
ಬೆಂಗಳೂರು, ಜೂನ್ 09: ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ (Chinnaswamy stadium Stampede) ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಅನ್ನು ರದ್ದುಪಡಿಸುವಂತೆ ಆರ್‌ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ನ ನ್ಯಾಯಮೂರ್ತಿ ಎಸ್ ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ ವಾದ-ಪ್ರತಿವಾದವನ್ನು ಆಲಿಸಿ, ವಿಚಾರಣೆಯನ್ನು ಮಂಗಳವಾರಕ್ಕೆ (ಜೂ. 10) ಮುಂದೂಡಿದೆ. ನಿಖಿಲ್ ಸೋಸಲೆ ಅವರ ಪರ ಹಿರಿಯ ವಕೀಲ ಸಂದೇಶ್ ಚೌಟ ಅವರು ವಾದ ಮಂಡಿಸಿದರು.
ವಕೀಲ ಸಂದೇಶ್ ಚೌಟ: ಸಿಸಿಬಿ ಮೂಲಕ ನಿಖಿಲ್ ಸೋಸಲೆಯನ್ನು ಬಂಧಿಸಲಾಗಿದೆ. ಸಿಐಡಿಗೆ ತನಿಖೆ ಹಸ್ತಾಂತರವಾದಾಗ ಸಿಸಿಬಿಗೆ ಬಂಧಿಸುವ ಅಧಿಕಾರವಿರಲಿಲ್ಲ. ಕಾರಣಗಳನ್ನು ತಿಳಿಸದೆ ಕಾನೂನುಬಾಹಿರವಾಗಿ ಬಂಧಿಸಲಾಗಿದೆ. ಮಧ್ಯಾಹ್ನ 2.20ಕ್ಕೆ ಬಂಧನದ ಕಾರಣ ತಲುಪಿಸಲಾಗಿದೆ. ಕಬ್ಬನ್ಪಾರ್ಕ್ ಪೊಲೀಸರು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ: ಬೆಂಗಳೂರು ತೊರೆಯುವಾಗ ಬಂಧಿಸಲಾಗಿದೆ. 11 ಅಮಾಯಕರ ಸಾವಿನ ಬಗ್ಗೆ ಅವರು ವಾದಿಸುತ್ತಿಲ್ಲ ಎಂದು ವಾದ ಮಂಡಿಸಿದರು.
ವಕೀಲ ಸಂದೇಶ್ ಚೌಟ: ಸಿಸಿಬಿ ಪೊಲೀಸರು ಅಕ್ರಮವಾಗಿ ಬಂಧಿಸಿದರು. ನಂತರ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ: ಈ ಎಲ್ಲ ಆರೋಪಗಳು ಅರ್ಜಿಯಲ್ಲಿ ಉಲ್ಲೇಖಿಸಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದರು.
ವಕೀಲ ಸಂದೇಶ್ ಚೌಟ: ಆರೋಪಿಗಳನ್ನು ಬಂಧಿಸುವಂತೆ ಸಿಎಂ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ತನಿಖಾಧಿಕಾರಿಗೆ ಸಿಎಂ ಬಂಧನದ ನಿರ್ದೇಶನ ನೀಡುವಂತಿಲ್ಲ.
ಪೀಠ: ಮುಖ್ಯಮಂತ್ರಿಗೆ ಹೀಗೆ ಹೇಳುವ ಅಧಿಕಾರವಿಲ್ಲವೇ ಎಂದು ಪ್ರಶ್ನಿಸಿತು.
ವಕೀಲ ಸಂದೇಶ್ ಚೌಟ: ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದೆ. ಸಿಎಂಗೆ ಈ ರೀತಿ ಬಂಧಿಸಲು ಸೂಚಿಸುವ ಅಧಿಕಾರವಿಲ್ಲ.
ವಕೀಲ ಸಂದೇಶ್ ಚೌಟ: ಆಂಧ್ರಪ್ರದೇಶದಲ್ಲಿ ದೇವಸ್ಥಾನದ ಗೋಡೆ ಕುಸಿದು ಕಾಲ್ತುಳಿತವಾಗಿತ್ತು. ನ್ಯಾಯಾಂಗ ತನಿಖೆ ನಡೆಸಿ ಕಾರಣ ತಿಳಿಯಲಾಗಿತ್ತು. ನಂತರ ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಈ ಕೇಸ್ ನಲ್ಲಿ ಘಟನೆಯ ಮರುದಿನ ಪಿಐಎಲ್ ದಾಖಲಾಯಿತು. ಪಿಐಎಲ್ ದಾಖಲಿಸಿಕೊಂಡ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿದರು.
ವಕೀಲ ಸಂದೇಶ್ ಚೌಟ: ಪ್ರಕರಣದ ತನಿಖೆಯ ನಂತರ ಸಾವಿಗೆ ಕಾರಣ ತಿಳಿಯಲಿದೆ. ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಯಿತು. ಸಿಎಂ ಕಾರ್ಯದರ್ಶಿಯನ್ನು ಹುದ್ದೆಯಿಂದ ಕೈಬಿಡಲಾಯಿತು. ಆದರೆ ಅವರನ್ನು ಯಾರೂ ಬಂಧಿಸಿಲ್ಲ.
ಪೀಠ: ಸಿಎಂ ಬಂಧನದ ಸೂಚನೆ ನೀಡಿದ್ದರೇ? ಇವರನ್ನು ಬಂಧಿಸಲು ಸಿಸಿಬಿಗೆ ಅಧಿಕಾರವಿತ್ತೆ?
ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ: ದೇಶ ತೊರೆಯುತ್ತಿರುವಾಗ ಬಂಧಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆದು ಲಿಖಿತ ಉತ್ತರ ನೀಡುತ್ತೇನೆ. ಹೀಗಾಗಿ ಮಧ್ಯಂತರ ಜಾಮೀನು ನೀಡದಂತೆ ಮನವಿ ಮಾಡಿದರು.
ಇದನ್ನೂ ಓದಿ: ರಾಜ್ಯ ಸರ್ಕಾರದ ಅಮಾನತು ಪ್ರಶ್ನಿಸಿ ಸಿಎಟಿಗೆ ಐಪಿಎಸ್ ಅಧಿಕಾರಿ ಅರ್ಜಿ
ಆರ್‌ಸಿಬಿ ಪರ ಹಿರಿಯ ವಕೀಲ ಸಿ.ವಿ.ನಾಗೇಶ್: ಸಿಎಂ, ಡಿಸಿಎಂ ಕೂಡಾ ಆರ್‌ಸಿಬಿ ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ. ಗಾಯಗೊಳಿಸುವುದು, ಕೊಲೆಯ ಉದ್ದೇಶವಿಲ್ಲದೇ ವ್ಯಕ್ತಿಯ ಸಾವಿಗೆ ಕಾರಣನಾಗುವುದು ಈ ಯಾವುದೇ ಸೆಕ್ಷನ್ಗಳು ಅನ್ವಯವಾಗುವುದಿಲ್ಲವೆಂದು ವಾದ ಮಂಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Mon, 9 June 25