ಪಾರ್ಟನರ್ನಿಂದಲೇ ₹30 ಲಕ್ಷದ ಸುಪಾರಿ: ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಕೊಲೆ ರಹಸ್ಯ ಕೊನೆಗೂ ಬಯಲು, ಐವರ ಬಂಧನ
ಯಲಹಂಕ ನ್ಯೂ ಟೌನ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಚರಣ್ ಅವರೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಕಿರಣ್ ಎಂಬಾತನೇ ₹30 ಲಕ್ಷಕ್ಕೆ ಸುಪಾರಿ ನೀಡಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ಸಂಪೂರ್ಣ ಹಿನ್ನೆಲೆ ಇಲ್ಲಿದೆ.

ಬೆಂಗಳೂರು, ನವೆಂಬರ್ 16: ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ (35) ಅವರನ್ನು ಹಾಡಹಗಲೇ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಉದ್ಯಮಿ ಚರಣ್ ಹತ್ಯೆಗೆ ಬರೋಬ್ಬರಿ ₹30 ಲಕ್ಷಕ್ಕೆ ಸುಪಾರಿ ನೀಡಲಾಗಿತ್ತು ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮೃತ ಚರಣ್ ಅವರೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಕಿರಣ್ ಎಂಬಾತನೇ ಸುಪಾರಿ ನೀಡಿದ್ದ ಆರೋಪಿ ಎಂದು ತಿಳಿದುಬಂದಿದೆ.
ಕಿರಣ್, ಚರಣ್ ಹತ್ಯೆಗಾಗಿ ರುದ್ರೇಶ್ ಎಂಬಾತನಿಗೆ ₹30 ಲಕ್ಷದ ಸುಪಾರಿ ನೀಡಿದ್ದ. ಈ ಡೀಲ್ ಪಡೆದ ರುದ್ರೇಶ್, ಬಳಿಕ ಲೋಕೇಶ್ ಜೊತೆ ಮಾತುಕತೆ ನಡೆಸಿದ್ದ. ನಂತರ ಕಿರಣ್ ಮತ್ತು ಆಕಾಶ್ ಎಂಬುವವರ ಮೂಲಕ ಹತ್ಯೆ ಮಾಡಿಸಲು ಸಂಚು ರೂಪಿಸಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ. ಚರಣ್ ಚಲನವಲನಗಳನ್ನು ಗಮನಿಸಿದ್ದ ಆರೋಪಿಗಳು, ಅವರು ಕಚೇರಿಗೆ ಬರುವ ಸಮಯದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು. ಅದರಂತೆ ನವೆಂಬರ್ 13ರಂದು ಬೆಳಗ್ಗೆ ಚರಣ್ ಕಚೇರಿಗೆ ಬಂದಾಗ ಲಾಂಗ್ ಮತ್ತು ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದರು. ಪತ್ನಿಯ ಕಣ್ಣೆದುರೇ ಈ ಕೃತ್ಯ ನಡೆದಿತ್ತು.
ವ್ಯವಹಾರ ಭಿನ್ನಾಭಿಪ್ರಾಯದಿಂದ ಘೋರ ಕೃತ್ಯ
ಮೃತ ಚರಣ್ ಮತ್ತು ಸುಪಾರಿ ನೀಡಿದ್ದ ಆರೋಪಿ ಕಿರಣ್ ಇಬ್ಬರೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲುದಾರರಾಗಿದ್ದರು. ಇಬ್ಬರೂ ಒಟ್ಟಿಗೆ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು. ಆದರೆ, ಕೆಲವು ವ್ಯವಹಾರಗಳ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಚರಣ್ ತನಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದ ಕಿರಣ್, ಬಳಿಕ ಅವರೊಂದಿಗಿನ ವ್ಯವಹಾರದಿಂದ ಹೊರಬಂದಿದ್ದ. ಈ ಬೆಳವಣಿಗೆಯ ನಂತರ ಚರಣ್ ವಿರುದ್ಧ ಕಿರಣ್ ದ್ವೇಷ ಸಾಧಿಸುತ್ತಿದ್ದ.
ಚರಣ್ ಹತ್ಯೆಗೆ ನಡೆದಿತ್ತು ಡೀಲ್
ಇದೇ ಕಾರಣಕ್ಕೆ ಚರಣ್ ಅವರನ್ನು ಹತ್ಯೆ ಮಾಡಲು ನಿರ್ಧರಿಸಿದ್ದ ಕಿರಣ್, ರುದ್ರೇಶ್ ಜೊತೆ ಮಾತುಕತೆ ನಡೆಸಿ ₹30 ಲಕ್ಷಕ್ಕೆ ಸುಪಾರಿ ನೀಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ರುದ್ರೇಶ್ ಈ ಡೀಲ್ ಅನ್ನು ಲೋಕೇಶ್ ಜೊತೆ ಹಂಚಿಕೊಂಡಿದ್ದ. ಬಳಿಕ ಆಕಾಶ್ ಮತ್ತು ಕಿರಣ್ ಮೂಲಕ ಕೃತ್ಯ ಎಸಗಲು ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಚರಣ್ ಹತ್ಯೆ ಪ್ರಕರಣದ ಹಿನ್ನೆಲೆ
ನವೆಂಬರ್ 13ರಂದು ಬೆಳಗ್ಗೆ ಯಲಹಂಕ ನ್ಯೂ ಟೌನ್‌ನಲ್ಲಿರುವ ಕಚೇರಿಗೆ ಬರುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚರಣ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಚರಣ್ ಪತ್ನಿಯ ಕಣ್ಣೆದುರೇ ಈ ದಾಳಿ ನಡೆದಿತ್ತು. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚರಣ್ ನಂತರ ಮೃತಪಟ್ಟಿದ್ದರು. ಈ ಸಂಬಂಧ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಹಾಗೂ ವಿಚಾರಣೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:11 am, Mon, 16 November 26




