ಹೆಣ್ಣುಮಕ್ಕಳೇ ರ್ಯಾಪಿಡೋ ಬುಕ್ ಮಾಡೋ ಮುನ್ನ ಬಿ ಅಲರ್ಟ್! ಬೈಕ್ ಸವಾರನಿಂದ ಯುವತಿಗೆ ಲೈಂಗಿಕ ಕಿರುಕುಳದ ಆರೋಪ
ಬೆಂಗಳೂರಿನ ಪುಲಕೇಶಿನಗರದಲ್ಲಿ ರ್ಯಾಪಿಡೋ ಬೈಕ್ ಚಾಲಕ ಸೈಯದ್ ಎಂಬಾತ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೈನ್‌ಕೋಟ್ ನೀಡುವ ನೆಪದಲ್ಲಿ ಬಣ್ಣದ ಮಾತುಗಳನ್ನಾಡಿ, ಹೆಲ್ಮೆಟ್ ಪಡೆಯುವಾಗ ಕೈ ಸವರಿ, ಫೋನ್ ನಂಬರ್ ಪಡೆಯಲು ಯತ್ನಿಸಿದ್ದಾನೆ. ಈ ಕಹಿ ಅನುಭವವನ್ನು ಯುವತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕರು ಚಾಲಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು
- ಪುಲಕೇಶಿನಗರದಲ್ಲಿ ರ್ಯಾಪಿಡೋ ಬೈಕ್ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ ಆರೋಪ.
- ಹೆಲ್ಮೆಟ್ ನೆಪದಲ್ಲಿ ಸ್ಪರ್ಶಿಸಿ, ಫೋನ್ ನಂಬರ್‌ಗಾಗಿ ನಾಟಕವಾಡಿದ ಚಾಲಕ.
- ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಪೋಸ್ಟ್ ವೈರಲ್, ಹೆಣ್ಣುಮಕ್ಕಳಿಗೆ ಜಾಗರೂಕರಾಗಿರಲು ಕರೆ.
ಬೆಂಗಳೂರು, ಅಕ್ಟೋಬರ್ 20: ನಗರದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳು ಎದ್ದಿವೆ. ಬೆಂಗಳೂರಿನ ಪುಲಕೇಶಿನಗರದಲ್ಲಿ ಮೂರು ದಿನಗಳ ಹಿಂದೆ ರ್ಯಾಪಿಡೋ ಬೈಕ್ ರೈಡ್ ವೇಳೆ ಚಾಲಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೈಯದ್ ಎಂಬ ರ್ಯಾಪಿಡೋ ಚಾಲಕನ ವಿರುದ್ಧ ಯುವತಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಇಂಚಿಂಚೂ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ ಹಾಗೂ ಹೆಣ್ಣುಮಕ್ಕಳು ಎಚ್ಚರದಿಂದಿರುವಂತೆ ಎಚ್ಚರಿಸಿದ್ದಾರೆ.
ಬೇಕಂತಲೇ ಮಾತನಾಡಿಸುತ್ತಿದ್ದ ಚಾಲಕ
ಘಟನೆಯ ವಿವರದಂತೆ, ಯುವತಿ ಮೂರು ದಿನಗಳ ಹಿಂದೆ ಪುಲಕೇಶಿನಗರದಲ್ಲಿರುವ ತಮ್ಮ ಮನೆಗೆ ರ್ಯಾಪಿಡೋ ಬೈಕ್ ಬುಕ್ ಮಾಡಿದ್ದರು. ಪ್ರಯಾಣದ ವೇಳೆ ಚಾಲಕ ಸೈಯದ್ ರೈನ್‌ಕೋಟ್ ಬೇಕಾ ಎಂದು ಪದೇಪದೆ ಕೇಳಿ ಬಣ್ಣದ ಮಾತುಗಳನ್ನಾಡಿದ್ದಾನೆ. ಯುವತಿ ಬೇಡ ಎಂದು ಸ್ಪಷ್ಟವಾಗಿ ನಿರಾಕರಿಸಿದರೂ, ಆತ ತನ್ನ ನಾಟಕ ಮುಂದುವರಿಸಿ ಅನಾವಶ್ಯಕವಾಗಿ ಮಾತನಾಡಿಸಿದ್ದಾನೆ.
ಯುವತಿಯ ಕೈ ಸವರಲು ಯತ್ನ
ಡ್ರಾಪ್ ಮಾಡಿದ ಬಳಿಕ ಹೆಲ್ಮೆಟ್ ಹಿಂದಿರುಗಿಸುವ ನೆಪದಲ್ಲಿ ಯುವತಿಯ ಕೈ ಸವರಲು ಚಾಲಕ ಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ, ಆನ್‌ಲೈನ್ ಪಾವತಿ ಮಾಡುವ ವೇಳೆ ಸ್ಕ್ಯಾನರ್ ವರ್ಕ್ ಆಗುತ್ತಿಲ್ಲ ಎಂದು ನಾಟಕವಾಡಿ ಯುವತಿಯ ಫೋನ್ ನಂಬರ್ ಪಡೆದುಕೊಳ್ಳಲು ಯತ್ನಿಸಿದ್ದಾನೆ. ನಂತರ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪೇ ಮಾಡಿದ ಮೇಲೂ ಅಲ್ಲಿಂದ ಹೋಗದೆ ಯುವತಿಯನ್ನು ಗುರಾಯಿಸಿ ನಿಂತುಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಸೆಕ್ಯೂರಿಟಿ ಗಾರ್ಡ್ ಹೋಗಲು ಹೇಳಿದರೂ ಅಲ್ಲಿಯೇ ನಿಂತು ಭಯ ಹುಟ್ಟಿಸುವಂತೆ ವರ್ತಿಸಿದ್ದಾನೆ.
ಇದನ್ನೂ ಓದಿ Viral: ವಿದೇಶಿ ಜೀವನಕ್ಕೆ ಗುಡ್ ಬೈ, ಮಗುವಿನ ಚಿಕಿತ್ಸೆಗಾಗಿ ರಾಪಿಡೋ ಚಾಲಕನಾದ ತಂದೆ
ಯುವತಿಯರಿಗೆ ಎಚ್ಚರಿಕೆ
ಈ ಕಹಿ ಅನುಭವದಿಂದ ಬೆಚ್ಚಿಬಿದ್ದ ಯುವತಿ, ಒಂಟಿಯಾಗಿ ಪ್ರಯಾಣಿಸುವ ಹೆಣ್ಣುಮಕ್ಕಳು ರ್ಯಾಪಿಡೋ ಬುಕ್ ಮಾಡುವ ಮುನ್ನ ಎಷ್ಟು ಎಚ್ಚರಿಕೆ ವಹಿಸಬೇಕು ಎಂಬುದನ್ನು ವಿವರಿಸಿ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ರಾಜಧಾನಿಯಲ್ಲಿ ರಾತ್ರಿ ಅಥವಾ ಒಂಟಿ ಓಡಾಟದ ವೇಳೆ ಮಹಿಳೆಯರ ಸುರಕ್ಷತೆಗೆ ಇರುವ ಸವಾಲುಗಳನ್ನು ಈ ಘಟನೆ ಮತ್ತೆ ಮುನ್ನೆಲೆಗೆ ತಂದಿದ್ದು, ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




