Bengaluru Rains: ಯಲಹಂಕ ಸುತ್ತಮುತ್ತ ಸೇರಿ ಬೆಂಗಳೂರಿನ ಹಲವೆಡೆ ಮಳೆ: ಜನಜೀವನ ಅಸ್ತವ್ಯಸ್ತ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಸುತ್ತಮುತ್ತ ಬಿರುಗಾಳಿ ಸಹಿತ ಭಾರಿ ಮಳೆ ಆಗಿದ್ದು, ಕೆಂಪೇಗೌಡ ಸರ್ಕಲ್ ಬಳಿ ನಾಲ್ಕು ಅಡಿಗೂ ಹೆಚ್ಚು ನೀರು ನಿಂತಿದೆ.
ಬೆಂಗಳೂರು: ಯಲಹಂಕ ಸುತ್ತಮುತ್ತ ಸೇರಿ ಬೆಂಗಳೂರಿನ (Bengaluru) ಹಲವೆಡೆ ಇಂದು ಕೂಡ ಧಾರಾಕಾರ ಮಳೆ (Rain) ಆಗಿದೆ. ನಿನ್ನೆ ಸಹ ನಗರದ ಹಲವೆಡೆ ಮಳೆ ಸುರಿದಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಸುತ್ತಮುತ್ತ ಬಿರುಗಾಳಿ ಸಹಿತ ಭಾರಿ ಮಳೆ ಆಗಿದ್ದು, ಕೆಂಪೇಗೌಡ ಸರ್ಕಲ್ ಬಳಿ ನಾಲ್ಕು ಅಡಿಗೂ ಹೆಚ್ಚು ನೀರು ನಿಂತಿದೆ. ದ್ವಿಚಕ್ರ ವಾಹನ ಹಾಗೂ ಗೂಡ್ಸ್ ಆಟೋ ಮಳೆ ನೀರಿನಲ್ಲಿ ಮುಳುಗಿವೆ. ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲಾಗದೆ ಕಾರು ಚಾಲಕರು ಪರದಾಡುವಂತಾಗಿದ್ದು, ರಸ್ತೆ ಕಾಣದೆ ಕಾರುಗಳು ನಿಂತಲ್ಲೆ ನಿಂತಿವೆ. ಬಿರುಗಾಳಿ ಸಹಿತ ಮಳೆಗೆ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳು ನೆಲಕ್ಕುರುಳಿದ್ದು, ದೇವನಹಳ್ಳಿಯಲ್ಲಿ ಒಂದು ಗಂಟೆ ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ನಿನ್ನೆ ಕೂಡ ನಗರದ ಕೆಆರ್ ಮಾರ್ಕೆಟ್, ಕಾರ್ಪೊರೇಷನ್, ರಿಚ್ಮಂಡ್ ಸರ್ಕಲ್ ಸೇರಿದಂತೆ ಹಲವು ಕಡೆಗಳಲ್ಲಿ ಧಾರಕಾರವಾಗಿ ಮಳೆ ಸುರಿದಿತ್ತು. ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿತ್ತು. ವಿದ್ಯಾರಣ್ಯಪುರ, ನಾಗಸಂದ್ರ, ಯಶವಂತಪುರ, ಜಾಲಹಳ್ಳಿ, ಪೀಣ್ಯ, ದಾಸರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಂತುರು ಮಳೆ ಆಗಿತ್ತು.
ಇದನ್ನೂ ಓದಿ: Bengaluru Rains: ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ; ಕೆಆರ್ ಮಾರ್ಕೆಟ್, ಕಾರ್ಪೊರೇಷನ್ ಸೇರಿ ಹಲವೆಡೆ ತಂಪೆರೆದ ವರುಣ
ಚಾಮರಾಜನಗರದಲ್ಲಿ ಇಂದು ಮುಂಜಾನೆಯಿಂದಲೆ ಜಿಲ್ಲೆಯ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಜಿಲ್ಲೆಯ ಹಲವೆಡೆ ತುಂತುರು ಮಳೆ ಸುರಿದಿದೆ. ಸದ್ಯ ಈ ವರೆಗೆ ಮಳೆಯಿಂದ ಹಾನಿ ಬಗ್ಗೆ ವರದಿಯಾಗಿಲ್ಲ. ಮಧ್ಯಾಹ್ನದ ನಂತರ ಎಂದಿನಂತೆ ವಾತಾವರಣ ಬಿಸಿಲಿನಿಂದ ಕೂಡಿತ್ತು.
ಏಪ್ರಿಲ್ 5 ರವರೆಗೂ ರಾಜ್ಯದಲ್ಲಿ ಮಳೆ ಸಾಧ್ಯತೆ
ಕರ್ನಾಟಕದ ಹಲವೆಡೆ ಏಪ್ರಿಲ್ 5 ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸೋಮವಾರ ಬೆಳಿಗ್ಗೆಯಷ್ಟೇ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಕೋಲಾರ, ರಾಮನಗರದಲ್ಲಿ ಗುಡುಗು ಸಹಿತ ಮಳೆಯಾಗಲಿದೆ.
ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಬೆಂಗಳೂರಿನಲ್ಲಿ ಭಾಗಶಃ ಮೋಡಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಕಲಬುರಗಿಯಲ್ಲಿ 38.3 ಡಿಗ್ರಿ ಸೆಲ್ಸಿಯಸ್ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದೂ ತಿಳಿಸಿತ್ತು.
ಬೆಂಗಳೂರಿನ ಎಚ್ಎಎಲ್ನಲ್ಲಿ 24.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 34.1ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 33.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.2. ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:09 pm, Tue, 4 April 23