ಕ್ವಾರಿಯಲ್ಲಿ ಬಿದ್ದಿದ್ದ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್; ಎರಡು ದಿನಗಳ ಹುಡುಕಾಟದ ಬಳಿಕ ಶವವಾಗಿ ಪತ್ತೆ
ಬೆಂಗಳೂರಿನ ಜಿಗಣಿ ಸಮೀಪದ ಯಲ್ಲಮ್ಮನ ದೊಡ್ಡಿ ಬಳಿ ಕಲ್ಲು ಕ್ವಾರಿಯ ನೀರಿನಲ್ಲಿ ಮುಳುಗಿ 30 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಗಣೇಶ್ ಆಂಜನೇಯ ವಿನಯ್ ದುರಂತಾಂತ್ಯ ಕಂಡಿದ್ದಾರೆ. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ತೆರಳಿದ್ದಾಗ ಈ ಘಟನೆ ಸಂಭವಿಸಿದೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಹಾಗೂ ಈಶ್ವರ್ ಮಲ್ಪೆ ತಂಡ ಸತತ 2 ದಿನಗಳ ಶೋಧ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದೆ.

ಮುಖ್ಯಾಂಶಗಳು
- ಜಿಗಣಿ ಬಳಿ ಕ್ವಾರಿ ನೀರಿನಲ್ಲಿ ಮುಳುಗಿ ಟೆಕ್ಕಿ ದುರಂತ ಸಾವು.
- ಇನ್‌ಸ್ಟಾಗ್ರಾಮ್ ಗ್ರೂಪ್ ಮೂಲಕ ಟ್ರೆಕ್ಕಿಂಗ್ ಯೋಜನೆ ರೂಪಿಸಿದ್ದ 8 ಮಂದಿ.
- ಎರಡು ದಿನಗಳ ಸುದೀರ್ಘ ಕಾರ್ಯಾಚರಣೆ ಬಳಿಕ ಮೃತದೇಹ ಪತ್ತೆ ಮಾಡಿದ ತಂಡ.
ಬೆಂಗಳೂರು, ಅಕ್ಟೋಬರ್ 05: ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು ರಜೆಯ ದಿನದಂದು ಸ್ನೇಹಿತರೊಂದಿಗೆ ಟ್ರೆಕ್ಕಿಂಗ್‌ಗೆ ತೆರಳಿದ್ದಾಗ ದುರಂತ ಅಂತ್ಯ ಕಂಡ ಘಟನೆ ಜಿಗಣಿ ಸಮೀಪದ ಯಲ್ಲಮ್ಮನ ದೊಡ್ಡಿ ಬಳಿ ನಡೆದಿದೆ. ಮೃತ ಸಾಫ್ಟ್‌ವೇರ್ ಎಂಜಿನಿಯರ್ ಅನ್ನು ಆಂಧ್ರಪ್ರದೇಶದ ವಿಜಯವಾಡ ಮೂಲದ, ಪ್ರಸ್ತುತ ಬೆಂಗಳೂರಿನ ಹಲಸೂರಿನಲ್ಲಿ ವಾಸಿಸುತ್ತಿದ್ದ ಗಣೇಶ್ ಆಂಜನೇಯ ವಿನಯ್ (30) ಎಂದು ಗುರುತಿಸಲಾಗಿದೆ.
ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದವರ ಜೊತೆ ಟ್ರೆಕ್ಕಿಂಗ್
ಐಐಟಿ ದೆಹಲಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದ ವಿನಯ್, ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಯುಎಕ್ಸ್ (UX) ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅಕ್ಟೋಬರ್ 2ರ ಗಾಂಧಿ ಜಯಂತಿ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಮ್ ಗ್ರೂಪ್ ಮೂಲಕ ಪರಿಚಯವಾದ 8 ಜನರ ತಂಡದೊಂದಿಗೆ ಇವರು ಟ್ರೆಕ್ಕಿಂಗ್‌ಗೆ ತೆರಳಿದ್ದರು. ಈ ತಂಡದಲ್ಲಿ ವಿನಯ್ ಅವರ ಭಾವಿ ಪತ್ನಿ (ಪಶುವೈದ್ಯೆ) ಕೂಡ ಸೇರಿದ್ದರು. ಟ್ರೆಕ್ಕಿಂಗ್ ಮುಗಿಸಿ ವಾಪಸಾಗುವಾಗ ಯಲ್ಲಮ್ಮನ ದೊಡ್ಡಿ ಬಳಿ ಇರುವ ಕೈಬಿಟ್ಟ ಕಲ್ಲು ಕ್ವಾರಿಯ ನೀರಿನಲ್ಲಿ ಈಜಲು ಇಡೀ ತಂಡ ಧುಮುಕಿತ್ತು.
ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದ ವಿನಯ್
ಸುಮಾರು ಒಂದೂವರೆ ಗಂಟೆಗಳ ಕಾಲ ಈಜಾಡಿದ ಬಳಿಕ, ಸಂಜೆ 5:30 ರ ಸುಮಾರಿಗೆ ವಿನಯ್ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದರು. ಸ್ನೇಹಿತರು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗದಿದ್ದಾಗ ಜಿಗಣಿ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಎಸ್‌ಡಿಆರ್‌ಎಫ್ (SDRF), ಎನ್‌ಡಿಆರ್‌ಎಫ್ (NDRF) ಪಡೆಗಳು, ಸ್ಥಳೀಯ ಈಜುಗಾರರು ಹಾಗೂ ಮಲ್ಪೆಯ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಮತ್ತು ಅವರ ತಂಡ ಸುದೀರ್ಘ ಕಾರ್ಯಾಚರಣೆ ನಡೆಸಿತು. ಸತತ ಎರಡು ದಿನಗಳ ಸುದೀರ್ಘ ಶೋಧದ ಬಳಿಕ ಅಕ್ಟೋಬರ್ 4ರ ಭಾನುವಾರ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ವಿನಯ್ ಅವರ ಮೃತದೇಹ ಪತ್ತೆಯಾಗಿದೆ. ಮೃತರ ಸಹೋದರ ನೀಡಿದ ದೂರಿನನ್ವಯ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:08 am, Mon, 5 October 26



