ಬೆಂಗಳೂರು ಈಗ ಶ್ರೀಮಂತರ ನಗರ: ವಿಶ್ವದಲ್ಲೇ ಅತಿಹೆಚ್ಚು ಶ್ರೀಮಂತರಿರುವ ಟಾಪ್ 25 ನಗರಗಳಲ್ಲಿ ಬೆಂಗಳೂರಿಗೆ 16ನೇ ಸ್ಥಾನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 14, 2022 | 9:15 PM

ಬೆಂಗಳೂರಿನ 840 ಮಂದಿಯ ನಿವ್ವಳ ಆಸ್ತಿಯು ಒಂದು ಕೋಟಿ ಡಾಲರ್​ಗೂ ಹೆಚ್ಚು ಎಂದು ವರದಿಯು ತಿಳಿಸಿದೆ.

ಬೆಂಗಳೂರು ಈಗ ಶ್ರೀಮಂತರ ನಗರ: ವಿಶ್ವದಲ್ಲೇ ಅತಿಹೆಚ್ಚು ಶ್ರೀಮಂತರಿರುವ ಟಾಪ್ 25 ನಗರಗಳಲ್ಲಿ ಬೆಂಗಳೂರಿಗೆ 16ನೇ ಸ್ಥಾನ
ಬೆಂಗಳೂರು ನಗರ (ಸಂಗ್ರಹ ಚಿತ್ರ)
Follow us on

ದೆಹಲಿ: ಭಾರತದ ಐಟಿ ಮತ್ತು ಸ್ಟಾರ್ಟ್ಅಪ್ ಹಬ್ ಎಂಬ ಖ್ಯಾತಿ ಪಡೆದಿರುವ ಬೆಂಗಳೂರು 2022ರಲ್ಲಿ ವೇಗವಾಗಿ ಬೆಳೆಯುತ್ತಿರುವ ಶ್ರೀಮಂತ ಜನಸಂಖ್ಯೆಯನ್ನು ಹೊಂದಿರುವ ವಿಶ್ವದ ಅಗ್ರ 25 ನಗರಗಳಲ್ಲಿ 16ನೇ ಸ್ಥಾನದಲ್ಲಿದೆ. ಈ ಅಂಶವನ್ನು ಜಾಗತಿಕ ವಸತಿ ಮತ್ತು ಪೌರತ್ವ ಸಲಹಾ ಕಂಪನಿಯಾದ ಹೆನ್ಲೆ ಮತ್ತು ಪಾರ್ಟ್​ನರ್ಸ್​ ಕಂಪನಿಯು ಪ್ರಕಟಿಸಿದೆ. ನ್ಯೂ ವರ್ಲ್ಡ್ ವೆಲ್ತ್ ಒದಗಿಸಿದ ಅಂಕಿಅಂಶಗಳ ಪ್ರಕಾರ ಬೆಂಗಳೂರಿನಲ್ಲಿ 12,600 ಹೆಚ್ಚಿನ ನಿವ್ವಳ ಆಸ್ತಿ ಮೌಲ್ಯದ ವ್ಯಕ್ತಿಗಳು (High Net Worth Individuals – HNWI) ಇದ್ದು, 10 ಲಕ್ಷ ಅಮೆರಿಕನ್ ಡಾಲರ್​ಗಿಂತಲೂ ಹೆಚ್ಚಿನ ಸಂಪತ್ತು ಹೊಂದಿದ್ದಾರೆ.

ಇವರಲ್ಲಿ 840 ಮಂದಿ ಕೋಟ್ಯಾಧಿಪತಿಗಳಾಗಿದ್ದು, 1 ಕೋಟಿ ಡಾಲರ್​ಗಿಂತಲೂ ಹೆಚ್ಚಿನ ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ. ನಗರದಲ್ಲಿರುವ 49 ಮಂದಿಯ ಬಳಿ 10 ಕೋಟಿ ಡಾಲರ್​ಗೂ ಹೆಚ್ಚಿನ ನಿವ್ವಳ ಮೌಲ್ಯದ ಆಸ್ತಿಯಿದೆ. ಆರು ಮಂದಿಯ ಬಳಿ ಶತಕೋಟಿ ಡಾಲರ್​ಗೂ ಹೆಚ್ಚಿನ ಮೌಲ್ಯದ ಆಸ್ತಿಯಿದೆ. 2022ರ ಜನವರಿಯಿಂದ ಜೂನ್​ ಅವಧಿಯಲ್ಲಿ ಶ್ರೀಮಂತರ ಸಂಖ್ಯೆಯು ಶೇ 8ರಷ್ಟು ಏರಿಕೆ ಕಂಡಿದೆ.

ರಿಯಾದ್, ಶಾರ್ಜಾ, ಲುವಾಂಡಾ, ಅಬುಧಾಬಿ, ದೋಹಾ ಮತ್ತು ಲಾಗೋಸ್ ಸೇರಿದಂತೆ ತೈಲ ಮತ್ತು ನೈಸರ್ಗಿಕ ಅನಿಲ ಉದ್ಯಮಗಳ ವಹಿವಾಟು ನಿರ್ವಹಿಸುವ ನಗರಗಳಲ್ಲಿ ಶ್ರೀಮಂತಿಕೆ ಸತತವಾಗಿ ಹೆಚ್ಚಾಗುತ್ತಿದೆ. ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಅತಿವೇಗದ ಬೆಳವಣಿಗೆಯನ್ನು ದಾಖಲಿಸುತ್ತಿರುವ ಟಾಪ್ 10 ನಗರಗಳ ಪೈಕಿ, ಯುಎಇಯ ಶಾರ್ಜಾ, ಅಬುಧಾಬಿ ಮತ್ತು ದುಬೈ ಸೇರಿದೆ. ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಗರದಲ್ಲಿ ಶ್ರೀಮಂತರ ಸಂಖ್ಯೆಯು ಪ್ರತಿವರ್ಷ ಶೇ 20ರಷ್ಟು ಬೆಳವಣಿಗೆ ದಾಖಲಿಸುತ್ತಿದೆ. ಈ ನಗರವು ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.

ಚೀನಾದ ಹ್ಯಾಂಗ್​ಜೌ ನಗರವು ಶ್ರೀಮಂತರ ಸಂಖ್ಯೆಯಲ್ಲಿ ಶೇ 10ರ ಬೆಳವಣಿಗೆ ದಾಖಲಿಸಿದೆ. ಇದು ಜಗತ್ತಿನ ಶ್ರೀಮಂತರು ವಾಸಿಸುವ ನಗರಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಈ ನಗರದಲ್ಲಿರುವ 30,100 ವ್ಯಕ್ತಿಗಳು 10 ಲಕ್ಷ ಡಾಲರ್​ಗಿಂತಲೂ ಹೆಚ್ಚಿನ ಆಸ್ತಿಮೌಲ್ಯ ಹೊಂದಿದ್ದಾರೆ. ಚೀನಾದ ಶೆನ್​ಜೆನ್ ನಗರವು ಶ್ರೀಮಂತರ ಸಂಖ್ಯೆಯಲ್ಲಿ ಶೇ 9ರ ಬೆಳವಣಿಗೆ ಸಾಧಿಸಿದ್ದು 12ನೇ ಸ್ಥಾನದಲ್ಲಿದೆ.

ಮುಂಬೈ ವಿಶ್ವದ 25ನೇ ಶ್ರೀಮಂತ ನಗರ

‘ವಿಶ್ವದ ಶ್ರೀಮಂತ ನಗರಗಳು’ ಪಟ್ಟಿಯಲ್ಲಿ ಮುಂಬೈ 25ನೇ ಸ್ಥಾನದಲ್ಲಿದೆ. ಇದು ಪಟ್ಟಿಯಲ್ಲಿ ಚೀನಾದ ಶೆನ್​ಜೆನ್​ಗಿಂತಲೂ (30) ಮುಂದಿದೆ ಮತ್ತು ಯುಎಇಯ ದುಬೈ (23) ನಂತರದ ಸ್ಥಾನದಲ್ಲಿದೆ. ಮುಂಬೈನಲ್ಲಿ 60,600 ನಿವಾಸಿಗಳನ್ನು ಶ್ರೀಮಂತರು ಎಂದು ಘೋಷಿಸಲಾಗಿದೆ. ಈ ಪೈಕಿ 30 ಮಂದಿ ಶತಕೋಟ್ಯಧಿಪತಿಗಳಾಗಿದ್ದಾರೆ.

ಇತರ ಅತ್ಯಂತ ಶ್ರೀಮಂತ ನಗರಗಳು

ಹೆನ್ಲೆ ಗ್ಲೋಬಲ್ ಸಿಟಿಜನ್ಸ್ ರಿಪೋರ್ಟ್ ಪ್ರಕಾರ ನ್ಯೂಯಾರ್ಕ್, ಟೋಕಿಯೋ, ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ, ಲಂಡನ್ ಮತ್ತು ಸಿಂಗಾಪುರ ವಿಶ್ವದ ಅಗ್ರ ಐದು ಶ್ರೀಮಂತ ನಗರಗಳಾಗಿವೆ. ಬೀಜಿಂಗ್ ಮತ್ತು ಶಾಂಘೈ ವಿಶ್ವದ ಒಂಬತ್ತನೇ ಮತ್ತು 10ನೇ ಶ್ರೀಮಂತ ನಗರಗಳಾಗಿವೆ. ಸಿಡ್ನಿ (11), ಹಾಂಗ್​ಕಾಂಗ್ (12), ಫ್ರಾಂಕ್​ಫರ್ಟ್ (13), ಟೊರೆಂಟೊ (14), ಜ್ಯೂರಿಚ್ (15), ಸಿಯೋಲ್ (16) ಮತ್ತು ಪ್ಯಾರಿಸ್ (20) ವಿಶ್ವದ ಟಾಪ್ 20 ಶ್ರೀಮಂತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಭಾರತದ ಶ್ರೀಮಂತರ ಸಂಖ್ಯೆ ಹೆಚ್ಚಳ

2010ರಿಂದ 2021ರ ಅವಧಿಯಲ್ಲಿ ಭಾರತದಲ್ಲಿ ಶ್ರೀಮಂತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಭಾರತದಲ್ಲಿ ಶ್ರೀಮಂತರ ಸಂಖ್ಯೆಯ ಪ್ರಮಾಣವು ಶೇ 74ರ ದರದಲ್ಲಿ ಹೆಚ್ಚಾಗಿದ್ದರೆ, ಚೀನಾದಲ್ಲಿ ಶ್ರೀಮಂತರ ಸಂಖ್ಯೆಯು ಶೇ 88ರಷ್ಟು ಹೆಚ್ಚಾಗಿದೆ. 2021ರಲ್ಲಿ ಭಾರತವು ಹೆಚ್ಚು ಸಂಪತ್ತು ಇರುವವರ ಸಂಖ್ಯೆಯಲ್ಲಿ ಶೇ 7ರ ಬೆಳವಣಿಗೆ ಕಂಡಿದೆ. ಪ್ರಗತಿ ದರದ ಲೆಕ್ಕಾಚಾರದಲ್ಲಿ ಭಾರತವು ಅಮೆರಿಕ, ಫ್ರಾನ್ಸ್​ ಮತ್ತು ಇಟಲಿ ನಂತರದ ಸ್ಥಾನದಲ್ಲಿದೆ.

2031ಕ್ಕೆ ಕೊನೆಗೊಳ್ಳುವ ಮುಂದಿನ ದಶಕದಲ್ಲಿ ಭಾರತದಲ್ಲಿ ಶ್ರೀಮಂತರ ಸಂಖ್ಯೆಯು ಶೇ 80ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದು ಆಸ್ಟ್ರೇಲಿಯಾ (ಶೇ 60) ಮತ್ತು ಚೀನಾಕ್ಕಿಂತಲೂ (ಶೇ 50) ಹೆಚ್ಚು. ಭಾರತದಲ್ಲಿ ಪ್ರಸ್ತುತ 128 ಮಂದಿಯ ಬಳಿ 100 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಸಂಪತ್ತು ಇದೆ. 1,149 ಮಂದಿ ಬಳಿ 1 ಕೋಟಿಗೂ ಹೆಚ್ಚು ಅಮೆರಿಕನ್ ಡಾಲರ್​ನಷ್ಟು ಸಂಪತ್ತು ಇದೆ. 22,400 ಮಂದಿಯ ಬಳಿ 10 ಲಕ್ಷಕ್ಕೂ ಹೆಚ್ಚು ಡಾಲರ್ ಇದೆ. ಭಾರತದಲ್ಲಿ ಪ್ರಸ್ತುತ ಇರುವ ಅತಿಶ್ರೀಮಂತರ ಸಂಖ್ಯೆಯು 3,57,000 ಎಂದು ಅಂದಾಜಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ಸಂಪತ್ತು ಹೊಂದಿರುವ ಶ್ರೀಮಂತರ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ ಸಿಕ್ಕಿದೆ.

Published On - 9:15 pm, Wed, 14 September 22