
ಬೆಂಗಳೂರು, ಅಕ್ಟೋಬರ್ 05: ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ಎಲ್ಲವೂ ಖುಲ್ಲಂ ಖುಲ್ಲ ಎನ್ನುವಂತಾಗಿದೆ. ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಇದ್ದ ವೇಳೆ ಸಿಕ್ಕ ರಾಜಾತಿಥ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕಟುವಾಗಿ ಟೀಕಿಸಿದ್ದ ಪ್ರಕರಣದ ಬೆನ್ನಲ್ಲೇ ಇದೀಗ ರೌಡಿಶೀಟರ್ (rowdy sheeter) ಹುಟ್ಟುಹಬ್ಬ ಆಚರಿಸಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ.
ದರ್ಶನ್ಗೆ ರಾಜಾತಿಥ್ಯ ಪ್ರಕರಣ ಬೆನ್ನಲ್ಲೇ ಸುಪ್ರೀಂಕೋರ್ಟ್ ಚಾಟಿ ಬೀಸಿದ ಬಳಿಕವೂ ಪರಪ್ಪನ ಅಗ್ರಹಾರ ಸಿಬ್ಬಂದಿ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಏಕೆಂದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆ ಮಾಡಿರುವುದು ಅಧಿಕಾರಿ, ಸಿಬ್ಬಂದಿಗಳಿಗೆ ಸಂಕಷ್ಟ ತಂದೊಡ್ಡಿದೆ.
ಇದನ್ನೂ ಓದಿ: ಜೈಲಿನಲ್ಲೇ ಹಫ್ತಾ ವಸೂಲಿ! ಸಹ ಕೈದಿಗೆ ಹಲ್ಲೆ: ನಾಲ್ವರು ಆರೋಪಿಗಳ ವಿರುದ್ದ ಕೋಕಾ ಕಾಯ್ದೆಯಡಿ ಎಫ್ಐಆರ್
ಘಟನೆ ಗಂಭೀರವಾಗಿ ಪರಿಗಣಿಸಿರುವ ಜೈಲಿನ ಡಿಜಿಪಿ ಬಿ.ದಯಾನಂದ, ವಿಡಿಯೋ ಹೊರಗಡೆ ಬಂದಿದ್ದೇ ತಡ ಜೈಲಾಧಿಕಾರಿ ಹಾಗೂ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಳೆದ ಒಂದು ವಾರದ ಹಿಂದೆಯೇ ಆಂತರಿಕ ತನಿಖೆಗೆ ಆದೇಶಿಸಿದ್ದಾರೆ. ತನಿಖೆ ನಡೆಸಿ ವರದಿಯನ್ನು ನೀಡುವಂತೆ ಜೈಲರ್ಗೆ ಸೂಚನೆ ನೀಡಿದ್ದಾರೆ.
ಯಾವೆಲ್ಲಾ ಮಾಹಿತಿಯನ್ನು ನೀಡಲು ದಯಾನಂದ ಹೇಳಿದ್ದಾರೆ ಎಂದು ನೋಡುವುದಾದರೆ, ಜೈಲಿನ ಒಳಗಡೆ ಅಷ್ಟು ದೊಡ್ಡ ಬರ್ತಡೇ ಕೇಕ್ ಹೇಗೆ ಬಂತು? ಜೈಲಿನ ಬೇಕರಿಯಲ್ಲೇ ಕೇಕ್ ತಯಾರು ಮಾಡಲಾಯ್ತಾ ಅಥವಾ ಹೊರಗಿನ ತರಿಸಲಾಗಿದೆಯಾ? ಒಂದು ವೇಳೆ ಜೈಲಿನ ಬೇಕರಿಯಲ್ಲೇ ತಯಾರು ಆಗಿದ್ರೆ ಮಾಡಿದವರು ಯಾರು? ಹೊರಗಡೆಯಿಂದ ಅಷ್ಟು ದೊಡ್ಡ ಕೇಕ್ ತಂದಿದರೆ ಒಳಗಡೆ ಬಿಟ್ಟವರು ಯಾರು? ಇನ್ನು ಬರ್ತಡೇ ವೇಳೆ ಸೆಲ್ನಲ್ಲಿ ನೆರೆದಿದ್ದ ಖೈದಿಗಳ ಮಾಹಿತಿ, ಬೇರೆ ಬ್ಯಾರಕ್ನಿಂದ ಹೇಗೆ ಖೈದಿಗಳು ಆ ಬ್ಯಾರಕ್ಗೆ ಬಂದ್ದರು? ಬರ್ತಡೇ ಆಚರಣೆ ದಿನ ಸಂಭ್ರಮಾಚಣೆ ಮಾಡಿದ ಬ್ಯಾರಕ್ ಬಳಿ ಭದ್ರತೆಗೆ ಇದ್ದ ಸಿಬ್ಬಂದಿ ಯಾರು? ಅಂದು ರೌಂಡ್ಸ್ನಲ್ಲಿ ಇದ್ದ ಅಧಿಕಾರಿಗಳು ಯಾರು? ಜೊತೆಗೆ ಜೈಲಿನ ಒಳಗಡೆಯಿಂದ ವಿಡಿಯೋ ಅಪ್ ಲೋಡ್ ಆಗಿದೆ. ಹಾಗಿದರೆ ಇಷ್ಟೆಲ್ಲಾ ಭದ್ರತೆ ಇದ್ದರೂ ಹೇಗೆ ಮೊಬೈಲ್ ಖೈದಿಗಳ ಕೈಗೆ ಸಿಕ್ತು? ಹೀಗೆ ಹಲವು ಪ್ರಶ್ನೆಗಳಿಗೆ ಕೂಡಲೇ ದಾಖಲೆ ಸಮೇತ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ.
ಈ ಕುರಿತಾಗಿ ಡಿಜಿಪಿ ಬಿ.ದಯಾನಂದ ಪ್ರತಿಕ್ರಿಯಿಸಿದ್ದು, ಪರಪ್ಪನ ಅಗ್ರಹಾರ ಜೈಲಿನ ಒಳಗೆ ಘಟನೆ ಬರ್ತ್ ಡೇ ಸೆಲೆಬ್ರೇಷನ್ ವಿಡಿಯೋ ಬಗ್ಗೆ ಮಾಹಿತಿ ಪಡೆಯಲಾಗಿದೆ. ಪ್ರಕರಣದ ಕುರಿತು ಆಂತರಿಕ ತನಿಖೆಗೆ ಆದೇಶಿಸಿದ್ದು, ವರದಿ ಬಳಿಕ ತಪ್ಪಿತಸ್ಥರ ವಿರುದ್ದ ಸೂಕ್ರ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.
ಆಂತರಿಕ ತನಿಖೆ ಬೆನ್ನಲ್ಲೇ ಸುಸ್ತಾದ ಅಧಿಕಾರಿ ಹಾಗೂ ಸಿಬ್ಬಂದಿ, ರೌಡಿಶೀಟರ್ ಬರ್ತ್ ಡೇ ಸೆಲೆಬ್ರೇಷನ್ ಕೇಸ್ ಯಾರಿಗೆಲ್ಲಾ ಸುತ್ತಿಕೊಳ್ಳುತ್ತೆ ಅನ್ನೋ ಆತಂಕ ಎದುರಾಗಿದೆ. ಜೈಲಿನ ಅಧಿಕಾರಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು, ತನಿಖಾ ವರದಿ ಬಳಿಕ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ಸಸ್ಪೆಂಡ್ ಆಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:45 pm, Sun, 5 October 25