Encroachment: ರಾಜಕಾಲುವೆ ಒತ್ತುವರಿ ಒಪ್ಪಿಕೊಂಡ ಟೆಕ್ಪಾರ್ಕ್; ತಪ್ಪಿಗೆ ಕಂಪನಿ ಕೊಟ್ಟ ಸಮರ್ಥನೆ ಹೀಗಿದೆ
ಬೆಂಗಳೂರಿನ ಪ್ರಸಿದ್ಧ ಡೆವಲಪರ್ ಬಾಗ್ಮನೆ ಗ್ರೂಪ್ ಅಭಿವೃದ್ಧಿಪಡಿಸಿರುವ ‘ಬಾಗ್ಮನೆ ವರ್ಲ್ಡ್ ಟೆಕ್ನಾಲಜಿ ಸೆಂಟರ್’ ಮಳೆನೀರು ಹರಿಯುವ ಕಾಲುವೆಗಳನ್ನು ಅತಿಕ್ರಮಿಸಿದ 15 ದೊಡ್ಡ ಹೆಸರುಗಳಲ್ಲಿ ಒಂದಾಗಿದೆ.
ಬೆಂಗಳೂರು: ಪೂರ್ವ ಬೆಂಗಳೂರಿನಲ್ಲಿರುವ ಟೆಕ್ ಪಾರ್ಕ್ ಒಂದು ಮಳೆನೀರು ಹರಿಯುವ ರಾಜಕಾಲುವೆ ಅತಿಕ್ರಮಿಸಿರುವುದನ್ನು ಒಪ್ಪಿಕೊಂಡಿದೆ. ಆದರೆ ತನ್ನ ಕೃತ್ಯಕ್ಕೆ ಪುರವಂಕರ (Purvankara) ರಿಯಲ್ ಎಸ್ಟೇಟ್ ಕಂಪನಿಯು ನಿರ್ಮಿಸಿರುವ ಪುರ್ವಾ ಪಾರ್ಕ್ ರಿಡ್ಜ್ (Purva Parkridge) ಮುಖ್ಯ ಕಾರಣ ಎಂದು ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ಎನ್ಡಿಟಿವಿ ಜಾಲತಾಣವು ವಿಶೇಷ ವರದಿಯನ್ನು ಪ್ರಕಟಿಸಿದೆ. ನಗರದ ಪ್ರಸಿದ್ಧ ಡೆವಲಪರ್ ಬಾಗ್ಮನೆ ಗ್ರೂಪ್ ಅಭಿವೃದ್ಧಿಪಡಿಸಿರುವ ‘ಬಾಗ್ಮನೆ ವರ್ಲ್ಡ್ ಟೆಕ್ನಾಲಜಿ ಸೆಂಟರ್’ (The Bagmane World Technology Centre) ಮಳೆನೀರು ಹರಿಯುವ ಕಾಲುವೆಗಳನ್ನು ಅತಿಕ್ರಮಿಸಿದ 15 ದೊಡ್ಡ ಹೆಸರುಗಳಲ್ಲಿ ಒಂದಾಗಿದೆ. ಕಳೆದ ವಾರ ನಗರದ ಕೆಲವು ಭಾಗಗಳಲ್ಲಿ ಗಂಭೀರ ಪ್ರವಾಹಕ್ಕೆ ಕಾರಣವಾದ ಅಂಶಗಳಲ್ಲಿ ಈ ಅತಿಕ್ರಮಣವೂ ಒಂದು. ಇದರ ಜೊತೆಗೆ ಪಕ್ಕದ ಉಬರ್-ರಿಚ್ ಪುರವಂಕರ ಪುರ್ವಾ ರಿಡ್ಜ್ ಪ್ರದೇಶದ ಎರಡು ವಿಲ್ಲಾಗಳನ್ನು ರಾಜಕಾಲುವೆಗಳನ್ನು ಅತಿಕ್ರಮಿಸಿ ಕಟ್ಟಲಾಗಿದೆ ಎಂದು ಬಿಬಿಎಂಪಿ ಹೇಳಿದೆ. ಇದೇ ಪ್ರದೇಶದಲ್ಲಿ ನಿನ್ನೆ (ಸೆ 14) ಬಿಬಿಎಂಪಿ ಎರಡನೇ ಸಮೀಕ್ಷೆ ನಡೆಸಿತು.
ಪೂರ್ವ ಬೆಂಗಳೂರಿನ ಐಟಿ ಕಾರಿಡಾರ್ಗೆ ಹೊಂದಿಕೊಂಡಂತೆ ಇರುವ ಬಾಗ್ಮನೆ ವರ್ಲ್ಡ್ ಟೆಕ್ನಾಲಜಿ ಸೆಂಟರ್ ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದು. ಇಲ್ಲಿ ಮಳೆನೀರು ಹರಿಯುವ ಕಾಲುವೆಗಳನ್ನು 2.4 ಮೀಟರ್ಗಳಷ್ಟು (7.8 ಅಡಿ) ಅತಿಕ್ರಮಣ ಮಾಡಿರುವುದು ಬೆಳಕಿಗೆ ಬಂತು. ‘ಹೌದು, ನಾವು ಮಳೆನೀರು ಚರಂಡಿಯನ್ನು ಸ್ಲ್ಯಾಬ್ಗಳಿಂದ ಮುಚ್ಚಿದ್ದೇವೆ’ ಎಂಬ ಬಾಗ್ಮನೆಯ ಜನರಲ್ ಮ್ಯಾನೇಜರ್ ಜಿ.ಪಿ.ಚಕ್ರವರ್ತಿ ಅವರ ಹೇಳಿಕೆಯನ್ನು ಎನ್ಡಿಟಿವಿ ಜಾಲತಾಣ ವರದಿ ಮಾಡಿದೆ. ಇದೇ ಟೆಕ್ ಪಾರ್ಕ್ನಲ್ಲಿ ಬೋಯಿಂಗ್, ಅಕ್ಸೆಂಚರ್, ಇವೈ, ಡೆಲ್ ಮತ್ತು ಎರಿಕ್ಸನ್ನಂಥ ದೊಡ್ಡ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.
‘ಮಹದೇವಪುರ ಕೆರೆಯ ಹಿನ್ನೀರು ಟೆಕ್ಪಾರ್ಟ್ಗೆ ಹರಿಯುವುದನ್ನು ನಿಲ್ಲಿಸಲು ಹೀಗೆ ಮಾಡಬೇಕಾಯಿತು. ಆದರೆ ಈ ಪ್ರಕರಣದ ಮುಖ್ಯ ದೋಷಿ ಪುರವಂಕರ ನಿರ್ಮಿಸಿರುವ ಪೂರ್ವ ರಿಡ್ಜ್ ವಿಲ್ಲಾಗಳು. ಅವರು ಮಳೆನೀರು ಚರಂಡಿಯನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ’ ಎಂದು ಚಕ್ರವರ್ತಿ ತಿಳಿಸಿದರು. ಪುರವಂಕರ ಪೂರ್ವಾ ಪಾರ್ಕ್ ರಿಡ್ಜ್ನಲ್ಲಿ ಮೂರರಿಂದ ನಾಲ್ಕು ಬೆಡ್ರೂಮ್ ಇರುವ 149 ವಿಲ್ಲಾಗಳಿವೆ. ಈ ಪೈಕಿ ಟೆಕ್ ಪಾರ್ಕ್ನ ಗಡಿ ಗೋಡೆಗೆ ಅಡ್ಡಲಾಗಿ ಇರುವ ಎರಡು ವಿಲ್ಲಾಗಳು ಸುಮಾರು 2.5 ಮೀಟರ್ಗಳಷ್ಟು ಚರಂಡಿಗಳನ್ನು ಅತಿಕ್ರಮಿಸಿರುವುದು ಕಂಡುಬಂದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕಳೆದ ತಿಂಗಳು ಸಮೀಕ್ಷೆ ನಡೆಸಿ ಒತ್ತುವರಿಯನ್ನು ಪತ್ತೆಹಚ್ಚಿತ್ತು. ತಮ್ಮ ಅನುಪಸ್ಥಿತಿಯಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದು ನಿವಾಸಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಬಿಬಿಎಂಪಿ ಅಧಿಕಾರಿಗಳು ಎರಡನೇ ಬಾರಿಗೆ ನಿನ್ನೆ (ಸೆ 14) ವಿಲ್ಲಾಗೆ ಮತ್ತೊಮ್ಮೆ ಭೇಟಿ ನೀಡಿ, ನಿವಾಸಿಗಳ ಸಮ್ಮುಖದಲ್ಲಿ ಸ್ಥಳವನ್ನು ಸಮೀಕ್ಷೆ ಮಾಡಿದರು. ಪೂರ್ವಾಂಕರ ಬಿಲ್ಡರ್ ಕಂಪನಿಯು ಮಳೆನೀರು ಹರಿಸುವ ಚರಂಡಿಗಳ ಮೇಲೆಯೇ ಅಕ್ರಮವಾಗಿ ವಿಲ್ಲಾಗಳನ್ನು ನಿರ್ಮಿಸಿರುವುದು ಈ ಸಂದರ್ಭದಲ್ಲಿ ಬೆಳಕಿಗೆ ಬಂತು.
ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಎಂಜಿನಿಯರ್ ಮಾಲತಿ, ‘ನ್ಯಾಯಾಲಯದ ತೀರ್ಪು ಆಧರಿಸಿ, ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ. ಈ ಬೆಳವಣಿಗೆಯಿಂದ ಆಘಾತಕ್ಕೊಳಗಾಗಿರುವ ನಿವಾಸಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳುತ್ತಿದ್ದಾರೆ. ಬೆಂಗಳೂರಿನ ಸುಮಾರು 700 ಪ್ರದೇಶದಲ್ಲಿ ರಾಜಕಾಲುವೆಗಳು ಮುಚ್ಚಿಹೋಗಿವೆ. ಈ ಪಟ್ಟಿಯಲ್ಲಿ ಹೈ ಪ್ರೊಫೈಲ್ ಬಿಲ್ಡರ್ಗಳು, ಡೆವಲಪರ್ಗಳು ಮತ್ತು ಟೆಕ್ ಪಾರ್ಕ್ಗಳು ಇವೆ. ಈ ಪೈಕಿ ವಿಪ್ರೋ, ಪ್ರೆಸ್ಟೀಜ್, ಇಕೋ ಸ್ಪೇಸ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ದಿವ್ಯಶ್ರೀ ವಿಲ್ಲಾಸ್ ಮತ್ತು ಬಾಗ್ಮನೆ ಟೆಕ್ಪಾರ್ಕ್ ಹೆಸರುಗಳು ಇವೆ ಎಂದು ಎನ್ಡಿಟಿವಿ ವರದಿ ಮಾಡಿದೆ.
Published On - 6:40 am, Thu, 15 September 22