ಬೆಂಗಳೂರು: ತನಗಾದ ಅನ್ಯಾಯ ಸಮಾಜಕ್ಕೆ ಗೊತ್ತಾಗಬೇಕು ಅಂತ ಆತ್ಮಹತ್ಯೆಗೂ ಮುನ್ನ ಪ್ರದೀಪ್ ಒಂದಲ್ಲ ಮೂರು ಡೆತ್ನೋಟ್ಗಳನ್ನು ಬರೆದಿಟ್ಟು ನಂತರ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Pradeep Suicide Case) ಮಾಡಿಕೊಂಡಿರುವುದು ತಿಳಿದುಬಂದಿದೆ. ರೆಸಾರ್ಟ್ನಲ್ಲಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಭಾಗಿಯಾದ ನಂತರ ಮೂರು ಡೆತ್ ನೋಟ್ ಬರೆದಿದ್ದ ಪ್ರದೀಪ್, ಒಂದನ್ನು ಪತ್ನಿ ನಮಿತಾ ವಾರ್ಡ್ ರೋಮ್ನಲ್ಲಿಟ್ಟಿದ್ದಾರೆ. ಬಳಿಕ ರೆಸಾರ್ಟ್ಗೆ ತೆರಳಿ ಸಂಬಂಧಿಕರ ಕಾರಿನ ವೈಪರ್ ಬಳಿ ಒಂದನ್ನ ಇಟ್ಟಿದ್ದರು. ಮೂರನೇ ಡೆತ್ನೋಟ್ ಅನ್ನು ತನ್ನ ಕಾರಿನಲ್ಲಿ ಇಟ್ಟುಕೊಂಡಿದ್ದರು. ಡೆತ್ ನೋಟ್ ಜೊತೆಗೆ ಬ್ಯಾಂಕ್ ದಾಖಲೆಗಳನ್ನ ಕೂಡ ಇಟ್ಟಿದ್ದರು. ಆತ್ಮಹತ್ಯೆಗೂ ಮುನ್ನವೇ ಈ ಡೆತ್ನೋಟ್ ಪ್ರದೀಪ್ ಕುಟುಂಬಸ್ಥರ ಕಣ್ಣಿಗೆ ಬಿದ್ದಿದೆ.
ಡೆತ್ನೋಟ್ ಗಮನಿಸದ ಸಂಬಂಧಿಕರು ಜನವರಿ 1ರ ಸಂಜೆ ಸುಮಾರು 4 ಗಂಟೆಗೆ ರೆಸಾರ್ಟ್ನಿಂದ ಹೊರಟಿದ್ದಾರೆ. ಅದನ್ನ ಕಂಡ ಪ್ರದೀಪ್, ಸಂಬಂಧಿಕರು ಹೋಗುತ್ತಿದ್ದ ಕಾರನ್ನ ಓವರ್ ಟೇಕ್ ಮಾಡಿ ಮುನ್ನುಗ್ಗಿದ್ದಾರೆ. ಬಳಿಕ ಒಂದು ಕಿ.ಮೀ ದೂರದಲ್ಲಿ ನಿಟ್ಟಿಗೆರೆ ಎಂಬಲ್ಲಿ ಸಂಬಂಧಿಕರು ಹಿಂದೆ ಬರುತ್ತಿರುವುದನ್ನು ಖಾತ್ರಿ ಮಾಡಿಕೊಂಡಿದ್ದಾರೆ. ಈ ವೇಳೆ ಪಿಸ್ತೂಲ್ ಕೈಗೆತ್ತಿಕೊಂಡು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಿನ ಬಳಿ ಬಂದು ನೋಡಿದಾಗ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಾನು ಆತ್ಮಹತ್ಯೆ ಮಾಡಿಕೊಂಡರೆ ಅನಾಥ ಶವ ಆಗಬಾರದು ಅನ್ನೋ ಕಾರಣಕ್ಕೆ ಪ್ರದೀಪ್ ಇಷ್ಟೇಲ್ಲಾ ಸರ್ಕಸ್ ಮಾಡಿದ್ದರು.
ಇದನ್ನೂ ಓದಿ: ಶಾಸಕ ಅರವಿಂದ ಲಿಂಬಾವಳಿಯನ್ನೂ ಪೊಲೀಸರು ವಿಚಾರಣೆ ಮಾಡ್ತಾರಂತೆ, ಉದ್ಯಮಿ ಪ್ರದೀಪ್ ಅತ್ಮಹತ್ಯೆಗೆ 6 ಜನರು ಕಾರಣ
ಪ್ರದೀಪ್ ಆತ್ಮಹತ್ಯೆ ಬಳಿಕ ಡೆತ್ನೋಟ್ನಲ್ಲಿ ಶಾಸಕರ ಹೆಸರು ಉಲ್ಲೇಖಿಸಿರುವುದು ತಿಳಿದ ನಂತರ ಆ ಹೆಸರನ್ನು ಅಳಿಸಿಹಾಕಲು ಪೊಲೀಸರಿಗೆ ಹಲವು ಒತ್ತಡದ ಕರೆಗಳು ಬಂದಿದ್ದವು. ಶಾಸಕರ ಹೆಸರನ್ನು ತೆಗೆಯುವಂತೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳಿಂದಲೇ ಕರೆಗಳು ಬಂದಿವೆ. ಆದರೆ ಅಷ್ಟೋತ್ತಿಗೆ ಆಗಲೇ ಕಗ್ಗಲೀಪುರ ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈಗಲೇ ಶುರುವಾಗಿದ್ದು ಅಸಲಿ ಡ್ರಾಮ. ದೂರು ಕೊಟ್ಟಿದ್ದ ಪ್ರದೀಪ್ ಪತ್ನಿ ನಮಿತಾ ನಂತರ ದೂರು ವಾಪಸ್ಸು ಪಡೆಯುವುದಾಗಿ ಹೇಳಿಕೆ ನೀಡಿದ್ದಾರೆ. ದೂರು ಕೊಟ್ಟ ಒಂದೇ ಗಂಟೆಯಲ್ಲಿ ಪ್ರದೀಪ್ ಪತ್ನಿ ನಮಿತಾ ಹಿಂದೇಟು ಹಾಕಿದ್ದಾರೆ.
ಪತಿಯ ಆತ್ಮಹತ್ಯೆ ಬಗ್ಗೆ ದೂರು ನೀಡಿ ಬಳಿಕ ಯಾಕೆ ವಾಪಸ್ ಪಡೆಯುತ್ತೇನೆ ಅಂದರು, ಯಾರಾದರೂ ಒತ್ತಡ ಹಾಕಿದರೇ?ಸ್ವಂತ ಗಂಡನನ್ನು ಕಳೆದುಕೊಂಡು ದೂರು ಬೇಡ ಅಂದಿದ್ದು ಯಾಕೆ ಎಂಬ ಅನುಮಾನ ಪೊಲೀಸರಲ್ಲೂ ಹುಟ್ಟಿಕೊಂಡಿದೆ. ಹೀಗಾಗಿ ಆರೋಪಿಗಳ ಮೊಬೈಲ್ ನಂಬರ್ ಜೊತೆಗೆ ನಮಿತಾ ನಂಬರ್ನ ಸಿಡಿಆರ್ ಪರಿಶೀಲನೆ ನಡೆಸಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ಇಂದು ಕಗ್ಗಲೀಪುರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಐವರು ಸ್ನೇಹಿತರಿಗೂ ನೊಟೀಸ್ ನೀಡುವ ಸಾಧ್ಯತೆ ಇದೆ.
ತನ್ನ ಐವರು ಸ್ನೇಹಿತರ ಜೊತೆಗೂಡಿ 2.25 ಕೋಟಿ ಬಂಡವಾಳ ಹಾಕಿ 2017-18 ರಲ್ಲಿ ಬೆಳ್ಳಂದೂರಿನಲ್ಲಿ ಓಪೋಸ್ ಅನ್ನೋ ಪಬ್ ತೆರೆಸಿದ್ದರು. ಓಪೋಸ್ ಪಬ್ ತೆರೆಯುವಾಗ ಗನ್ ಸೈಲೆನ್ಸ್ಗಾಗಿ 2018 ರಲ್ಲಿ ಗನ್ ಸೈಲೆನ್ಸ್ಗೆ ಪ್ರದೀಪ್ ಅರ್ಜಿ ಹಾಕಿದ್ದಾರೆ. ಉದ್ಯಮಿ ಆಗಿದ್ದ ಕಾರಣಕ್ಕೆ ವ್ಯವಹಾರ ನಿಮಿತ್ತವಾಗಿ ಓಡಾಡುತ್ತಾ ಇರುತ್ತೇನೆ. ಹೀಗಾಗಿ ಗನ್ ಲೈಸನ್ಸ್ ಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ. 2018 ರಿಂದ ಪ್ರತಿ ವರ್ಷವೂ ಗನ್ ಅನ್ನು ಪ್ರದೀಪ್ ರಿನಿವಲ್ ಮಾಡಿಸುತ್ತಿದ್ದರು. ಕೊರೋನಾದಿಂದಾಗಿ 2019 ರಲ್ಲಿ ಪಬ್ ಕ್ಲೋಸ್ ಆಗಿದ್ದು ಇದುವರೆಗೂ ಓಪನ್ ಆಗಿಲ್ಲ. 2022 ರಲ್ಲಿಯೂ ಗನ್ ಅನ್ನು ರಿನಿವಲ್ ಮಾಡಿಕೊಂಡಿಸಿಕೊಂಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ