ಸಚಿವ ಸಂಪುಟ ವಿಸ್ತರಣೆಗೆ ಕಸರತ್ತು: ತಲಾ ಒಂದೊಂದು ಪಟ್ಟಿ ಹಿಡಿದು ಇಂದು ಸಿಎಂ, ಡಿಸಿಎಂ ದಿಲ್ಲಿಗೆ, ಸಂಭವನೀಯ ಪಟ್ಟಿ ಇಲ್ಲಿದೆ

ಇಂದು ಸಂಜೆ 3 ದಿನಗಳ ಚುಟುಕು ಅಧಿವೇಶನಕ್ಕೆ ತೆರಬೀಳಲಿದ್ದು, ಸಚಿವ ಸಂಪುಟ ಕಸರತ್ತು ಮತ್ತೆ ಮುನ್ನಲೆಗೆ ಬಂದಿದೆ. ಈಗ ತಮ್ಮ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಿಎಂ ಮತ್ತು ಡಿಸಿಎಂ ಮತ್ತೆ ಹೈಕಮಾಂಡ್​ ಬಾಗಿಲು ಬಡಿಯಲು ಸಜ್ಜಾಗಿದ್ದಾರೆ.

ಸಚಿವ ಸಂಪುಟ ವಿಸ್ತರಣೆಗೆ ಕಸರತ್ತು: ತಲಾ ಒಂದೊಂದು ಪಟ್ಟಿ ಹಿಡಿದು ಇಂದು ಸಿಎಂ, ಡಿಸಿಎಂ ದಿಲ್ಲಿಗೆ, ಸಂಭವನೀಯ ಪಟ್ಟಿ ಇಲ್ಲಿದೆ
ಖರ್ಗೆ ಜೊತೆ ಸಿದ್ದು-ಡಿಕೆಶಿ
Follow us
ರಮೇಶ್ ಬಿ. ಜವಳಗೇರಾ
|

Updated on:May 24, 2023 | 7:15 AM

ಬೆಂಗಳೂರು: ಅಭೂತಪೂರ್ವ ಗೆಲುವು ಸಾಧಿಸಿದ ಕಾಂಗ್ರೆಸ್ ಯಾಕೋ ಅಂದುಕೊಂಡಷ್ಟು ಖುಷಿ ಖುಷಿಯಾಗಿಲ್ಲ. ನಾಯಕರ ಮುಖದಲ್ಲಿ ನಗುವಿಲ್ಲ, ಲೆಕ್ಕಾಚಾರಗಳಂತೂ ಮುಗಿಯುತ್ತಿಲ್ಲ. ಇಂಥ ಬೇಸರದ ಛಾಯೆಗೆ ಕಾರಣ ಸಚಿವ ಸಂಪುಟ ಕಸರತ್ತು.  ಹೌದು.. ಕಾಂಗ್ರೆಸ್ ಸರ್ಕಾರದಲ್ಲಿ 2ನೇ ಸುತ್ತಿನ ಸಂಪುಟ ರಚನೆ ಸರ್ಕಸ್ ಶುರುವಾಗಿದೆ. ಮೊದಲ ಹಂತದಲ್ಲಿ 8 ಶಾಸಕರು ಸಚಿವರಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಂಪುಟ ಸೇರಿದ್ದರು. ಇದೀಗ ಉಳಿದ ಸ್ಥಾನ ಭರ್ತಿ ಮಾಡಬೇಕಿದೆ. ಹೀಗಾಗಿ ಹೈಕಮಾಂಡ್ ಅಂಗಳದಲ್ಲಿ ಹೈವೋಲ್ಟೇಜ್ ಮೀಟಿಂಗ್ ಫಿಕ್ಸ್ ಆಗಿದ್ದು, ಇಂದೇ(ಮೇ 24) ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ದೆಹಲಿಗೆ ತೆರಳಲಿದ್ದಾರೆ. ಈ ನಡುವೆ ಖಾತೆ ಹಂಚಿಕೆ ಸರ್ಕಸ್ ಜೋರಾಗೇ ನಡೆಯುತ್ತಿದೆ. ಬುಧವಾರದ ವೇಳೆಗೆ ಎಲ್ಲವೂ ಫೈನಲ್ ಆಗುತ್ತೆ. ಎಲ್ಲಾ ಸಚಿವ ಸ್ಥಾನ ಭರ್ತಿ ಆಗುತ್ತೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ಡಿಕೆ ಶಿವಕುಮಾರ್ ಹೇಳಿಕೆಯಂತೆ ಸಂಪುಟ ಸರ್ಕಸ್ ಶುರುವಾಗಿದೆ. ಇವತ್ತು ಸಂಜೆ 6.30ಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿದ್ದಾರೆ. ರಾತ್ರಿಯೇ ಹೈಕಮಾಂಡ್ ನಾಯಕರ ಜೊತೆ ಮೀಟಿಂಗ್ ನಡೆಯಲಿದೆ.

ಇದನ್ನೂ ಓದಿ: ಯಾರೂ ಅನಗತ್ಯ ಹೇಳಿಕೆ ನೀಡಬಾರದು; ಸಿದ್ದರಾಮಯ್ಯ, ಡಿಕೆ ಬಣದ ಸಚಿವರು, ಶಾಸಕರಿಗೆ ಸುರ್ಜೇವಾಲ ಸೂಚನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನಡುವಿನ ಹಗ್ಗ-ಜಗ್ಗಾಟದಿಂದಾಗಿ ಮೊದಲ ಹಂತದಲ್ಲಿ ಕೇವಲ ಎಂಟು ಮಂದಿ ಮಾತ್ರ ಸಂಪುಟ ಸೇರ್ಪಡೆಯಾಗಿರುವುದರಿಂದ ಈ ಬಾರಿ ಕನಿಷ್ಠ 20 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅರ್ಹರ ಆಯ್ಕೆ ಬಗ್ಗೆ ಚರ್ಚಿಸಲು ಉಭಯ ನಾಯಕರು ದೆಹಲಿಗೆ ತೆರಳಲಿದ್ದು, ಮತ್ತೊಂದು ಸುತ್ತಿನ ಹೈವೋಲ್ಟೇಜ್‌ ಸರಣಿ ಸಭೆ ನಡೆಯುವ ನಿರೀಕ್ಷೆಯಿದೆ. ದೆಹಲಿಗೆ ತೆರಳುವ ಮುನ್ನವೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ರಣತಂತ್ರ ರೂಪಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಈಗಾಗಲೇ ಗೌಪ್ಯ ಸ್ಥಳದಲ್ಲಿ ತಮ್ಮ ಆಪ್ತರಾದ ಬೈರತಿ ಸುರೇಶ್ ಹಾಗೂ ಕೆ.ಜೆ ಜಾರ್ಜ್ ಜೊತೆ ಸೇರಿ ಮುಂದಿನ ನಡೆ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಜಾತಿ ಹಾಗೂ ಪ್ರಾದೇಶಿಕ ಲೆಕ್ಕಾಚಾರದ ಜತೆಗೆ ಉಭಯ ನಾಯಕರ ಆಪ್ತರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಚಾರವೂ ಅಡಕವಾಗಿರುವುದರಿಂದ ಆಯ್ಕೆ ಕಗ್ಗಂಟಾಗುತ್ತಿದೆ. ಕಳೆದ ಬಾರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಕೆಲ ನಿರ್ದಿಷ್ಟ ಹೆಸರುಗಳ ಬಗ್ಗೆ ಪಟ್ಟು ಹಿಡಿದಿದ್ದರಿಂದ 28 ಮಂದಿಯ ಬದಲಾಗಿ ಕೇವಲ 8 ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ತೀರ್ಮಾನ ಮಾಡಲಾಗಿತ್ತು. ಈ ಬಾರಿ ಇಂತಹ ಗೊಂದಲ ಉಂಟಾಗದಿರಲಿ ಎಂಬ ಕಾರಣಕ್ಕೆ ರಾಜ್ಯಕ್ಕೆ ಮಂಗಳವಾರವೇ ಆಗಮಿಸಿರುವ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಉಭಯ ನಾಯಕರೊಂದಿಗೆ ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದಾರೆ. ಇಷ್ಟಾಗಿಯೂ ಈ ಉಭಯ ನಾಯಕರು ತಮ್ಮದೇ ಆದ ಪಟ್ಟಿಯೊಂದಿಗೆ ಹೈಕಮಾಂಡ್‌ ಬಳಿ ತೆರಳುವುದು ಬಹುತೇಕ ಖಚಿತವಾಗಿದೆ. ಈ ಎರಡು ಪಟ್ಟಿಗಳ ಜತೆಗೆ ಹೈಕಮಾಂಡ್‌ ತನ್ನ ಬಯಕೆಯ ಕೆಲವರನ್ನು ಸೇರಿಸಿ ಅಂತಿಮ ಪಟ್ಟಿಸಿದ್ಧಪಡಿಸುವ ಅಗ್ನಿಪರೀಕ್ಷೆ ಎದುರಿಸಬೇಕಿದೆ.

ಒಂದು ವೇಳೆ ಇದು ನಿಜವಾದಲ್ಲಿ ಸಂಪುಟಕ್ಕೆ ಕೆಲ ಅಚ್ಚರಿಯ ಹೆಸರುಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ. ಆದರೆ, ಈ ಹಿರಿಯರು ಹೈಕಮಾಂಡ್‌ನಲ್ಲೂ ಪ್ರಭಾವಿಗಳಾಗಿರುವ ಕಾರಣ ಅಂತಿಮ ನಿರ್ಧಾರ ಏನಾಗಲಿದೆ ಎಂಬುದು ಸ್ಪಷ್ಟವಿಲ್ಲ. ಈ ಮೂಲಗಳ ಪ್ರಕಾರ ಬುಧವಾರ ಸಂಜೆ ದೆಹಲಿಗೆ ತೆರಳುವ ಉಭಯ ನಾಯಕರು ಗುರುವಾರ ಸಂಜೆಯ ವೇಳೆಗೆ ಪಟ್ಟಿ ಅಂತಿಮಗೊಳಿಸಲಿದ್ದಾರೆ. ಒಂದು ಬಾರಿ ಈ ಪಟ್ಟಿ ಅಂತಿಮವಾದ ನಂತರ ಸಚಿವರಿಗೆ ಖಾತೆ ಹಂಚಿಕೆ ವಿಚಾರವನ್ನು ಸಹ ಹೈಕಮಾಂಡ್‌ ಸಮ್ಮುಖದಲ್ಲೇ ತೀರ್ಮಾನವಾಗಲಿದೆ. ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ತಮ್ಮ ಆಪ್ತರಿಗೆ ನಿರ್ದಿಷ್ಟ ಖಾತೆ ಹಂಚಿಕೆ ಮಾಡುವ ಕುರಿತು ತೀವ್ರ ಪೈಪೋಟಿಯಿದೆ. ಹೀಗಾಗಿ ಖಾತೆ ಹಂಚಿಕೆ ವಿಚಾರದಲ್ಲೂ ಕಿಡಿ ಹಾರುವ ಸಾಧ್ಯತೆಯಿದೆ.

ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ. ಆದ್ರೆ, ಸಾಮೂಹಿಕ ನಾಯಕತ್ವದಡಿ ಚುನಾವಣೆ ಗೆದ್ದ ಕಾಂಗ್ರೆಸ್ ಪಡೆಯಲ್ಲೀಗ, ಅಧಿಕಾರ ಹಂಚಿಕೆಯ ಅಂತರ್ ಯುದ್ಧ ಶುರುವಾಗಿದೆ. ಸಂಪುಟಕ್ಕೆ ತಮ್ಮ ಆಪ್ತರನ್ನ ಸೇರಿಸಿಕೊಳ್ಳಲು ಸಿದ್ದರಾಮಯ್ಯ ಮತ್ತು ಡಿಕೆಶಿ ಜಿದ್ದಿಗೆ ಬಿದ್ದಿದ್ದು, ಕಾಂಗ್ರೆಸ್ ಪಾಲಿಗೆ ಕ್ಯಾಬಿನೆಟ್ ಕಸರತ್ತು ಕೇಕ್​ ವಾಕ್ ಬದಲು ಕಲ್ಲು, ಮುಳ್ಳಿನ ಹಾದಿಯಾಗಿದೆ. ಅಂತಿಮವಾಗಿ ಯಾರಿಗೆಲ್ಲ ಮಂತ್ರಿಭಾಗ್ಯ ಎನ್ನುವುದು ತೀವ್ರ ಕುತೂಹಲ ಮೂಡಿಸಿದ್ದು, ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ.

ಸಂಭವನೀಯ ಸಚಿವರ ಪಟ್ಟಿ

  • ಕೃಷ್ಣ ಬೈರೇಗೌಡ/ಎಂ.ಕೃಷ್ಣಪ್ಪ
  • ಬೈರತಿ ಸುರೇಶ್‌
  • ದಿನೇಶ್‌ ಗುಂಡೂರಾವ್‌/ಆರ್‌.ವಿ.ದೇಶಪಾಂಡೆ
  • ಮಧು ಬಂಗಾರಪ್ಪ
  • ಹಂಪನಗೌಡ ಬಾದರ್ಲಿ/ಬಸನಗೌಡ ತುರ್ವಿಹಾಳ್
  • ಶಿವಾನಂದ ಪಾಟೀಲ್‌
  • ಶಿವರಾಜ ತಂಗಡಗಿ
  • ಕೆ.ಎನ್‌.ರಾಜಣ್ಣ
  • ಬಸವರಾಜ ರಾಯರೆಡ್ಡಿ/ರಾಘವೇಂದ್ರ ಹಿಟ್ನಾಳ್‌ ಲಕ್ಷ್ಮೇ ಹೆಬ್ಬಾಳಕರ್
  • ಲಕ್ಷ್ಮಣ ಸವದಿ
  • ಎಚ್‌.ಕೆ.ಪಾಟೀಲ್‌/ ಜಿ.ಎಸ್‌.ಪಾಟೀಲ್‌
  • ಎಚ್‌.ಸಿ.ಮಹದೇವಪ್ಪ/ ನರೇಂದ್ರಸ್ವಾಮಿ
  • ಈಶ್ವರ್‌ ಖಂಡ್ರೆ
  • ಚೆಲುವರಾಯಸ್ವಾಮಿ
  • ಎಸ್‌.ಎಸ್‌.ಮಲ್ಲಿಕಾರ್ಜುನ್‌
  • ವಿನಯ್‌ ಕುಲಕರ್ಣಿ
  • ಸಂತೋಷ್‌ ಲಾಡ್‌

ವಿಧಾನಪರಿಷತ್‌ನಿಂದ

  •  ಸಲೀಂ ಅಹಮದ್‌
  • ಬಿ.ಕೆ.ಹರಿಪ್ರಸಾದ್‌

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:10 am, Wed, 24 May 23