ಜೈಲಿನಲ್ಲೇ ಹಫ್ತಾ ವಸೂಲಿ! ಸಹ ಕೈದಿಗೆ ಹಲ್ಲೆ: ನಾಲ್ವರು ಆರೋಪಿಗಳ ವಿರುದ್ದ ಕೋಕಾ ಕಾಯ್ದೆಯಡಿ ಎಫ್ಐಆರ್
ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಇಲ್ಲಿಗೆ ಖಡಕ್ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿದ ಬಳಿಕ ಕ್ರಿಮಿನಲ್ಗಳೆಲ್ಲಾ ಬಿಲ ಸೇರಿಕೊಂಡಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಪೊಲೀಸ್ ಇಲಾಖೆ, ಬಾಲ ಬಿಚ್ಚುವವರ ವಿರುದ್ಧ ಕೋಕಾ ಕಾಯ್ದೆಯ ಅಸ್ತ್ರ ಬಳಸುತ್ತಿದೆ. ಜೈಲಿನಲ್ಲೇ ಕೈದಿಗಳ ಮೇಲೆ ಹಲ್ಲೆ ನಡೆಸಿ ಹಫ್ತಾ ಮಾಡುತ್ತಿದ್ದವರ ಮೇಲೆ ಕೋಕಾ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.

ಮಂಗಳೂರು, ಜುಲೈ 25: ಮಂಗಳೂರಿನಲ್ಲಿ (Mangaluru) ಕಾನೂನು ಸುವ್ಯವಸ್ಥೆ ಪೊಲೀಸರ ನಿಯಂತ್ರಣಕ್ಕೆ ಬಂದಿದೆ. ನಗರ ಪೊಲೀಸ್ ಕಮಿಷನರ್ ಆಗಿ ಖಡಕ್ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅಧಿಕಾರ ಸ್ವೀಕರಿಸಿದ ಬಳಿಕ ಕ್ರಿಮಿನಲ್ಗಳನ್ನು ಹೆಡೆಮುರಿ ಕಟ್ಟಲಾಗುತ್ತಿದೆ. ಇದರ ಜೊತೆ ಕ್ರಿಮಿನಲ್ಗಳ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದು, ಇದೀಗ ಕೆ-ಕೋಕಾ ಕಾಯ್ದೆಯಡಿ (KOKA Act) ಪ್ರಕರಣ ದಾಖಲಿಸಲಾಗುತ್ತಿದೆ. ಇತ್ತಿಚೇಗೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಸಹ ಕೈದಿಗೆ ಹಲ್ಲೆ ನಡೆಸಿ ಹಣಕ್ಕಾಗಿ ಬೇಡಿಕೆಯಿಟ್ಟು ಇಪ್ಪತ್ತು ಸಾವಿರ ರೂಪಾಯಿ ಹಫ್ತಾ ವಸೂಲಿ ಮಾಡಿದ ನಾಲ್ವರು ಆರೋಪಿಗಳ ವಿರುದ್ದ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ (Karnataka Control of Organized Crimes Act) ಪ್ರಕರಣ ದಾಖಲಿಸಲಾಗಿದೆ.
ಜೈಲು ಒಳಗಡೆಯೆ ಹಫ್ತಾ ವಸೂಲಿ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿದ ಕಮಿಷನರ್ ಸುಧೀರ್ ಕುಮಾರ್, ಆರೋಪಿತ ನಾಲ್ವರು ಕೈದಿಗಳಾದ ಧನು ಯಾನೆ ಧನುಷ್ ಭಂಡಾರಿ, ಸಚಿನ್ ತಲಪಾಡಿ, ದಿಲೇಶ್ ಬಂಗೇರ ಯಾನೆ ದಿಲ್ಲು, ಲಾಯಿ ವೇಗಸ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಕೋಕಾ ಕಾಯ್ದೆ ಎಂದರೇನು?
ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಅಥವಾ ಕೆ-ಕೋಕಾ ಕಾಯ್ದೆ 2000ನೇ ಇಸವಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇದು ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದ ಕಾನೂನಾಗಿದೆ.
ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಇರುವ ಮಾನದಂಡವೇನು?
ಎರಡು ಪ್ರಕರಣಗಳಲ್ಲಿ ಶಾಮೀಲಾದ ಆರೋಪಿಗಳು ಮತ್ತೆ ಅಪರಾಧ ಕೃತ್ಯಗಳನ್ನು ಎಸಗಿದರೆ ಅವರ ವಿರುದ್ದ ಕೆ-ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡುವ ಅವಕಾಶ ಕಾನೂನಿನಲ್ಲಿದೆ.
ಕೋಕಾ ಕಾಯ್ದೆಯಡಿ ಪ್ರಕರಣ: ಆರೋಪ ಸಾಬೀತಾದರೆ ಶಿಕ್ಷೆ ಏನು?
ಕೆ-ಕೋಕಾ ಕಾಯ್ದೆಯಡಿ ಕನಿಷ್ಠ ಐದು ವರ್ಷ ಶಿಕ್ಷೆ ವಿಧಿಸಲು ಅವಕಾಶವಿದ್ದು, ಗರಿಷ್ಠ ಜೀವಾವಧಿ ಶಿಕ್ಷೆವರೆಗೂ ವಿಸ್ತರಿಸಬಹುದಾಗಿದೆ. ಈ ಕ್ರಿಮಿನಲ್ ಗ್ಯಾಂಗ್ ಸದಸ್ಯರಾಗಿದ್ದವರ ಮೇಲೂ ಕನಿಷ್ಠ ಐದು ವರ್ಷ ಶಿಕ್ಷೆ ವಿಧಿಸಬಹುದಾಗಿದೆ. ಹೀಗಾಗಿ ಯಾರು ಸಹ ಪ್ರಕರಣದಲ್ಲಿ ಶಾಮೀಲಾದವರ ಜೊತೆ ತಿರುಗಾಡಬೇಡಿ ಎಂದು ಪೊಲೀಸ್ ಕಮೀಷನರ್ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಅಂಥವರ ಜತೆ ಸೇರಿಕೊಂಡರೆ ಜೈಲಿಗೆ ಹೋಗಬೇಕಾಗಲಿದೆ. ಮಾತ್ರವಲ್ಲದೇ ಅಷ್ಟು ಸುಲಭವಾಗಿ ಜಾಮೀನು ಪಡೆದು ಹೊರಗೆ ಬರುವುದೂ ಸಾಧ್ಯವಿಲ್ಲ.
ಇದನ್ನೂ ಓದಿ: ಸ್ಮಾರ್ಟ್ ಸಿಟಿ ಮಂಗಳೂರಿನ ರಸ್ತೆಗಳಲ್ಲಿ ಗುಂಡಿಗಳದ್ದೇ ದರ್ಬಾರ್: ಪಾಲಿಕೆಯ ನಿರ್ಲಕ್ಷ್ಯಕ್ಕೆ ಹಿಡಿಶಾಪ
ಈ ಕಾಯ್ದೆಯಲ್ಲಿ ಕಡ್ಡಾಯವಾಗಿ ಡಿಎಸ್‌ಪಿ ಶ್ರೇಣಿಯ ಅಧಿಕಾರಿ ಪ್ರಕರಣದ ತನಿಖೆ ನಡೆಸಬೇಕು ಎಂಬ ನಿಯಮವಿದ್ದು, ಸದ್ಯ ಈ ನಾಲ್ವರು ಆರೋಪಿಗಳ ವಿರುದ್ದ ದಾಖಲಾಗಿರುವ ಪ್ರಕರಣಕ್ಕೆ ತನಿಖಾಧಿಕಾರಿಯಾಗಿ ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ರನ್ನು ನೇಮಿಸಲಾಗಿದೆ. ಒಟ್ಟಿನಲ್ಲಿ ಮಂಗಳೂರು ಪೊಲೀಸರು ಕೈಗೊಳ್ಳುತ್ತಿರುವ ಕಠಿಣ ಕ್ರಮಗಳಿಗೆ ಕ್ರಿಮಿನಲ್ಸ್ ಫುಲ್ ಥಂಡಾ ಹೊಡೆದಿರುವುದಂತೂ ಸುಳ್ಳಲ್ಲ.