಡೆ ನೀರು ನಿಂತು ಸಮಸ್ಯೆಯಾಗಿದೆ. ಅಲ್ಲದೆ 325 ಕಡೆ ಮರಗಳು ಧರೆಗುರುಳಿದ್ದು, ಪಾಲಿಕೆ ವತಿಯಿಂದ 320 ಮರಗಳನ್ನು ತೆರವು ಮಾಡಲಾಗಿದೆ ಅಂತ ಮಾಹಿತಿ ನೀಡಿದ ತುಷಾರ್ ಗಿರಿನಾಥ್, ಮಳೆಯಿಂದ ಆಗುವ ಅನಾಹುತಗಳನ್ನು ತಡೆಯಲು ಪ್ರತಿ ವಾರ್ಡ್​ಗೆ 30 ಲಕ್ಷ ಮೀಸಲಿಟ್ಟಿದ್ದೇವೆ. ಅಲ್ಲದೆ ಬ್ರ್ಯಾಂಡ್​ ಬೆಂಗಳೂರಿನ ಅಡಿಯಲ್ಲಿ 10 ಕೋಟಿ ಮೀಸಲಿಟ್ಟಿದ್ದೇವೆ. ಮಳೆಯಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ಸಜ್ಜಾಗಿದ್ದೇವೆ. ಅಲ್ಲದೆ ಶಿಥಿಲಾವಸ್ಥೆ ತಲುಪಿರುವ ಕಟ್ಟಡಗಳ ತೆರವಿಗೂ ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ಇದನ್ನೂ ಓದಿ: ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಮಳೆಯಿಂದಾದ ಅವಾಂತರಗಳೇನು? ಇಲ್ಲಿದೆ ರಿಪೋರ್ಟ್

ಇನ್ನು ರಾಜಕಾಲುವೆಗಳ ನೀರಿನ ಮಟ್ಟ ತಿಳಿಯಲು ಸೆನ್ಸಾರ್ ಅಳವಡಿಸಿರುವುದು ಹೇಗೆ ಕಾರ್ಯ ನಿರ್ವಹಿಸುತ್ತೆ ಅನ್ನೋ ಬಗ್ಗೆ ಬಿಬಿಎಂಪಿಯ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ವಿವರಿಸಿದರು. ನೀರಿನ ಮಟ್ಟ ತಿಳಿದು ಅಪಾಯ ಇರುವ ಸ್ಥಳಗಳಲ್ಲಿ ಅಲರ್ಟ್ ಆಗಲು ಈ ಟೆಕ್ನಾಲಜಿ ಸಹಕಾರಿಯಾಗಿದ ಎಂದ ಪ್ರಹ್ಲಾದ್, ಕಂಟ್ರೋಲ್ ರೂಂನ ಕಾರ್ಯನಿರ್ವಹಣೆ ಬಗ್ಗೆ ವಿವರಿಸಿದರು.

ಒಟ್ಟಿನಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಿದರು ಮಾತಿನ ಹಾಗೆ ಸಿಟಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಪಾಲಿಕೆ ಇದೀಗ ಅಲರ್ಟ್ ಆಗಿದೆ. ಅಂಡರ್ ಪಾಸ್, ರಸ್ತೆಗುಂಡಿ, ಪ್ರವಾಹಸ್ಥಿತಿ ಎದುರಿಸಲು ಸಜ್ಜಾಗಿದ್ದೇವೆ ಅಂತಿರೋ ಪಾಲಿಕೆ, ಈ ಬಾರಿಯ ಮಳೆಗಾಲವನ್ನ ಹೇಗೆ ನಿಭಾಯಿಸುತ್ತೆ ಎಂದು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:55 am, Tue, 14 May 24