ಬೆಂಗಳೂರಿನಲ್ಲಿ ಸರಣಿ ಹತ್ಯೆ ಪ್ರಕರಣ: 3 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಾಗಿ ನಡೀತಾ 7 ಮಂದಿಯ ಹತ್ಯೆ?
ಬೆಂಗಳೂರಿನಲ್ಲಿ ಪತ್ನಿ ಸೇರಿ ಕುಟುಂಬದ 7 ಜನರನ್ನು ಹತ್ಯೆಗೈದ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಶ್ರೀರಾಮಪುರದ 3 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಾಗಿ ಆರೋಪಿ ಇಂದುಶೇಖರ್ ಈ ಸರಣಿ ಹತ್ಯೆ ನಡೆಸಿದ್ನಾ ಎಂಬ ಪ್ರಶ್ನೆ ತನಿಖೆ ವೇಳೆ ಉದ್ಭವಿಸಿದೆ. ಕೊಲೆ ಬಳಿಕ ಮೃತರ ಬೆರಳಚ್ಚುಗಳನ್ನು ಸಂಗ್ರಹಿಸಲು ಆರೋಪಿ ಯತ್ನಿಸಿದ್ದ ಎಂಬ ವಿಚಾರವೂ ಬಯಲಾಗಿರುವುದು, ಅನುಮಾನಕ್ಕೆ ಮತ್ತಷ್ಟು ಇಂಬು ನೀಡಿದೆ.

ಬೆಂಗಳೂರು, ನವೆಂಬರ್ 19: ಪತ್ನಿ ಸೇರಿದಂತೆ ಆಕೆ ಕುಟುಂಬದ ಒಟ್ಟು 7 ಜನರ ಹತ್ಯೆ ಪ್ರಕರಣ ಸಂಬಂಧ ತನಿಖೆ ವೇಳೆ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗಿವೆ. ಕೊಲೆ ಬಳಿಕ ಮೃತರ ಬೆರಳಚ್ಚುಗಳನ್ನು ಸಂಗ್ರಹಿಸಲು ಆರೋಪಿ ಇಂದುಶೇಖರ್ ಯತ್ನಿಸಿದ್ದ. ಪತ್ನಿಯ ಕುಟುಂಬಕ್ಕೆ ಸೇರಿದ ಶ್ರೀರಾಮಪುರದಲ್ಲಿರುವ 1,200 ಚದರ ಅಡಿ ಆಸ್ತಿಯ ಮೇಲೆ ಈತನ ಕಣ್ಣಿತ್ತು. ಆದರೆ ಈ ಆಸ್ತಿಯನ್ನು ಆತನ ಹೆಸರಿಗೆ ವರ್ಗಾಯಿಸಲು ಪತ್ನಿಯ ಕುಟುಂಬದವರು ಒಪ್ಪಿರಲಿಲ್ಲ ಎನ್ನಲಾಗಿದೆ. ಪತ್ನಿಯೊಂದಿಗೆ ಆಗಾಗ ಜಗಳವಾಗುತ್ತಿತ್ತು. ಆಕೆಯ ಕುಟುಂಬದವರು ತಮ್ಮ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದುದರಿಂದ ಅವರ ಮೇಲೂ ದ್ವೇಷವಿತ್ತು ಎಂದು ವಿಚಾರಣೆ ವೇಳೆ ಆರೋಪಿ ಹೇಳಿದ್ದಾನೆ. ಪತ್ನಿಯ ಕುಟುಂಬದ ಹೆಸರಿನಲ್ಲಿದ್ದ ಶ್ರೀರಾಮಪುರದ ಆಸ್ತಿಯ ಹಕ್ಕು ಪಡೆಯುವ ಉದ್ದೇಶವೂ ಹತ್ಯೆಗಳ ಹಿಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹತ್ಯೆ ಪ್ರಕರಣದಲ್ಲಿ ಮಗಳ ಪಾತ್ರವೇನು?
ಆರೋಪಿಯ ಪತ್ನಿ ಸುನೀತಾ ಎಂ.ಜೆ. (40) ಅವರ ಕುಟುಂಬದವರು ಆಸ್ತಿಯನ್ನು ಇಂದುಶೇಖರ್ ಹೆಸರಿಗೆ ವರ್ಗಾಯಿಸಲು ಸಿದ್ಧರಿರಲಿಲ್ಲ. ಅತ್ತೆ ರೂಪಾವತಿ (65) ಅವರಿಗೆ ಸೇರಿದ ಆಸ್ತಿಯನ್ನು ಅವರ ಪುತ್ರರಿಗೆ ವರ್ಗಾಯಿಸುವ ಉದ್ದೇಶವಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಆಸ್ತಿ ಆಮಿಷವೊಡ್ಡಿ ತನ್ನ ಅಪ್ರಾಪ್ತ ಮಗಳನ್ನು ಹತ್ಯೆ ಸಂಚಿನಲ್ಲಿ ಭಾಗಿಯಾಗುವಂತೆ ಇಂದುಶೇಖರ್ ಬಹಳ ಹಿಂದೆಯೇ ಮನವೊಲಿಸಿದ್ದ ಎಂಬ ಶಂಕೆಯೂ ಪೊಲೀಸರಿಂದ ವ್ಯಕ್ತವಾಗಿದೆ. ಹತ್ಯೆ ನಡೆದ ಮನೆಯ ಜಾಗವನ್ನು ಸ್ವಚ್ಛಗೊಳಿಸುವುದು ಹಾಗೂ ಸಾಕ್ಷ್ಯಗಳನ್ನು ನಾಶಪಡಿಸುವಲ್ಲಿ 17 ವರ್ಷದ ಮಗಳು ತಂದೆಗೆ ನೆರವಾಗಿದ್ದಾಳೆ.
ಇದನ್ನೂ ಓದಿ: 7 ಜನರ ಹತ್ಯೆ ಕೇಸ್: ತಂದೆ-ಮಗಳಿಗೆ ಖಾಕಿ ಗ್ರಿಲ್; ಕೃತ್ಯದ ಪ್ರತಿಯೊಂದು ದೃಶ್ಯವೂ ರಿಕ್ರಿಯೇಟ್
ಅಕ್ಟೋಬರ್ 16ರ ಸುಮಾರಿಗೆ ಪತ್ನಿ ಮತ್ತು ಅತ್ತೆಯನ್ನು ಹತ್ಯೆ ಮಾಡಿದ ಬಳಿಕ, ಅಕ್ಟೋಬರ್ ತಿಂಗಳ ಕೊನೆಯ ಎರಡು ವಾರಗಳಲ್ಲಿ ಪತ್ನಿಯ ಕುಟುಂಬದ ಇತರ ಸದಸ್ಯರನ್ನು ಹಂತ ಹಂತವಾಗಿ ಮನೆಗೆ ಆಹ್ವಾನಿಸಿದ್ದ ಎನ್ನಲಾಗಿದೆ. ವಿಶೇಷ ಮಾಂಸಾಹಾರಿ ಊಟದ ನೆಪದಲ್ಲಿ ಅವರನ್ನು ಮನೆಗೆ ಕರೆಸಿಕೊಂಡಿದ್ದ ಆರೋಪಿ, ಪಾನೀಯಗಳಲ್ಲಿ ಮಾತ್ರೆಗಳನ್ನು ಬೆರೆಸಿ ನೀಡುತ್ತಿದ್ದ. ಇದರಿಂದ ಅವರು ಪ್ರಜ್ಞೆ ಕಳೆದುಕೊಂಡ ಬಳಿಕ ಹತ್ಯೆ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಕ್ಟೋಬರ್ 16ರಿಂದಲೇ ಆರಂಭವಾಗಿತ್ತು ಹತ್ಯಾಕಾಂಡ
ಪೊಲೀಸರ ಪ್ರಕಾರ, ಅಕ್ಟೋಬರ್ 16ರಂದು ಪತ್ನಿ ಮತ್ತು ಅತ್ತೆಯನ್ನು ಹತ್ಯೆ ಮಾಡುವ ಮೂಲಕ ಇಂದುಶೇಖರ್ ತನ್ನ ಸರಣಿ ಹತ್ಯೆಗಳನ್ನು ಆರಂಭಿಸಿದ್ದ. ನಂತರ ಪತ್ನಿಯ ಹಿರಿಯ ಸಹೋದರ ಶಿವಕುಮಾರ್ (46), ಅವರ ಪತ್ನಿ ದಿವ್ಯಾ (30) ಮತ್ತು ಏಳು ವರ್ಷದ ಪುತ್ರ ಪುನೀತ್‌ನನ್ನು ಹತ್ಯೆ ಮಾಡಿದ್ದಾನೆ. ಅಕ್ಟೋಬರ್ 31ರಂದು ಮತ್ತೊಬ್ಬ ಬಾವ ಶಂಕರ್ (44) ಮತ್ತು ಅವರ ಪತ್ನಿ ನಳಿನಿ (29) ಅವರನ್ನು ಹತ್ಯೆ ಮಾಡಿದ್ದ ಎಂದು ತಿಳಿದುಬಂದಿರೋದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




