ಅಡಿಕೆ ಹಾಳೆ ತಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ, ಆಮದು ನಿಷೇಧಿಸಿದ ಅಮೆರಿಕ: ಶಿವಮೊಗ್ಗದ ಸಾವಿರಾರು ಸಣ್ಣ ಉದ್ಯಮಿಗಳಿಗೆ ಸಂಕಷ್ಟ
ಅಡಿಕೆ ಎಂದರೆ ಅದು ಎಲ್ಲದಕ್ಕೂ ಬಳಕೆ ಆಗುವ ವಸ್ತು. ಪೂಜೆಯಿಂದ ಹಿಡಿದು ತಿನ್ನುವುದಕ್ಕೂ ಅಡಿಕೆ ಬಳಕೆ ಆಗುತ್ತದೆ. ಅಡಿಕೆ ಮರದ ಹಾಳೆಗಳಿಂದ ಅಡಿಕೆ ತಟ್ಟೆ ಸಿದ್ದಪಡಿಸಲಾಗುತ್ತದೆ. ಮಲೆನಾಡಿನಲ್ಲಿ ಅಡಿಕೆ ತಟ್ಟೆಯ ದೊಡ್ಡ ಉದ್ಯಮ ಬೆಳೆದು ನಿಂತಿದೆ. ಆದರೆ, ಅಡಿಕೆ ತಟ್ಟೆಗಳ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಎನ್ನುವ ಅಮೆರಿಕ ವರದಿಯು ಸಂಚಲನ ಮೂಡಿಸಿದ್ದು, ಅಡಿಕೆ ತಟ್ಟೆ ಉದ್ಯಮಗಳ ಮೇಲೆ ಕಾರ್ಮೋಡ ಆವರಿಸಿದೆ.

ಶಿವಮೊಗ್ಗ, ಜುಲೈ 25: ಕರ್ನಾಟಕ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಅಡಿಕೆ (Areca Nut) ಪ್ರಮುಖ ಬೆಳೆಯಾಗಿದೆ. ಅಡಿಕೆ ಉತ್ಪಾದನೆ ಮೇಲೆ ಬೆಳೆಗಾರರು ಅವಲಂಬಿತರಾಗಿದ್ದಾರೆ. ಅಡಿಕೆ ಹಾಳೆಯ ಮೂಲಕ ಅಡಿಕೆ ತಟ್ಟೆ ಉತ್ಪಾದನೆಗೆ (Areca Leaf Plates) ಎಲ್ಲಿಲ್ಲದ ಬೇಡಿಕೆಯೂ ಬಂದಿತ್ತು. ಶಿವಮೊಗ್ಗ ಜಿಲ್ಲೆಯಲ್ಲಂತೂ (Shivamogga) ಅಡಿಕೆ ಹಾಳೆಗಳನ್ನು ಮಾರಾಟ ಮಾಡಿ ಬೆಳೆಗಾರರು ಹೆಚ್ಚಿನ ಲಾಭವನ್ನೂ ಗಳಿಸುತ್ತಿದ್ದಾರೆ. ಹಾಳೆ ಖರೀದಿ, ಅದರಿಂದ ಅಡಿಕೆ ತಟ್ಟೆಗಳನ್ನು ಸಿದ್ಧಪಡಿಸುವ ಉದ್ಯಮಗಳೂ ಅನೇಕ ಇವೆ. ಅಡಿಕೆ ತಟ್ಟೆ ಮತ್ತು ಬಾಲ್ ಸಿದ್ಧಪಡಿಸುತ್ತಿರುವ ಉದ್ಯಮಕ್ಕೆ ಅದೊಂದು ವರದಿ ಈಗ ಆಘಾತಕಾರಿಯಾಗಿ ಪರಿಣಮಿಸಿದೆ. ಅಡಿಕೆ ಹಾಳೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ ಎಂಬ ವರದಿ ಈಗ ಬೆಳೆಗಾರರನ್ನು ಹಾಗೂ ಹಾಳೆ ತಟ್ಟೆ ಉದ್ಯಮವನ್ನೇ ನೆಚ್ಚಿಕೊಂಡಿದ್ದವರನ್ನು ಕಂಗಾಲಾಗಿಸಿದೆ.
ಶಿವಮೊಗ್ಗದಲ್ಲಿವೆ 3000ಕ್ಕೂ ಹೆಚ್ಚು ಹಾಳೆ ತಟ್ಟೆ ತಯಾರಿಕಾ ಘಟಕ
ಶಿವಮೊಗ್ಗ ಜಿಲ್ಲೆಯಲ್ಲಿ 3000 ಕ್ಕೂ ಅಧಿಕ ಅಡಿಕೆ ತಟ್ಟೆ ತಯಾರಿಕಾ ಘಟಕಗಳಿವೆ. ಸುಮಾರು 70 ಸಾವಿರಕ್ಕೂ ಅಧಿಕ ಮಹಿಳೆಯರು, ಯುವತಿಯರು ಈ ಉದ್ಯಮದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ತಟ್ಟೆಗಳನ್ನು ರಫ್ತು ಮಾಡುವ ಕಂಪನಿ, ಟ್ರಾನ್ಸ್ಪೋರ್ಟ್, ಪ್ಯಾಕಿಂಗ್ ಇತರೆ ಸೇರಿದಂತೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಎರಡು ಲಕ್ಷಕ್ಕೂ ಅಧಿಕ ಜನರು ಈ ಅಡಿಕೆ ತಟ್ಟೆ ಉದ್ಯಮ ಅವಲಂಭಿಸಿದ್ದಾರೆ. ಅಡಿಕೆ ಹಾಳೆಯ ತಟ್ಟೆಗಳಿಗೆ ದೇಶ ಮತ್ತು ವಿದೇಶದಲ್ಲಿ ಹೆಚ್ಚು ಬೇಡಿಕೆಯಿದೆ.
ತಿಂಗಳಿಗೆ 1.5 ಕೋಟಿ ರೂ. ವಹಿವಾಟು: ವಾರ್ಷಿಕ 3000 ಸಾವಿರ ಕೋಟಿ ರೂ. ವ್ಯವಹಾರ
ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆ ಅತೀ ಹೆಚ್ಚು ಬೆಳೆಯಲಾಗುತ್ತದೆ. ಹೀಗಾಗಿ ಅಡಿಕೆ ಹಾಳೆ ಸುಲಭವಾಗಿ ಸಿಗುತ್ತದೆ. ಅಡಿಕೆ ಬೆಳೆಗಾರರಿಂದ ಉತ್ತಮ ಗುಣಮಟ್ಟದ ಅಡಿಕೆ ಹಾಳೆಯನ್ನು ಮೊದಲು ಖರೀದಿಸಲಾಗುತ್ತದೆ. ಈ ಅಡಿಕೆ ಹಾಳೆಗಳು ಅಡಿಕೆ ತಟ್ಟೆ ಉತ್ಪಾದನಾ ಘಟಕ್ಕೆ ಪೂರೈಕೆ ಆಗುತ್ತದೆ. ಶಿವಮೊಗ್ಗದಲ್ಲಿ 3000 ಸಾವಿಕ್ಕೂ ಅಧಿಕ ಅಡಿಕೆ ತಟ್ಟೆಯ ಉತ್ಪಾದನಾ ಘಟಕಗಳಿದ್ದು, ಒಂದೊಂದು ಘಕಟವೂ ತಿಂಗಳಿಗೆ ಒಂದೂವರೆ ಕೋಟಿ ರೂ. ವ್ಯಾಪಾರ ವಹಿವಾಟು ಮಾಡುತ್ತಿವೆ. ಅಂದರೆ ಈ ಅಡಿಕೆ ತಟ್ಟೆ ಉದ್ಯಮಗಳ ವಾರ್ಪಿಕ ವಹಿವಾಟು 3000 ಸಾವಿರ ಕೋಟಿ ರೂಪಾಯಿಗೂ ಅಧಿವಾಗಿದೆ.
20ಕ್ಕೂ ಹೆಚ್ಚು ದೇಶಗಳಿಗೆ ರಫ್ತು: ಅಮೆರಿಕ, ಇಸ್ರೇಲ್ಗೇ ಅತಿ ಹೆಚ್ಚು
ದೇಶದ ವಿವಿಧ ರಾಜ್ಯಗಳಿಗೂ ಅಡಿಕೆ ಹಾಳೆಯ ತಟ್ಟೆ ಪೂರೈಕೆಯಾಗುತ್ತದೆ. ಇದರ ಜೊತೆಗೆ 20ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಅಡಿಕೆ ತಟ್ಟೆಗಳು ರಫ್ತಾಗುತ್ತವೆ. ಅದರಲ್ಲಿ ಪ್ರಮುಖವಾಗಿ ಅಮೇರಿಕ ಮತ್ತು ಇಸ್ರೇಲ್ ಈ ಎರಡು ದೇಶಗಳಿಗೆ ಅತೀ ಹೆಚ್ಚು ಅಡಿಕೆ ಹಾಳೆ ತಟ್ಟೆ ರಫ್ತಾಗುತ್ತದೆ.
ಎರಡು ತಿಂಗಳಿನಿಂದ ಅಡಿಕೆ ಹಾಳೆ ತಟ್ಟೆ ಉದ್ಯಮಕ್ಕೆ ಹೊಡೆತ
ಕಳೆದ ಎರಡು ತಿಂಗಳಿನಿಂದ ಅಡಕೆ ಹಾಳೆ ತಟ್ಟೆ ರಫ್ತಿಗೆ ದೊಡ್ಡ ಪೆಟ್ಟು ಬಿದ್ದಿದೆ. ಈಗಾಗಲೇ ಅಡಿಕೆಯು ಆರೋಗ್ಯಕ್ಕೆ ಹಾನಿಕಾರ, ಅಡಿಕೆಯಿಂದ ಕ್ಯಾನ್ಸರ್ ಬರುತ್ತದೆ ಎನ್ನುವ ವಿಚಾರಗಳು ಕಳೆದ 10 ವರ್ಷಗಳಿಂದ ಚರ್ಚೆಯಲ್ಲಿ. ಸಂಶೋಧನೆಗಳೂ ನಡೆಯುತ್ತಿವೆ. ಈಗಾಗಲೇ ಕೇಂದ್ರ ಸರಕಾರ ಅಡಿಕೆ ಆರೋಗ್ಯಕ್ಕೆ ಹಾನಿಕಾರ ಎಂದು ಸುಪ್ರೀಂಕೊರ್ಟ್ಗೆ ವರದಿ ನೀಡಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಈಗ ಅಡಿಕೆ ಹಾಳೆಯಿಂದ ಸಿದ್ಧಪಡಿಸುವ ತಟ್ಟೆಯಲ್ಲೂ ಆರೋಗ್ಯಕ್ಕೆ ಹಾನಿಕಾರವಾಗಿರುವ ಅಂಶ ಇದೆ ಎನ್ನುವ ಅಮೇರಿಕದ ಎಫ್ಡಿಎ ವರದಿ ಮತ್ತೆ ಮಲೆನಾಡಿಗರ ನಿದ್ದೆಗೆಡಿಸಿದೆ. ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಅಡಿಕೆ ತಟ್ಟೆ ಸಿದ್ದಪಡಿಸುತ್ತಿರುವ ಘಟಕಗಳಿಗೆ ಈಗ ಸಂಕಷ್ಟ ಎದುರಾಗಿದೆ.
ಅಡಿಕೆ ಹಾಳೆಯ ತಟ್ಟೆಗಳಲ್ಲಿ ಅಲ್ಕಲೈಡ್ ಅಂಶ
ಅಡಿಕೆ ಹಾಳೆಯ ತಟ್ಟೆಗಳಲ್ಲಿ ಅಲ್ಕಲೈಡ್ ಎಂಬ ಕ್ಯಾನ್ಸರ್‌ಗೆ ಕಾರಣವಾಗುವಂತಹ ಅಂಶ ಪತ್ತೆಯಾಗಿದೆ ಎಂದಿರುವ ಅಮೆರಿಕ, ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. ಇದು ಉದ್ಯಮಕ್ಕೆ ದೊಡ್ಡ ಹೊಡೆತ ಕೊಟ್ಟಿದೆ. ಅಮೆರಿಕ ಅಡಿಕೆ ಹಾಳೆ ತಟ್ಟೆ ಆಮದು ನಿಷೇಧ ಮಾಡಿರುವುದರಿಂದ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್ ರಾಜ್ಯಗಳಲ್ಲಿನ ಅಡಿಕೆ ಹಾಳೆ ತಯಾರಿಕಾ ಘಟಕಗಳಿಗೆ ಭಾರೀ ನಷ್ಟವುಂಟಾಗಲಿದೆ.

ಪೂರೈಕೆಗೆ ಸಿದ್ಧವಾಗುತ್ತಿರುವ ಅಡಿಕೆ ಹಾಳೆ ತಟ್ಟೆಗಳು
ಸದ್ಯದ ಬೆಳವಣಿಗೆಯಿಂದಾಗಿ ಅಡಿಕೆಹಾಳೆ ತಟ್ಟೆ ತಯಾರಕರು ನಿರ್ಗತಿಕರಾಗುವ ಆತಂಕ ಹೆಚ್ಚಾಗಿದೆ. ಅಲ್ಕಲೈಡ್ ಹಾನಿಕಾರಕ ಅಂಶ ಕ್ಯಾನ್ಸರ್‌ಗೆ ಕಾರಣವಷ್ಟು ಅಡಿಕೆ ಹಾಳೆ ತಟ್ಟೆಯಲ್ಲಿ ಇಲ್ಲ. ಇದನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಅಡಿಕೆ ಹಾಳೆ ತಟ್ಟೆ ಘಟಕದ ಉತ್ಪಾದನಾ ಘಟಕಗಳ ಮಾಲೀಕರು ಒತ್ತಾಯಿಸಿದ್ದಾರೆ.
ಅಡಿಕೆ ಹಾಳೆ ತಟ್ಟೆ ಉದ್ಯಮದಲ್ಲಿ ಶಿವಮೊಗ್ಗದ್ದೇ ಸಿಂಹಪಾಲು
ಅಮೇರಿಕಾದ ಎಫ್ಡಿಎ ಸಂಸ್ಥೆಯು ಈ ಹಿಂದೆ ಮಾವು, ಬೇವು, ಅರಿಷಿಣ, ಅಕ್ಕಿ ಹಾಗೂ ಶುಂಠಿಗೂ ಇಂತಹದ್ದೇ ಸಂಶೋಧನಾ ವರದಿಯನ್ನು ತೇಲಿ ಬಿಟ್ಟಿದ್ದವು. ಇದರಿಂದ ಭಾರತದ ರಫ್ತು ವಹಿವಾಟಿಗೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಿತ್ತು. ಈಗ ಮುಂದುವರೆದ ಭಾಗವಾಗಿ ಅಡಿಕೆ ಹಾಳೆಯ ಮೇಲೆ ಹೊಡೆತ ಕೊಟ್ಟಿದೆ. ಅಡಿಕೆ ಹಾಳೆಯಲ್ಲಿ ಕ್ಯಾನ್ಸರ್ ಕಾರಕ ಇದೆ ಎನ್ನುವ ವರಿದಯನ್ನು ಮಲೆನಾಡಿನ ಅಡಿಕೆ ಬೆಳೆಗಾರರು ಮತ್ತು ಅಡಿಕೆ ತಯಾರಿಕೆ ಘಟಕದವರು ಒಪ್ಪುತ್ತಿಲ್ಲ. ಅಡಿಕೆ ಹಾಳೆ ತಟ್ಟೆ ಪೂರ್ಣವಾಗಿ ನೈಸರ್ಗಿಕವಾಗಿದೆ. ಸದ್ಯ ಇದರ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎನ್ನುವುದು ಅಡಿಕೆ ಬೆಳೆಗಾರರು ಮತ್ತು ಅಡಕೆ ತಟ್ಟೆ ತಯಾರಿಕೆ ಘಟಕದ ಮಾಲೀಕರ ಮತ್ತು ಉದ್ಯೋಗಸ್ಥರ ವಾದವಾಗಿದೆ.
ಇದನ್ನೂ ಓದಿ: Banashankari Temple: ಬನಶಂಕರಿ ದೇವಸ್ಥಾನದಲ್ಲಿ ಇನ್ಮುಂದೆ ಅಡಿಕೆ ತಟ್ಟೆಗಳು ಬ್ಯಾನ್
ಅಮೇರಿಕದ ಎಫ್ಡಿಎ ಕೊಟ್ಟ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದರ ಬಗ್ಗೆ ಮತ್ತಷ್ಟು ಸಂಶೋಧನೆ ಮತ್ತು ಪರೀಕ್ಷೆಗಳು ಆಗಬೇಕಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರ ಸಂಸ್ಥೆ ಮತ್ತು ಸರಕಾರಗಳು ಒಟ್ಟಾಗಿ ಗಮನ ಹರಿಸಬೇಕಿದೆ ಎಂದು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ ಆಗ್ರಹಿಸಿದ್ದಾರೆ.



