Pradeep Suicide: ಆತ್ಮಹತ್ಯೆಗೆ ಶರಣಾದ ಪ್ರದೀಪ್ ಪಕ್ಷದ ಕಾರ್ಯಕರ್ತನೇ, ತನಿಖೆಗೆ ಸಹಕರಿಸ್ತೇನೆ: ಘಟನೆ ಬಗ್ಗೆ ಲಿಂಬಾವಳಿ ಸ್ಪಷ್ಟನೆ
ಉದ್ಯಮಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಹೆಸರು ಕೇಳಿಬಂದಿದ್ದು, ಈ ಕುರಿತಾಗಿ ಇಂದು(ಜ.1) ಬೆಂಗಳೂರಿನಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
ಬೆಂಗಳೂರು: ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ (Pradeep Suicide) ಮಾಡಿಕೊಂಡ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ (Aravind Limbavali) ವಿರುದ್ಧ ಎಫ್ಐಆರ್ (FIR) ದಾಖಲು ಮಾಡಲಾಗಿದೆ. ಈ ವಿಚಾರವಾಗಿ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಲು ಬೆಂಗಳೂರಿನಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಸುದ್ದಿಗೋಷ್ಠಿ ಮಾಡಿದ್ದು, ಆತ್ಮಹತ್ಯೆಗೆ ಶರಣಾದ ಪ್ರದೀಪ್ ನಮ್ಮ ಕಾರ್ಯಕರ್ತನೇ. ಆತನ ಆತ್ಮಕ್ಕೆ ಶಾಂತಿ ಸಿಗಲಿ ಎಂದರು. ಚುನಾವಣೆಯಲ್ಲಿ ಸೋಶಿಯಲ್ ಮೀಡಿಯಾದ ಗುತ್ತಿಗೆ ತೆಗೆದುಕೊಂಡಿದ್ದ. ಪ್ರದೀಪ್ ವಾರ್ಡ್ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದ. ಜೂನ್, ಜುಲೈನಲ್ಲಿ ನಮ್ಮ ಪಕ್ಷದ ಕಚೇರಿಗೆ ಬಂದಿದ್ದ. ಜನತಾ ದರ್ಶನದ ವೇಳೆ ನನ್ನನ್ನು ಭೇಟಿಯಾಗಿದ್ದು ನಿಜ. ನನಗೆ ಸಮಸ್ಯೆಯಾಗಿದೆ ಎಂದು ನನ್ನ ಬಳಿ ಹೇಳಿದ್ದ. ಆತ ನೀಡಿದ್ದ ಸಂಖ್ಯೆಗೆ ಫೋನ್‌ಗೆ ಮಾಡಿ ಹಣ ನೀಡುವಂತೆ ಹೇಳಿದ್ದೆ. ಕೊರೊನಾ ಹಿನ್ನೆಲೆ ಸ್ವಲ್ಪ ಸಮಯ ನೀಡುವಂತೆ ಕೂಡ ಹೇಳಿದ್ದೆ. ಬಳಿಕವೂ ಫೋನ್ ಮಾಡಿ ಕೂಡಲೇ ಹಣ ನೀಡುವಂತೆ ಹೇಳಿದ್ದೆ. ಪರಸ್ಪರ ಕುಳಿತು ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದೆ ಎಂದು ಹೇಳಿದರು.
ಕೌಟುಂಬಿಕ ಕಲಹ ಬಗ್ಗೆಯೂ ನನಗೆ ಮಾಹಿತಿ ನೀಡಿದ್ದ
ಬಳಿಕ ಭೂಮಿ ಪೂಜೆಯಲ್ಲಿ ಆತ ನನ್ನನ್ನು ಭೇಟಿಯಾಗಿದ್ದ. ಆಗ ಸಮಸ್ಯೆ ಬಗೆಹರಿದಿದೆ ಎಂದು ನನಗೆ ಥ್ಯಾಂಕ್ಸ್ ಸಹ ಹೇಳಿದ್ದ. ನಂತರ ಕೌಟುಂಬಿಕ ಕಲಹ ಬಗ್ಗೆಯೂ ನನಗೆ ಮಾಹಿತಿ ನೀಡಿದ್ದ. ಬೆಳ್ಳಂದೂರು ಠಾಣೆಗೆ ಪತ್ನಿ ದೂರು ನೀಡಿದ ಬಗ್ಗೆ ನನ್ನ ಬಳಿ ಹೇಳಿದ್ದ. ಕೂಡಲೇ ಇನ್ಸ್‌ಪೆಕ್ಟರ್‌ಗೆ ಫೋನ್ ಮಾಡಿ ಮಾಹಿತಿ ಪಡೆದಿದ್ದೆ. ಪತ್ನಿ ಒಪ್ಪಿದ್ರೆ ಸಮಸ್ಯೆ ಬಗೆಹರಿಸುವಂತೆ ಇನ್ಸ್‌ಪೆಕ್ಟರ್‌ಗೆ ಹೇಳಿದ್ದೆ. ಕೌಟುಂಬಿಕ ಕಲಹದ ಪ್ರಕರಣವನ್ನು ರಾಜಿ ಮಾಡಿಸಿದ್ದು ನಿಜ. ಈ 3 ಘಟನೆಗಳನ್ನು ಹೊರತುಪಡಿಸಿ ಮತ್ತೆ ಭೇಟಿಯಾಗಿರಲಿಲ್ಲ. ಸಮಸ್ಯೆ ಹೇಳಿಕೊಂಡು ಜನಪ್ರತಿನಿಧಿಗಳ ಬಳಿ ಬರುವುದು ಸಹಜ. ಆದ್ರೆ ಪ್ರದೀಪ್ ಆತ್ಮಹತ್ಯೆ ಹಂತಕ್ಕೆ ಹೋಗಿದ್ದು ವಿಷಾದನೀಯ ಎಂದರು.
ಇದನ್ನೂ ಓದಿ: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಎಫ್ಐಆರ್
ಡೆತ್‌ನೋಟ್‌ನಲ್ಲಿ ನನ್ನ ಹೆಸರು ಉಲ್ಲೇಖ
ಪ್ರದೀಪ್ ಡೆತ್‌ನೋಟ್‌ನಲ್ಲಿ ನನ್ನ ಹೆಸರು ಉಲ್ಲೇಖಿಸಿದ್ದಾರೆ. ಪ್ರಕರಣದ ತನಿಖೆಗೆ ನಾನು ಸಂಪೂರ್ಣ ಸಹಕರಿಸುತ್ತೇನೆ. ಇಂತಹ ವಿಚಾರದಲ್ಲಿ ಸಹಾಯ ಮಾಡುವಾಗ ಎಚ್ಚರಿಕೆಯಿಂದ ಇರಿ. ಜನಪ್ರತಿನಿಧಿಗಳಿಗೆ ನಾನು ಸಲಹೆ ನೀಡುತ್ತೇನೆ. ಅನ್ಯಾಯವಾಗಿದೆ ಎಂದು ಯಾರೇ ಬಂದ್ರೂ ಸಹಾಯ ಮಾಡುತ್ತೇನೆ. ಇನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಉಳಿದ ಆರೋಪಿಗಳ ಪರಿಚಯ ಕೂಡ ಇದೆ. ನಾನು ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿಲ್ಲ, ಕೇವಲ ಫೋನ್‌ನಲ್ಲಿ ಚರ್ಚೆ ಮಾಡಿದ್ದೇನೆ. ಸೆಟಲ್ ಮಾಡಿಕೊಳ್ಳಿ ಎಂದು ಒತ್ತಡ ಹಾಕಿದ್ದು ನಿಜ.
ಸೂಕ್ತ ತನಿಖೆ ನಡೆಯಬಹುದೆಂದು ನನ್ನ ಹೆಸರು ಉಲ್ಲೇಖಿಸಿರಬಹುದು. ಕೌಟುಂಬಿಕ ಕಲಹ ವಿಚಾರದಲ್ಲಿ ಒಮ್ಮೆ ಮಧ್ಯರಾತ್ರಿ ಫೋನ್ ಮಾಡಿದ್ರು. ಮಧ್ಯರಾತ್ರಿಯಲ್ಲೂ ನಾನು ಪ್ರದೀಪ್‌ಗೆ ಸಹಾಯ ಮಾಡಿದ್ದೇನೆ. ಈ ಪ್ರಕರಣದಲ್ಲಿ ನನ್ನ ಹೆಸರು ಸೇರಿಸಿದ್ದಕ್ಕೆ ಹೆಚ್ಚು ಮಹತ್ವ ಸಿಕ್ಕಿದೆ. ಸಂಧಾನದ ಹೆಸರಿನಲ್ಲಿ ನನಗೆ ಹಣ ಕೊಟ್ಟಿದ್ದಾರೆ ಎಂಬುದು ಸುಳ್ಳು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ರಾಜದ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:30 pm, Mon, 2 January 23