Bengaluru Rains: ಬೆಂಗಳೂರಿನಲ್ಲಿ ಮಳೆ ತಂದ ಅವಾಂತರ, ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡೀ ಪರದಾಡಿದ ನಿವಾಸಿಗಳು

|

Updated on: May 24, 2023 | 7:01 AM

ಮಹಾನಗರದಲ್ಲಿ ಕಳೆದ ಕೆಲವು ದಿನಗಳಿಂದ ಭರ್ಜರಿಯಾಗಿ ಮಳೆಯಾಗುತ್ತಿದ್ದು, ಸಾವು ಕೂಡ ಸಂಭವಿಸಿದೆ. ಇದೀಗ ನಗರದ ದೇವರ ಚಿಕ್ಕನಹಳ್ಳಿ, ಅನುಗ್ರಹ ಬಡಾವಣೆಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ, ರಾತ್ರಿಯಿಡಿ ನಿದ್ದೆಯಿಲ್ಲದೆ ಅಲ್ಲಿನ ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

Bengaluru Rains: ಬೆಂಗಳೂರಿನಲ್ಲಿ ಮಳೆ ತಂದ ಅವಾಂತರ, ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡೀ ಪರದಾಡಿದ ನಿವಾಸಿಗಳು
ಬೆಂಗಳೂರು ಮಳೆ ಅವಾಂತರ
Follow us on

ಬೆಂಗಳೂರು: ಮಹಾನಗರದಲ್ಲಿ ಕಳೆದ ಕೆಲವು ದಿನಗಳಿಂದ ಭರ್ಜರಿಯಾಗಿ ಮಳೆಯಾಗುತ್ತಿದ್ದು, ಸಾವು ಕೂಡ ಸಂಭವಿಸಿದೆ. ಇದೀಗ ನಗರದ ದೇವರ ಚಿಕ್ಕನಹಳ್ಳಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ, ರಾತ್ರಿಯಿಡಿ ನಿದ್ದೆಯಿಲ್ಲದೆ ಅಲ್ಲಿನ ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಬಿಬಿಎಂಪಿ(BBMP) ಅಧಿಕಾರಿಗಳ ವಿರುದ್ಧ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ‘ದೇವರ ಚಿಕ್ಕನಹಳ್ಳಿಯಲ್ಲಿ ಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಚರಂಡಿಯಲ್ಲಿ ಹರಿದು ಹೋಗುತ್ತಿದ್ದ ನೀರು ಮನೆಗೆ ಬಂದಿದೆ. ಮನೆ ಮುಂದೆ ನಿಲ್ಲಿಸಿದ್ದ ವಾಹನಗಳೆಲ್ಲವೂ ಮುಳುಗಿ ಹೋಗಿದೆ. ಸಮಸ್ಯೆಯಾದರೂ ಬಿಬಿಎಂಪಿ ಅಧಿಕಾರಿಗಳು ಬಂದಿಲ್ಲವೆಂದು ಆಕ್ರೋಶ ಹೊರ ಹಾಕಿದರು.

ಅರ್ಧ ಗಂಟೆ ಮಳೆ ಬಂದಿದ್ದಕ್ಕೆ ಇಷ್ಟೆಲ್ಲ ಅವಾಂತರ ಆಗಿದೆ. ಮೋರಿ ರಿಪೇರಿ ನಡೀತಾ ಇತ್ತು, ಗೋಡೆ ಒಡೆದು ಹಾಕಿದ್ರಿಂದ ಈ‌‌ ರೀತಿಯಾಗಿದೆ. ಮನೆಯಲ್ಲಿ ಹೆಜ್ಜೆ ಮುಳುಗುಷ್ಟು, ಒಂದೆರಡು ಅಡಿ ನೀರು ಬಂದಿದೆ. ವಾಹನಗಳೆಲ್ಲ ಮುಳುಗಿ ಹೋಗಿದೆ. ಇದೆಲ್ಲ ಸರಿ ಆಗಬೇಕೆಂದರೆ ಎರಡ್ಮೂರು ದಿನ ಬೇಕು. ಯಾವ ಅಧಿಕಾರಿಗಳು ಕೂಡ ಇಲ್ಲಿಗೆ ಬಂದಿಲ್ಲ. ಚರಂಡಿ ಗೋಡೆ ಇದ್ದಿದ್ದರೆ ಇಲ್ಲಿಗೆ ನೀರು ಬರ್ತಿರ್ಲಿಲ್ಲ ಎಂದು ಬಿಬಿಎಂಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ರಾಜಕಾರಣಿಗಳು ಅನ್ನ ತಿನ್ನೋರಾದರೆ ಸರಿ ಮಾಡ್ತಾರೆ

ರಾಜಕಾರಣಿಗಳು ಮತ ಕೇಳಲು ಮನೆ ಮನೆಗೆ ಬರ್ತಾರೆ, ಚುನಾವಣೆಗೆ ಮುಂಚಿತವಾಗಿ ಸಾಕಷ್ಟು ಜನ ಬಂದು ಮೋರಿ ಕೆಲಸ ಮಾಡ್ತಿದ್ರು, ಚುನಾವಣೆ ಬಳಿಕ ಎರಡ್ಮೂರು ಜನ‌ ಅಷ್ಟೇ ಬರ್ತಿದ್ದಾರೆ. ನಾವು ಎಲ್ಲಿ ಹೋಗಿ ಮಲಗಿಕೊಳ್ಳೋದು. ಅವರ ಮನೆ ಇವರ ಮನೆಗೆ ಇಬ್ಬಿಬ್ಬರು ಹೋಗಿ ಮಲಗಿಕೊಳ್ತಿದ್ದೀವಿ. ರಾಜಕಾರಣಿಗಳು ಅನ್ನ ತಿನ್ನೋರಾದರೆ ಸರಿ ಮಾಡ್ತಾರೆ. ಅನ್ನ ತಿನ್ನೋರಲ್ಲ ಅವರು ಹೊಟ್ಟೆಗೆ ಮಣ್ಣು ತಿನ್ನೋರು. ನಮ್ಮ ಹೊಟ್ಟೆ ಉರಿಸ್ತಾರೆ, ನಾವು ಹೊಟ್ಟೆ ಉರ್ಕೊಂಡು ಸಾಯಬೇಕು. ನಾವೆಲ್ಲ ಬಾಡಿಗೆ ಮನೆಯಲ್ಲಿರೋರು, ನಾವೇನು ಸಾಯ್ಬೇಕಾ? ಯಾವಾಗ ಮಳೆ ಬಂದರು ಇದೇ ಪರಿಸ್ಥಿತಿ. ಮನೆ ಮಾಲೀಕರು ಅಗ್ರೀಮೆಂಟ್ ಮುಗಿಯೋವರೆಗೂ ಹಣ ಕೊಡಲ್ಲ ಅಂತಾರೆ, ನಾವು ಎಲ್ಲಿಗೆ ಹೋಗಬೇಕು ಎಂದರು.

ಇದನ್ನೂ ಓದಿ:Karnataka Rains: ಮುಂಗಾರು ಪೂರ್ವ ಮಳೆಗೆ ಈ ವರ್ಷ ರಾಜ್ಯದಲ್ಲಿ 52 ಮಂದಿ ಸಾವು; ಕಳೆದ ವರ್ಷ ಮೃತಪಟ್ಟವರೆಷ್ಟು?

ಅನುಗ್ರಹ ಬಡಾವಣೆ ಜನರ ಗೋಳು

ಇನ್ನು ದೇವರ ಚಿಕ್ಕನಹಳ್ಳಿ ಜನರ ಪಾಡು ಒಂದು ಕಡೆಯಾದರೆ ಅನುಗ್ರಹ ಬಡಾವಣೆ ಜನರ ಗೋಳು ಮತ್ತೊಂದು ಕಡೆ. ರಸ್ತೆಯಲ್ಲಿ ಮಂಡಿಯುದ್ದಕ್ಕೆ ಕೊಳಚೆ ನೀರು ನಿಂತಿತ್ತು, ಜೊತೆಗೆ ಮನೆಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ರಾತ್ರಿ ಕುಡಿಯಲು ಕೂಡ ನೀರು ಇಲ್ಲದೇ ಪರದಾಡುವಂತಾಗಿತ್ತು. ಮನೆಯಲ್ಲಿರುವ ಸಂಪ್​ನೊಳಗೆ ಕೊಳಚೆ ನೀರು ಸೇರಿದ್ದು, ಇಡೀ ರಾತ್ರಿ ಮನೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ ನಿವಾಸಿಗಳು, ಮನೆಯಲ್ಲಿ ಸೇರಿದ್ದ ಕೆಸರು ಹೊರ ಹಾಕ್ತಿದ್ದಾರೆ. ಇನ್ನು ಸ್ಥಳಕ್ಕೆ ಬಂದಿದ್ದ ಅಗ್ನಿ ಶಾಮಕ ಸಿಬ್ಬಂದಿ ಇಡೀ ರಾತ್ರಿ ರಸ್ತೆ ನೀರು ಹೊರ ಹಾಕೊ‌ ಕೆಲಸದ ಜೊತೆಗೆ ರಸ್ತೆ ಮೇಲೆ ನಿಂತಿದ್ದ ನೀರನ್ನು ಕೂಡ ಡೀ ವಾಟರಿಂಗ್ ಯಂತ್ರ ಬಳಸಿ‌ ಹೊರ ಹಾಕಿದರು.

ಇನ್ನು ಈ ಕುರಿತು ಬೊಮ್ಮನಹಳ್ಳಿ ವಲಯ ಬಿಬಿಎಂಪಿ ಜಂಟಿ ಆಯುಕ್ತ ಕೃಷ್ಣಮೂರ್ತಿ ಮಾತನಾಡಿ ‘ಅನುಗ್ರಹ ಬಡಾವಣೆಯಲ್ಲಿ ಸ್ವಲ್ಪ ಫ್ಲಡ್ಡಿಂಗ್ ಆಗಿದೆ. ಇದು ತಗ್ಗು ಪ್ರದೇಶ ಆಗಿದ್ದರಿಂದ ಜಾಸ್ತಿ ಮಳೆ ಬಿದ್ದಾಗ ಪ್ರತಿ ವರ್ಷ ಈ ಸಮಸ್ಯೆ ಆಗುತ್ತಿದೆ. ಸದ್ಯ ಡೀ ವಾಟರಿಂಗ್ ಮಾಡೊ ಕೆಲಸ ಮಾಡ್ತಿದ್ದೇವೆ. ನೀರು ಜಾಸ್ತಿ ಬಂದಾಗ ರಿವರ್ಸ್ ಆಗುತ್ತಿದೆ. ಮೊದಲು‌ ನೀರು ಹರಿವಿಕೆ ಕಡಿಮೆ ಇತ್ತು. ಈಗ ಕಟ್ಟಡ ನಿರ್ಮಾಣ ಹೆಚ್ಚಾಗಿದೆ, ಕಾಂಕ್ರೀಟ್ ರಸ್ತೆಗಳಾಗಿವೆ. ಹಾಗಾಗಿ ಫ್ಲೋ ಜಾಸ್ತಿಯಾಗಿ ಇರುತ್ತದೆ ಎಂದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ