AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್‌ಟಿಒ ಸಾರಿಗೆ ಇಲಾಖೆಯಲ್ಲಿ ಬಡ್ತಿ ಅಕ್ರಮ: ನಕಲಿ ದಾಖಲೆ ನೀಡಿ ಐಎಂವಿ ಪೋಸ್ಟ್ ಗಿಟ್ಟಿಸಿಕೊಳ್ಳಲು ಸಂಚು, ಕೋಟಿ ಕೋಟಿ ಡೀಲ್ ಆರೋಪ!

ರಾಜ್ಯ ಸಾರಿಗೆ ಇಲಾಖೆಯ ಮೋಟಾರು ವಾಹನ ತನಿಖಾಧಿಕಾರಿ (IMV) ಹುದ್ದೆಗಳ ಬಡ್ತಿಯಲ್ಲಿ ಭಾರೀ ಅಕ್ರಮ ನಡೆದಿದೆ. ಸಿ ಮತ್ತು ಡಿ ಗ್ರೂಪ್‌ನ 46 ನೌಕರರು ಸಂಜೆ ಕಾಲೇಜಿನ ನಕಲಿ ದಾಖಲೆ ನೀಡಿ ಪ್ರಮೋಷನ್ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಪರಶುರಾಮ ನೀಲ್ ನಾಯಕ್ ರಾಜ್ಯಪಾಲರು ಹಾಗೂ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಆರ್‌ಟಿಒ ಸಾರಿಗೆ ಇಲಾಖೆಯಲ್ಲಿ ಬಡ್ತಿ ಅಕ್ರಮ: ನಕಲಿ ದಾಖಲೆ ನೀಡಿ ಐಎಂವಿ ಪೋಸ್ಟ್ ಗಿಟ್ಟಿಸಿಕೊಳ್ಳಲು ಸಂಚು, ಕೋಟಿ ಕೋಟಿ ಡೀಲ್ ಆರೋಪ!
ಸಾಂದರ್ಭಿಕ ಚಿತ್ರImage Credit source: gettyimages.com
ಕಿರಣ್​ ಸೂರ್ಯ
| Edited By: |

Updated on: Oct 24, 2026 | 2:28 PM

Share

ಮುಖ್ಯಾಂಶಗಳು

  • ಸಾರಿಗೆ ಇಲಾಖೆಯ ಐಎಂವಿ ಪ್ರಮೋಷನ್‌ನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭಾರೀ ಅಕ್ರಮ.
  • 12 ಹುದ್ದೆಗಳ ಬಡ್ತಿಗೆ 46 ನೌಕರರಿಂದ ಸಂಜೆ ಕಾಲೇಜಿನ ನಕಲಿ ಸರ್ಟಿಫಿಕೇಟ್.
  • ಅಕ್ರಮ ಬಯಲಿಗೆಳೆದ ಸಾಮಾಜಿಕ ಹೋರಾಟಗಾರ; ರಾಜ್ಯಪಾಲರು ಹಾಗೂ ಸಿಎಸ್‌ಗೆ ದೂರು.

ಬೆಂಗಳೂರು, ಅಕ್ಟೋಬರ್ 24: ರಾಜ್ಯ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ‘ಮೋಟಾರು ವಾಹನ ತನಿಖಾಧಿಕಾರಿ’ ಹುದ್ದೆಗಳ ಬಡ್ತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದ್ದು, ನಿಯಮಗಳನ್ನು ಗಾಳಿಗೆ ತೂರಿ ನಕಲಿ ದಾಖಲೆಗಳ ಮೂಲಕ ಕೆಲಸ ಗಿಟ್ಟಿಸಿಕೊಳ್ಳಲು ನೌಕರರು ಮುಂದಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಸಾಮಾಜಿಕ ಹೋರಾಟಗಾರ ಪರಶುರಾಮ ನೀಲ್ ನಾಯಕ್ ಅವರು ರಾಜ್ಯಪಾಲರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಸಾರಿಗೆ ಇಲಾಖೆಯ ಆಯುಕ್ತರಿಗೆ ಸಂಪೂರ್ಣ ದಾಖಲೆಗಳ ಸಮೇತ ದೂರು ನೀಡಿದ್ದಾರೆ.

ನಕಲಿ ಸರ್ಟಿಫಿಕೇಟ್ ನೀಡಿ ಬಡ್ತಿ ಪಡೆಯಲು ಯತ್ನ

ಸಾರಿಗೆ ಇಲಾಖೆಯಲ್ಲಿ ಇನ್-ಸರ್ವಿಸ್ ಕೋಟಾದಡಿ 12 ಐಎಂವಿ ಹುದ್ದೆಗಳು ಖಾಲಿಯಿದ್ದು, ಇವುಗಳನ್ನು ಪಡೆಯಲು 46 ಹಾಲಿ ನೌಕರರು ಅರ್ಜಿ ಸಲ್ಲಿಸಿದ್ದಾರೆ. ನಿಯಮಾವಳಿಗಳ ಪ್ರಕಾರ, ಪ್ರಮೋಷನ್ ಪಡೆಯಲು ಅಭ್ಯರ್ಥಿಗಳು ಕೆಲಸಕ್ಕೆ ಸೇರುವ ಮುನ್ನವೇ ಮೆಕಾನಿಕಲ್ ಅಥವಾ ಆಟೋಮೊಬೈಲ್ ವಿಭಾಗದಲ್ಲಿ ರೆಗ್ಯುಲರ್ ಡಿಪ್ಲೊಮಾ/ಬಿ.ಇ ಮಾಡಿರಬೇಕು. ಇಲ್ಲವೇ ಉದ್ಯೋಗದಲ್ಲಿದ್ದಾಗ ಮೂರು ವರ್ಷ ರಜೆ ಪಡೆದು ವಿದ್ಯಾಭ್ಯಾಸ ಮುಗಿಸಿರಬೇಕು. ಆದರೆ, ಈ 46 ಸಿ ಗ್ರೂಪ್ ಮತ್ತು ಡಿ ಗ್ರೂಪ್ ಸಿಬ್ಬಂದಿಗಳು ಸಂಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದೇವೆ ಎಂದು ನಕಲಿ ಸರ್ಟಿಫಿಕೇಟ್ ನೀಡಿ ಬಡ್ತಿ ಪಡೆಯಲು ಯತ್ನಿಸುತ್ತಿದ್ದಾರೆ.

ಅನುಭವ ಪ್ರಮಾಣಪತ್ರವೂ ಫೇಕ್

ಇನ್ನು ಸಂಜೆ ಕಾಲೇಜಿನಲ್ಲಿ ಶಿಕ್ಷಣ ಪಡೆಯಬೇಕಾದರೆ ಯಾವುದೇ ಖಾಸಗಿ ಇಂಡಸ್ಟ್ರಿ ಅಥವಾ ಫ್ಯಾಕ್ಟರಿಯಲ್ಲಿ ಖಾಯಂ ಉದ್ಯೋಗಿಯಾಗಿರಬೇಕು ಎಂಬ ನಿಯಮವಿದೆ. ಇದಕ್ಕಾಗಿ ಆರ್‍ಟಿಒ ಸಿಬ್ಬಂದಿಗಳು ತಾವು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ನಕಲಿ ಅನುಭವ ಪ್ರಮಾಣಪತ್ರ ಸೃಷ್ಟಿಸಿದ್ದಾರೆ. ಅಲ್ಲದೆ, ಇಲಾಖೆಯಿಂದ ಪಡೆದ NOC (ನಿರಾಕ್ಷೇಪಣಾ ಪತ್ರ) ಯನ್ನು ಕಾಲೇಜುಗಳಿಗೆ ನೀಡದೆ ಮುಚ್ಚಿಟ್ಟಿದ್ದಾರೆ.

ಕಿಲಾಡಿ ನೌಕರರಿಗೆ ಹಿರಿಯ ಅಧಿಕಾರಿಗಳು ಸಾಥ್

ಈ ಕಿಲಾಡಿ ನೌಕರರಿಗೆ ಸಾಥ್ ನೀಡಿರುವ ಹಿರಿಯ ಅಧಿಕಾರಿಗಳು, ಇವರಿಗೆ ಅನುಕೂಲವಾಗುವಂತೆ ಅರ್ಹತಾ ವಯೋಮಿತಿಯನ್ನು 50ರಿಂದ 55 ವರ್ಷಕ್ಕೆ ಏರಿಕೆ ಮಾಡಿದ್ದಾರೆ. ಜೊತೆಗೆ ಡಿಪ್ಲೊಮಾ ನಂತರ ಇರಬೇಕಿದ್ದ 3 ವರ್ಷಗಳ ಕಡ್ಡಾಯ ಸೇವಾವಧಿಯ ನಿಯಮವನ್ನು ತಿದ್ದುಪಡಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಒಂದೊಂದು ಪೋಸ್ಟ್‌ಗೂ ಕೋಟಿ ಕೋಟಿ ಡೀಲ್ ನಡೆದಿದೆ ಎನ್ನಲಾಗುತ್ತಿದ್ದು, ಸಾರಿಗೆ ಸಚಿವರು ಹಾಗೂ ಸರ್ಕಾರ ಈ ಅಕ್ರಮದ ವಿರುದ್ಧ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More