ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ(Bengaluru Rain). ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದೆ ಮಳೆಯಾಗುತ್ತಿದ್ದು ಭಾರಿ ಅವಾಂತರಗಳು ಸೃಷ್ಟಿಯಾಗಿವೆ. ಸದ್ಯ ಈಗ ಬೆಂಗಳೂರಲ್ಲಿ ಮತ್ತೊಂದು ರಸ್ತೆ ಕುಸಿದಿದೆ(Road Collapse). ನಿನ್ನೆ ಸಂಜೆ ಪಟ್ಟಗಾರ ಪಾಳ್ಯ ಮುಖ್ಯರಸ್ತೆಯ ನಡು ರಸ್ತೆಯಲ್ಲಿ ಆಳುದ್ದ ರಸ್ತೆ ಕುಸಿದಿದೆ. ಕಳೆದ 15 ದಿನದಲ್ಲಿ ಇದು 5ನೇ ಪ್ರಕರಣ. ಸದ್ಯ ರಸ್ತೆ ಕುಸಿದಿರುವ ಜಾಗದಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು ರಾತ್ರಿ ಮಳೆ ನೀರು ಬಿದ್ದು ಸುರಂಗ ಸೃಷ್ಟಿಯಾಗಿದೆ. ಜೊತೆಗೆ ಶೇಷಾದ್ರಿಪುರಂ ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಆನಂದ್ ರಾವ್ ಸರ್ಕಲ್ಗೆ ಸಂಪರ್ಕ ಕಲ್ಪಿಸುವ ರಸ್ತೆ ಧಾರಾಕಾರ ಮಳೆಗೆ ಕಿತ್ತುಕೊಂಡು ಬಂದಿದೆ.
ಶಿವಾನಂದ ರೈಲ್ವೆ ಅಂಡರ್ ಪಾಸ್ ಬಳಿ ಕೊಚ್ಚಿ ಹೋದ ರಸ್ತೆ
ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಶಿವಾನಂದ ರೈಲ್ವೆ ಅಂಡರ್ ಪಾಸ್ ಬಳಿ 100 ಮೀಟರ್ನಷ್ಟು ರಸ್ತೆ ಕೊಚ್ಚಿ ಹೋಗಿದೆ. ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ತೀವ್ರ ಪರದಾಡುತ್ತಿದ್ದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಲ್ಲದೆ ರಸ್ತೆ ಕಿತ್ತುಹೋಗಿದ್ದರಿಂದ ಬೈಕ್ನಿಂದ ಬಿದ್ದು ಸವಾರನಿಗೆ ಗಾಯಗಳಾದ ಘಟನೆಯೂ ನಡೆದಿದೆ. ಶಾಲೆಗೆ ಮಗಳನ್ನು ಕರೆದುಕೊಂಡು ಹೋಗುತ್ತಿದ್ದ ತಂದೆಗೆ ಹಿಡಿತ ತಪ್ಪಿ ಬೈಕ್ ಸ್ಕಿಡ್ ಆಗಿದೆ. ಇದರಿಂದ ತಂದೆ-ಮಗಳಿಗೆ ಗಾಯಗಳಾಗಿವೆ. ಇದನ್ನೂ ಓದಿ: Rains in Bengaluru: ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ, ಮಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ವ್ಯಕ್ತಿ ಅಯತಪ್ಪಿ ಬಿದ್ದರು!
ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದೇನೆ -ಸಿಎಂ
ಇನ್ನು ಬೆಂಗಳೂರಿನಲ್ಲಿ ಮನೆಯಿಂದ ಆಗುತ್ತಿರುವ ಅವಾಂತರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದೇನೆ. ಮಳೆಯಿಂದ ಬೆಂಗಳೂರಿನ 2 ಕ್ಷೇತ್ರಗಳಲ್ಲಿ ಸಮಸ್ಯೆ ಆಗಿತ್ತು. ಇಡೀ ಬೆಂಗಳೂರಿಗೆ ಸಮಸ್ಯೆ ಆಯ್ತು ಅನ್ನೋದು ಸರಿಯಲ್ಲ. ಏನೇ ಸಮಸ್ಯೆ ಆದ್ರೂ ಎದುರಿಸುವ ಸಾಮರ್ಥ್ಯ ಸರ್ಕಾರಕ್ಕಿದೆ. ಬೆಂಗಳೂರಿನಲ್ಲಿ ಮಳೆ ನಿರ್ವಹಣೆಗೆ SDRF ಬಲಪಡಿಸಿದ್ದೇವೆ. ನಿರಂತರ ಮಳೆಯಿಂದಾಗಿ ಬೆಂಗಳೂರಲ್ಲಿ ರಸ್ತೆ ಗುಂಡಿ ಸಮಸ್ಯೆ ಎದುರಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಲು BBMP ಆಯುಕ್ತರಿಗೆ ತಿಳಿಸಿದ್ದೇನೆ ಎಂದರು.
ಮೊನ್ನೆ ಪ್ರವಾಹ ನಿರ್ವಹಣೆಯನ್ನು ನಮ್ಮ SDRF ತಂಡ ಸಮರ್ಥವಾಗಿ ನಿಭಾಯಿಸಿದೆ. ಇನ್ಮುಂದೆ ಯಾವುದೇ ಅವಘಡ ಆದರೂ ಅದನ್ನು ತಪ್ಪಿಸಲು ಕೆಲಸ ಮಾಡುತ್ತದೆ. ಪ್ರತಿ ಒಂದು ದಿನ 5000 ವಾಹನಗಳು ಬರ್ತವೆ. ಆದರೂ ಟ್ರಾಫಿಕ್ ಕ್ಲಿಯರ್ ಮಾಡಲು ಅಗತ್ಯ ಕ್ರಮಗಳನ್ನು ಪೊಲೀಸರು ಮಾಡ್ತಿದ್ದಾರೆ. 7500 ಸಿಸಿ ಕ್ಯಾಮರಾಗಳನ್ನು ಬೆಂಗಳೂರಿನಲ್ಲಿ ಅಳವಡಿಸುತ್ತಿದ್ದೇವೆ ಎಂದರು.
ಭಾರಿ ಮಳೆಯಿಂದಾಗಿ ಅನುಗ್ರಹ ಲೇಔಟ್ ಜಲಾವೃತ
ಬಿಳೇಕಹಳ್ಳಿಯಿಂದ ಅನುಗ್ರಹ ಲೇಔಟ್ಗೆ ಮಳೆ ನೀರು ನುಗ್ಗಿದ್ದು ಮನೆಯಿಂದ ಹೊರ ಬರಲಾಗದೆ ನಿವಾಸಿಗಳು ಪರದಾಡುತ್ತಿದ್ದಾರೆ. ಹಾಗೂ ಮನೆಯಿಂದ ನೀರು ಹೊರಹಾಕಲು ಹರಸಾಹಸ ಪಡುತ್ತಿರುವ ಘಟನೆ ಸಿಲಿಕಾನ್ ಸಿಟಿಯ ಅನುಗ್ರಹ ಲೇಔಟ್ ಮಂದಿಗೆ ಎದುರಾಗಿದೆ. ಇನ್ನು ಹೆಚ್ಎಸ್ಆರ್ ಲೇಔಟ್ನಲ್ಲೂ ಇದೇ ಪರಿಸ್ಥಿತಿ ಇದ್ದು, ಮನೆಯ ಲಿಫ್ಟ್ ನಲ್ಲೆಲ್ಲ ಮಳೆ ನೀರು ಸುರಿಯುತ್ತಿದೆ. ಹೆಚ್ಎಸ್ಆರ್ ಲೇಔಟ್ ಆರು ಮತ್ತು ಏಳನೇ ಸೆಕ್ಟರ್ನಲ್ಲಿನ ಮನೆಗಳ ಬೆಸ್ಮೆಂಟ್ ನಲ್ಲಿ ಐದಾರು ಅಡಿಗಳಷ್ಟು ನೀರು ನಿಲ್ಲುತ್ತಿದ್ದು ನಿವಾಸಿಗಳಿಗೆ ನರಕ ದರ್ಶನವಾಗುತ್ತಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಮಳೆ ಬಂದಾಗಲೆಲ್ಲಾ 5-6 ಅಡಿಗಳಷ್ಟು ನೀರು ನಿಲ್ಲುತ್ತದೆ. ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ಹೀಗಾಗುತ್ತಿದೆ. ಮಳೆ ಬಂದ್ರೆ ಬೇಸ್ಮೆಂಟ್ನಲ್ಲಿ ಯಾವ ವಸ್ತು ಇಡಲು ಆಗಲ್ಲ ಎಂದು ಅಧಿಕಾರಿಗಳ ವಿರುದ್ಧ ನಿವಾಸಿ ಮನ್ಸೂರ್ ಆಕ್ರೋಶ ಹೊರಹಾಕಿದ್ದಾರೆ.
ಮಳೆಯಿಂದ ಬೇಸತ್ತು ಬ್ಯಾಂಕನ್ನೇ ಶಿಫ್ಟ್ ಮಾಡಲು ನಿರ್ಧಾರ
ರೈನ್ ಬೋ ಡ್ರೈವ್ ಲೇಔಟ್ ನಲ್ಲಿ ಮಳೆ ನೀರು ನಿಂತಿದ್ದು ಮಳೆ ನೀರಿನಲ್ಲೇ ಜನರು ಓಡಾಡುವಂತಾಗಿದೆ. ಪದೇ ಪದೇ ಲೇಔಟ್ ಒಳಗೆ ಮಳೆ ನೀರು ನುಗ್ಗತ್ತಿರುವ ಹಿನ್ನೆಲೆ ಲೇಔಟ್ ಒಳಗಿದ್ದ ಬ್ಯಾಂಕ್ ಶಿಫ್ಟ್ ಮಾಡಲು ತೀರ್ಮಾನಿಸಲಾಗಿದೆ.
Published On - 10:59 am, Thu, 20 October 22