Bengaluru Rains: ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ; ಕೆಆರ್ ಮಾರ್ಕೆಟ್, ಕಾರ್ಪೊರೇಷನ್ ಸೇರಿ ಹಲವೆಡೆ ತಂಪೆರೆದ ವರುಣ
ರಾಜ್ಯ ರಾಜಧಾನಿ ಬೆಂಗಳೂರು ನಗರದ ಹಲವೆಡೆ ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಕರ್ನಾಟಕದ ಹಲವೆಡೆ ಏಪ್ರಿಲ್ 5 ರವರೆಗೂ ಮಳೆ ಮುಂದುವರೆಯುವ ಸಾಧ್ಯತೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ನಗರದ ಹಲವೆಡೆ ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಕೆಲವು ಪ್ರದೇಶಗಳಲ್ಲಿ ತುಂತುರು ಮಳೆಯಾಗಿದ್ದರೆ (Rain) ಇನ್ನು ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗಿದೆ. ಕೆಆರ್ ಮಾರ್ಕೆಟ್, ಕಾರ್ಪೊರೇಷನ್, ರಿಚ್ಮಂಡ್ ಸರ್ಕಲ್ ಸೇರಿದಂತೆ ಹಲವು ಕಡೆಗಳಲ್ಲಿ ಧಾರಕಾರವಾಗಿ ಮಳೆ ಸುರಿದಿದೆ. ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ವಿದ್ಯಾರಣ್ಯಪುರ, ನಾಗಸಂದ್ರ, ಯಶವಂತಪುರ, ಜಾಲಹಳ್ಳಿ, ಪೀಣ್ಯ, ದಾಸರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಂತುರು ಮಳೆ ಮತ್ತು ಬಲವಾದ ಗಾಳಿ ಬೀಸಿದೆ ಎಂದು ‘ಕರ್ನಾಟಕ ವೆದರ್’ ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡಲಾಗಿದೆ.
ಮಳೆಯ ವಿಡಿಯೋ ಟ್ವೀಟ್ ಮಾಡಿರುವ ವ್ಯಕ್ತಿಯೊಬ್ಬರು ಬೇಸಿಗೆಯಲ್ಲೂ ಬೆಂಗಳೂರಿನಲ್ಲಿ ರೈನ್‌ಕೋಟ್ ಕೊಂಡೊಯ್ಯಬೇಕು ಎಂದು ಉಲ್ಲೇಖಿಸಿದ್ದಾರೆ. ಮತ್ತೊಬ್ಬರು, ಬೆಂಗಳೂರಿನಲ್ಲಿ ವರುಣ ವಿಹಾರ ಎಂದು ಉಲ್ಲೇಖಿಸಿದ್ದಾರೆ. ಕಳೆದ ಕೆಲವು ದಿನಗಳಲ್ಲಿಯೂ ನಗರದ ಹಲವೆಡೆ ಮಳೆಯ ಸಿಂಚನವಾಗಿತ್ತು.
ವರುಣ ವಿಹಾರ in Bengaluru#bengalururains pic.twitter.com/8SpEMBgdWA
— Priyathosh Agnihamsa (@priyathosh6447) April 3, 2023
ಇನ್ನೂ ಎರಡು ದಿನ ಮಳೆ ಸಾಧ್ಯತೆ
ಕರ್ನಾಟಕದ ಹಲವೆಡೆ ಏಪ್ರಿಲ್ 5 ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸೋಮವಾರ ಬೆಳಿಗ್ಗೆಯಷ್ಟೇ ಮುನ್ಸೂಚನೆ ನೀಡಿತ್ತು. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಕೋಲಾರ, ರಾಮನಗರದಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಬೆಂಗಳೂರಿನಲ್ಲಿ ಭಾಗಶಃ ಮೋಡಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಕಲಬುರಗಿಯಲ್ಲಿ 38.3 ಡಿಗ್ರಿ ಸೆಲ್ಸಿಯಸ್ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದೂ ತಿಳಿಸಿತ್ತು.
ಬೆಂಗಳೂರಿನ ಎಚ್ಎಎಲ್ನಲ್ಲಿ 24.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 34.1ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 33.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.2. ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ