Bengaluru Rapid Road: ರ್‍ಯಾಪಿಡ್ ರಸ್ತೆಯಲ್ಲಿ ಬಿರುಕು, ರಸ್ತೆ ನಿರ್ಮಾಣ ಮಾಡದಂತೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ

ಮುಖ್ಯಮಂತ್ರಿಯವರು ಉದ್ಘಾಟಿಸಿದ ಒಂದೇ ತಿಂಗಳಿಗೆ ದೇಶದ ಪ್ರಥಮ ರ್‍ಯಾಪಿಡ್​ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೋಟ್ಯಂತರ ಹಣ ಖರ್ಚು ಮಾಡಿ ನಿರ್ಮಾಣಗೊಂಡಿದ್ದ ರ್‍ಯಾಪಿಡ್​ ರಸ್ತೆ ಇದಾಗಿದೆ. ಈ ಹಿನ್ನಲೆ ರ್‍ಯಾಪಿಡ್ ರಸ್ತೆ ನಿರ್ಮಾಣ ಮಾಡದಂತೆ ಸಿಎಂ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Bengaluru Rapid Road: ರ್‍ಯಾಪಿಡ್ ರಸ್ತೆಯಲ್ಲಿ ಬಿರುಕು, ರಸ್ತೆ ನಿರ್ಮಾಣ ಮಾಡದಂತೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ
ಬೆಂಗಳೂರು ರ್‍ಯಾಪಿಡ್ ರಸ್ತೆ
Updated By: Rakesh Nayak Manchi

Updated on: Jan 14, 2023 | 2:53 PM

ಬೆಂಗಳೂರು: ಉದ್ಘಾಟನೆಗೊಂಡ ಒಂದೇ ತಿಂಗಳಿಗೆ ಬಿರುಕು ಕಂಡ ಹಿನ್ನಲೆ ರ್‍ಯಾಪಿಡ್ ರಸ್ತೆ (Rapid road) ನಿರ್ಮಾಣ ಮಾಡದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದ್ದಾರೆ. “ಪ್ರಿಕಾಸ್ಟ್ ತಂತ್ರಜ್ಞಾನ ಬಳಸಿ ನಿರ್ಮಿಸಿದ ಮೊದಲ ರ್‍ಯಾಪಿಡ್ ರಸ್ತೆಯಲ್ಲಿ ಬಿರುಕು ಕಂಡಿರುವ ಹಿನ್ನಲೆಯಲ್ಲಿ ರ್‍ಯಾಪಿಡ್ ರಸ್ತೆ ನಿರ್ಮಾಣ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ಕರ್ನಾಟಕ ಮುಖ್ಯಮಂತ್ರಿ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಅಮೆರಿಕದಲ್ಲಿ ನಿರ್ಮಾನಗೊಂಡ ರ್‍ಯಾಪಿಡ್ ರಸ್ತೆ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಇದೇ ಮಾದರಿಯಲ್ಲಿ ನಗರದ ಸಿ.ವಿ.ರಾಮನ್​ನಗರ ಕ್ಷೇತ್ರದ ಹಳೇ ಮದ್ರಾಸ್​​ ರಸ್ತೆಯಲ್ಲಿ ನಿರ್ಮಿಸಲಾದ ರ್‍ಯಾಪಿಡ್​​ ರಸ್ತೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಡಿ.08 ರಂದು ಉದ್ಘಾಟಿಸಿದ್ದರು. ದೇಶದಲ್ಲಿ ಇದೇ ಮೊದಲು ಬಾರಿಗೆ ನಮ್ಮ ಬೆಂಗಳೂರಿನಲ್ಲಿ ರ್‍ಯಾಪಿಡ್ ರಸ್ತೆ ಪರಿಚಯಿಸಲಾಗಿತ್ತು. ಉದ್ಘಾಟನೆ ಬಳಿಕ ನಗರದ ಇನ್ನಿತರ ಕಡೆಗಳಲ್ಲಿ ಇದೇ ರೀತಿಯ ರಸ್ತೆ ನಿರ್ಮಾಣ ಮಾಡಲು ಬಿಬಿಎಂಪಿ ನಿರ್ಧರಿಸಿತ್ತು.

ಇದನ್ನೂ ಓದಿ: ಬೆಂಗಳೂರಲ್ಲಿ ನಿರ್ಮಿಸಿದ್ದ ದೇಶದ ಪ್ರಥಮ ರ್ಯಾಪಿಡ್​ ರಸ್ತೆ ಉದ್ಘಾಟನೆಗೊಂಡ ಒಂದೇ ತಿಂಗಳಿಗೆ ಬಿರುಕು

ನಗರದ ಹಳೆ ಮದ್ರಾಸ್ ರಸ್ತೆಯ ಬಿನ್ನಮಂಗಲ ವೃತ್ತದಿಂದ ಸುಮಾರು 500 ಮೀಟರ್ ತನಕ ಪ್ರಾಯೋಗಿಕವಾಗಿ ರ್‍ಯಾಪಿಡ್ ರಸ್ತೆಯನ್ನು ಕೇವಲ ಹದಿನೈದು ದಿನಗಳ ಒಳಗೆ ರಸ್ತೆ ಕಾಮಗಾರಿ ನಡೆಸಿ ಮುಗಿಸಿದ್ದರು. ಈ ರ್‍ಯಾಪಿಡ್ ರಸ್ತೆ (ಫ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ಪೇವ್ಮೆಂಟ್) ಫ್ರೀಕಾಸ್ಟ್ ಪ್ಯಾನೆಲ್​ನಿಂದ ನಿರ್ಮಿಸಲಾಗುತ್ತದೆ. ಮೊದಲಿಗೆ ರಸ್ತೆಯನ್ನು ಸಮತಟ್ಟಾಗಿ ಮಾಡಿಕೊಂಡು ಅದರ ಮೇಲೆ ಫ್ರೀಕಾಸ್ಟ್ ಪ್ಯಾನಲ್ ಗಳನ್ನು ಅಳವಡಿಸಲಾಗುತ್ತದೆ. ಪ್ರತಿ ಪ್ಯಾನಲ್​ನಲ್ಲಿ 4 ರಂದ್ರಗಳಿದ್ದು ವಾಹನಗಳು ಸಂಚಾರ ಮಾಡುವಾಗ ಅಲುಗಾಡದಂತೆ ನೀಡುತ್ತವೆ. ಹಾಗೆ ಒಂದು ಫ್ರೀಕಾಸ್ಟ್ ಪ್ಯಾನಲ್ 5 ಅಡಿ ಅಗಲ 20 ಅಡಿ ಉದ್ದ 7 ಇಂಚು ದಪ್ಪವಿದ್ದು ಪ್ರತಿ 45 ಮೀಟರ್​ಗೂ ರ್‍ಯಾಪಿಡ್ ಹಾರ್ಡನಿಂಗ್ ಕಾಂಕ್ರೀಟ್ ಹಾಕಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ